Advertisement
“ಚೆನ್ನಾಗಿದ್ದರೆ ಸಪೋರ್ಟ್ ಮಾಡಿ, ಚೆನ್ನಾಗಿಲ್ಲ ಅಂದರೆ, ಇನ್ನಷ್ಟು ಸಿನಿಮಾ ಮಾಡ್ತೀವಿ. ಒಂದಷ್ಟು ಪ್ರಯೋಗ ಮಾಡ್ತಾ ಹೋಗ್ತಿವಿ…’
Related Articles
Advertisement
ಅಂದಹಾಗೆ, ಈ ಚಿತ್ರದಲ್ಲಿ ಪುನೀತ್ ಕೂಡ ಹಾಡೊಂದಕ್ಕೆ ಸ್ಟೆಪ್ ಹಾಕಿದ್ದಾರೆ. ಆ ಬಗ್ಗೆ ಹೇಳುವ ಅವರು, “ಚಿತ್ರದ ಹಾಡೊಂದರಲ್ಲಿ ನಾನು ಹೆಜ್ಜೆ ಹಾಕಿದ್ದೇನೆ. ಆ ಸಾಂಗ್ ಅನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದರೆ ಹೇಗಿರುತ್ತೆ ಎಂಬ ಐಡಿಯಾ ಬಂತು. ಅವರು ಶಿವಣ್ಣ, ರಾಘಣ್ಣ ಚಿತ್ರಗಳಿಗೆ ಹಾಡಿದ್ದಾರೆ. ನಾನೂ ಕೂಡ “ಬೆಟ್ಟದ ದಾರಿ’ ಚಿತ್ರದಲ್ಲಿ ಅವರ ಜೊತೆ ಹಾಡಿದ್ದೇನೆ. ಅಪ್ಪಾಜಿಯವರು ಅವರ ಚಿತ್ರಕ್ಕೆ ಹಾಡಿದ್ದಾರೆ. ಅಂತಹ ಲೆಜೆಂಡ್ ಹಾಡಿದರೆ ಚೆನ್ನಾಗಿರುತ್ತೆ ಅಂದುಕೊಂಡು ಒಂದು ಸಾಂಗ್ ಹಾಡಿಸಿದ್ದೇವೆ. ಎಲ್ಲರೂ ಈ ಚಿತ್ರ ನೋಡಿ. ಚೆನ್ನಾಗಿದ್ದರೆ ಸಪೋರ್ಟ್ ಮಾಡಿ, ಚೆನ್ನಾಗಿಲ್ಲ ಅಂದರೆ, ಇನ್ನಷ್ಟು ಸಿನಿಮಾ ಮಾಡ್ತೀವಿ. ಮತ್ತಷ್ಟು ಪ್ರಯೋಗ ಮಾಡ್ತಾ ಹೋಗ್ತಿವಿ’ ಅಂತ ಹೇಳಿ ಮಾತು ಮುಗಿಸಿದರು ಪುನೀತ್.
ಚಿತ್ರದಲ್ಲಿ ಸಾಧುಕೋಕಿಲ ವಿಶೇಷ ಪಾತ್ರ ಮಾಡಿದ್ದಾರೆ. ಅವರ ಪ್ರಕಾರ, ಇಲ್ಲಿ ಎಂದಿನ ಸಾಧು ಕೋಕಿಲ ಇಲ್ಲವಂತೆ. ಹೊಸ ಸಾಧು ಕೋಕಿಲ ಅವರನ್ನು ಜನರು ಕಾಣುತ್ತಾರೆ ಎಂಬುದು ಅವರ ಅಭಿಪ್ರಾಯ.”ಜನರು ಈಗ ಹೊಸತನ್ನು ಬಯಸುತ್ತಿದ್ದಾರೆ. ಮಾಡಿದ್ದನ್ನೇ ಮಾಡಿದರೆ ಅವರಿಗೂ ಅದು ರುಚಿಸೋದಿಲ್ಲ. ಹೊಸದೇನಿದೆ ಎನ್ನುವ ಜನರಿಗೆ “ಮಾಯಬಜಾರ್’ ಉದಾಹರಣೆ. ಇಲ್ಲಿ ಎಲ್ಲವೂ ಹೊಸದಾಗಿದೆ. ಹೊಸ ತರಹದ ಕಥೆ, ಹೊಸ ಸ್ಕ್ರೀನ್ ಪ್ಲೇ ಮೂಲಕ ಹೊಸತನ್ನೇ ಹೇಳಹೊರಟಿದ್ದಾರೆ. ಇಲ್ಲಿ ಹಳೆಯ ಸಾಧು ಇರಲ್ಲ, ಹೊಸ ಸಾಧು ನೋಡಬಹುದು. ನಗಿಸ್ತಾನಾ, ಅಳಿಸ್ತಾನಾ ಅನ್ನೋದನ್ನು ಚಿತ್ರದಲ್ಲೆ ನೋಡಬೇಕು’ ಎಂಬುದು ಸಾಧು ಮಾತು.
ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಅವರು ಮೊದಲು ಗೋವಿಂದು ಬಳಿ ಕಥೆ ಹೇಳಿದಾಗ, ಅವರು ಪುನೀತ್ ಬಳಿ ಕರೆದೊಯ್ದರಂತೆ. ಅವರೂ ಕೇಳಿದ ಕೂಡಲೇ, ಗ್ರೀನ್‌ಸಿಗ್ನಲ್ ಕೊಟ್ಟರಂತೆ. ಹಾಗಾಗಿ, “ಮಾಯಬಜಾರ್’ ಈಗ ಬಿಡುಗಡೆವರೆಗೂ ಬಂದಿದೆ. ಕಥೆಯ ಒಂದೇ ಒಂದು ಎಳೆ ಹೇಳುವ ನಿರ್ದೇಶಕ ರಾಧಾ, “ಇಲ್ಲಿ ಲೀಡ್ ಅಂತ ಯಾವುದೂ ಇಲ್ಲ. ಪ್ರತಿ ಪಾತ್ರಗಳಿಗೆ ಆದ್ಯತೆ ಇದೆ. ಜಾಸ್ತಿ ನಗಿಸುತ್ತೆ. ಅಲ್ಲಲ್ಲಿ ಅಳಿಸುತ್ತೆ’ ಅದೇ ಕಥೆ’ ಎಂದರು ರಾಧಾ.
ರಾಜ್ ಬಿ.ಶೆಟ್ಟಿ ಅವರಿಗೆ, ಪಿಆರ್‌ಕೆ ಬ್ಯಾನರ್‌ನ ಚಿತ್ರ ಅಂದಾಗ, ಕ್ಷಣ ನಂಬಲಾಗಲಿಲ್ಲವಂತೆ. ನಿರ್ದೇಶಕ ರಾಧಾ ಕಥೆ ಹೇಳಿದ್ದನ್ನು ಕೇಳಿ, ಹಿಂದೆ ಮುಂದೆ ಯೋಚಿಸದೆಯೇ ಒಪ್ಪಿದರಂತೆ. ಆ ಬಗ್ಗೆ ಹೇಳಿಕೊಳ್ಳುವ ರಾಜ್, ” ಇಲ್ಲಿ ಪ್ರಯೋಗ ಇದ್ದರೂ, ಆ ಪ್ರಯೋಗದ ಉದ್ದೇಶ ನೋಡುಗರನ್ನು ಇನ್ನಷ್ಟು ಉತ್ಸಾಹಗೊಳಿಸುವ ಕೆಲಸ ಆಗಿದೆ. ಪ್ರತಿಯೊಬ್ಬ ಕಲಾವಿದನಿಗೂ ಇಲ್ಲಿ ಹೊಸದೇನೋ ಕಲಿಸ್ತಾ ಇದೆ ಎಂಬ ಫೀಲ್ ಬಂತು. ಒಳ್ಳೆಯ ಉದ್ದೇಶದೊಂದಿಗೆ ಹೊಸ ಪ್ರಯತ್ನದ ಸಿನಿಮಾ ಮಾಡಿದ್ದೇವೆ. ಮನರಂಜನೆಗಂತೂ ಕೊರತೆ ಇಲ್ಲ. ನಾನಿಲ್ಲಿ ದೊಡ್ಡದ್ದಾಗಿ ಬೆಳೆಯಬೇಕೆಂಬ ಆಶಯ ಹೊಂದಿರುವ ಪಾತ್ರ ಮಾಡಿದ್ದೇನೆ. ಪ್ರತಿ ಪಾತ್ರಗಳೂ ಬೆಳೆಯಬೇಕು, ಸಾಧಿಸಬೇಕು ಎಂದು ಹೋರಾಡುವಂತಹ ಕಥೆ ಇಲ್ಲಿದೆ. ನಾನು ಬೆಳೆಯೋಕೆ ಏನೆಲ್ಲಾ ಹಾದಿ ಹಿಡಿಯುತ್ತೇನೆ ಎಂಬುದು ಕಥೆ’ ಎಂದರು ರಾಜ್ ಬಿ.ಶೆಟ್ಟಿ.
ಚೈತ್ರಾ ಅವರಿಗೆ ಇದು ಮೊದಲ ಚಿತ್ರ. ಅವರಿಲ್ಲಿ ಕಾಲೇಜ್‌ಗೆ ಹೋಗುವ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಜಗತ್ತು ಏನು ಅನ್ನೋದು ಗೊತ್ತಿರದ ಹುಡುಗಿ, ಹಲವು ಮನಸ್ಸುಗಳ ಮಧ್ಯೆ ಹೇಗಿರುತ್ತಾಳೆ ಎಂಬುದೇ ಕಥೆ’ ಎಂದರು ಚೈತ್ರಾ.
ಮಿಥುನ್ ಮುಕುಂದನ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. “ಪ್ರತಿ ಹಾಡಲ್ಲೂ ವಿಭಿನ್ನ ಸೌಂಡ್ ಇದೆ. ಸಿಕ್ಕ ಅವಕಾಶ ಚೆನ್ನಾಗಿ ಬಳಸಿಕೊಂಡ ತೃಪ್ತಿ ಇದೆ’ ಎಂಬುದು ಮಿಥುನ್ ಮಾತು. ಮಾತುಕತೆಯ ಕೊನೆಯಲ್ಲಿ ಬಂದ ವಸಿಷ್ಠ ಸಿಂಹ, “ಇಷ್ಟಪಟ್ಟು ಮಾಡಿದ ಪಾತ್ರವಿದು. ಫ್ರೆಶ್ ಎನಿಸುವ ಪಾತ್ರ ಇಲ್ಲಿದೆ. ಹ್ಯೂಮರಸ್ ಅಗಿದೆ’ ಅಂದರು. ನಿರ್ಮಾಪಕಿ ಅಶ್ವಿನಿ ಪುನೀತ್‌ರಾಜಕುಮಾರ್, ಗೋವಿಂದು, ಅಭಿಷೇಕ್ ಇದ್ದರು.
ವಿಜಯ್ ಭರಮಸಾಗರ