ಬೈಂದೂರು: ಕೆಲವು ವ್ಯಕ್ತಿಗಳಲ್ಲಿ ಹಣವಿರುವುದಿಲ್ಲ. ಆದರೆ ಹೃದಯ ಶ್ರೀಮಂತಿಕೆಯಿರುತ್ತದೆ. ಇನ್ನು ಕೆಲವು ವ್ಯಕ್ತಿಗಳಲ್ಲಿ ಆಸಕ್ತಿಗಳಿರುತ್ತವೆ, ಅವಕಾಶಗಳಿರುವುದಿಲ್ಲ. ಆದರೆ ಇಲ್ಲೊಬ್ಬ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ವ್ಯಕ್ತಿ ತಿರುಪತಿ ತೀರ್ಥಯಾತ್ರೆಗೆ ತೆರಳಿ ಒಂದು ತಿಂಗಳಿಂದ ಕಾಣೆಯಾದ ವ್ಯಕ್ತಿಯೊಬ್ಬನನ್ನು ಗುರುತಿಸಿ, ಮನೆಗೆ ಕರೆತಂದು ಕುಟುಂಬದ ಕಣ್ಣೀರ ಸಂಕಷ್ಟವನ್ನು ಹೋಗಲಾಡಿಸಿದ ಘಟನೆ ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಹೊಸೂರು ಎಂಬಲ್ಲಿ ನಡೆದಿದೆ.
ಘಟನೆಯ ವಿವರ: ಕರಾವಳಿ ಭಾಗ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹತ್ತಾರು ವರ್ಷಗಳ ಬಳಿಕ ಕುಟುಂಬದ ಸದಸ್ಯರೆಲ್ಲರು ಸೇರಿ ತೀರ್ಥಯಾತ್ರೆಗೆ ತೆರಳುವ ಸಂಪ್ರದಾಯ ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿದೆ. ಅದರಲ್ಲೂ ತಿರುಪತಿ ತೀರ್ಥಯಾತ್ರೆ ಎಂದಾಗ ಹಲವಾರು ಸಾಂಪ್ರದಾಯಿಕ ನಿಯಮಗಳ ಜತೆಗೆ ಜೀವನದ ಪುಣ್ಯಯಾತ್ರೆಯಾಗಿದೆ. ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಭಾಗವಾದ ಹೊಸೂರು ಮೂಲದ ಶೇಷು ಮರಾಠಿ ಕುಟುಂಬದ ಐವತ್ತಕ್ಕೂ ಅಧಿಕ ಸದಸ್ಯರು ಧರ್ಮಸ್ಥಳ, ಸುಬ್ರಹ್ಮಣ್ಯ, ತಿರುಪತಿ, ಮಂತ್ರಾಲಯ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೀರ್ಥಯಾತ್ರೆಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಶೇಷ ಮರಾಠಿ ಎನ್ನುವ ವ್ಯಕ್ತಿ ತಿರುಪತಿಯಲ್ಲಿ ಕಾಣೆ ಯಾಗಿದ್ದರು. ಕುಟುಂಬದ ಸದಸ್ಯರು ದಿನವಿಡಿ ಹುಡುಕಿ ಬಳಿಕ ಊರಿಗೆ ವಾಪಸ್ಸಾಗಿದ್ದರು. ತೀರ್ಥಯಾತ್ರೆಯ ಸಂಪ್ರದಾಯ ಮುಗಿದ ಬಳಿಕ ಊರಿನ ಕೆಲವು ಯುವಕರು ಪುನಃ ತಿರುಪತಿಗೆ ತೆರಳಿ ಒಂದು ವಾರದವರೆಗೂ ಹುಡುಕಾಟ ನಡೆಸಿದ್ದರು. ಆದರೆ ಕಾಣೆಯಾಗಿರುವ ಶೇಷ ಮರಾಠಿ ಪತ್ತೆಯಾಗಿರಲಿಲ್ಲ.ಬಳಿಕ ಆರಕ್ಷಕ ಠಾಣೆ ಹಾಗೂ ತಿರುಪತಿ ದೇವಸ್ಥಾನ ಸಮಿತಿಯಲ್ಲಿ ದೂರು ದಾಖಲಿಸಿ ವಾಪಸ್ಸಾಗಿದ್ದರು.
ಶಿವಮೊಗ್ಗದಲ್ಲಿ ಪತ್ತೆ: ಅಕ್ಷರ ತಿಳಿಯದ ಈತನಿಗೆ ಮರಾಠಿ ಹೊರತುಪಡಿಸಿ ಇತರ ಭಾಷೆ ತಿಳಿದಿರಲಿಲ್ಲ. ಶೇಷ ಮರಾಠಿ ಚಪ್ಪಲಿ ಅಂಗಡಿಗೆ ತೆರಳಿದ್ದು, ದಾರಿ ತಿಳಿಯದೇ ದಿಕ್ಕುಪಾಲಾಗಿದ್ದನು. ಕೈಯಲ್ಲಿ ಹಣ ಇಲ್ಲದ ಕಾರಣ ನಾಲ್ಕು ದಿವಸ ಊಟ ಮಾಡಿರಲಿಲ್ಲ. ಬಳಿಕ ರೈಲ್ವೆ ನಿಲ್ದಾಣದಲ್ಲಿ ಯಾರೋ ಶಿವಮೊಗ್ಗ ರೈಲು ಹತ್ತಿಸಿದ್ದಾರೆ.ಶಿವಮೊಗ್ಗದಿಂದ ಬಳಿಕ ಊರಿನ ದಾರಿ ತಿಳಿಯದೇ ಪುನಃ ಬೆಂಗಳೂರಿಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಸ್ಥಳೀಯರೊಬ್ಬರು ತೋಟದಲ್ಲಿ ಕೆಲಸ ನೀಡಿದ್ದಾರೆ. ಆದರೆ ವಾರ ಕಳೆದರೂ ಸಂಬಳ ನೀಡಿರಲಿಲ್ಲ.
ಒಂದೆಡೆ ಊರಿನ ದಾರಿ ಸಿಗದೆ ಕಂಗಾಲಾಗಿರುವುದು ಇನ್ನೊಂದೆಡೆ ಕಾಡುತ್ತಿರುವ ಕುಟುಂಬದ ನೆನಪಿನಿಂದಾಗಿ ಮಾನಸಿಕವಾಗಿ ಜರ್ಝರಿತವಾಗಿದ್ದನು.ಇದೇ ಸಂದರ್ಭದಲ್ಲಿ ಪಕ್ಕದ ತೋಟದಲ್ಲಿ ಕೂಲಿ ಮಾಡುತ್ತಿರುವ ತೆರಿಕೆರೆಯ ಕೆ.ವಿ. ಗಂಗಾಧರಯ್ಯ ಎನ್ನುವ ವ್ಯಕ್ತಿ ಈತನ ಮಾನಸಿಕ ತೊಳಲಾಟವನ್ನು ಗಮನಿಸಿ ಮಾಹಿತಿ ಪಡೆದಿದ್ದಾರೆ. ಬಳಿಕ ಆತನಿಗೆ ಸಾಂತ್ವನ ಹೇಳುವ ಜತೆಗೆ ಅವರ ಮನೆಯಲ್ಲಿ ಉಟೋಪಚಾರ ನೀಡಿ ಸ್ವಂತ ಖರ್ಚಿನಲ್ಲಿ ಕುಂದಾಪುರ ತಾಲೂಕಿನ ಯಡ್ತರೆ ಗ್ರಾಮದ ಹೊಸೂರಿಗೆ ಕರೆತಂದು ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಾರ್ವಜನಿಕರಿಂದ ಸಮ್ಮಾನ: ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಜತೆಗೆ ದಾರಿ ತಪ್ಪಿದ ಶೇಷು ಮರಾಠಿಯನ್ನು ಮನೆಗೆ ತಲುಪಿಸಿದ ಗಂಗಾಧರಯ್ಯ ಅವರ ಸೇವೆಯಿಂದ ಒಂದು ತಿಂಗಳಿಂದ ದುಃಖದಲ್ಲಿದ್ದ ಕುಟುಂಬಕ್ಕೆ ದೇವರೆ ತಲುಪಿಸಿದ ಭಾವನೆ ಮೂಡಿಸಿದೆ. ಇಂತಹ ಮಾನವೀಯ ಕಾರ್ಯ ಮಾಡಿದ ತೆರಿಕೆರೆಯ ಗಂಗಾಧರಯ್ಯ ಅವರನ್ನು ಶಿರೂರು ಜೇಸಿ ಮುಂದಾಳತ್ವದಲ್ಲಿ ಸಾರ್ವಜನಿಕರು ಸಮ್ಮಾನಿಸಿದರು. ಹಾಗೂ ಇಂತಹ ಕಾರ್ಯ ಇತರರಿಗೂ ಮಾದರಿಯಾಗಲಿ ಎಂದು ಆಶಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಗಂಗಾಧರಯ್ಯ, ಕಷ್ಟಗಳು ಎಲ್ಲರಿಗೂ ಒಂದೆ. ಮನೆಯ ಯಜಮಾನ ಇಲ್ಲದ ಪರಿಸ್ಥಿತಿ ಹಾಗೂ ಪರಿಚಯವಿಲ್ಲದ ಊರಿನಲ್ಲಿ ಸಂಕಷ್ಟ ಎದುರಾದಾಗ ದುಃಖ ಸಹಜವಾಗಿರುತ್ತದೆ. ಓದು ಬರಹ ತಿಳಿಯದಿರುವ ಕಾರಣ ನಾನೇ ಸ್ವತಃ ಮನೆಗೆ ಕರೆತಂದಿದ್ದೇನೆ. ಕುಟುಂಬದ ಸಂತೋಷ ನೋಡಿ ಮಾಡಿದ ಕಾರ್ಯಕ್ಕೆ ಸಂತೃಪ್ತಿ ತಂದಿದೆ ಎಂದಿದ್ದಾರೆ.ನಿತ್ಯ ಜೀವನದ ಜಂಜಾಟದ ನಡುವೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವವರ ಸಂಖ್ಯೆ ವಿರಳ. ಅಂತಹದ್ದರಲ್ಲಿ ತಿರುಪತಿಯಲ್ಲಿ ಕಾಣೆಯಾದವನನ್ನು ಹುಡುಕಿ ಕರೆತಂದ ಇಂತಹ ವ್ಯಕ್ತಿಯ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದೆ.