Advertisement

ಆ್ಯಪ್‌ ಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಅಗತ್ಯ

01:37 AM Feb 06, 2023 | Team Udayavani |

ಚೀನ ಸಹಿತ ವಿದೇಶಗಳ 200ಕ್ಕೂ ಅಧಿಕ ಸಾಲ ನೀಡಿಕೆ ಮತ್ತು ಬೆಟ್ಟಿಂಗ್‌ ಆ್ಯಪ್‌ ಗಳನ್ನು ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಈ ಮೂಲಕ ದೇಶದಲ್ಲಿ ಅಮಾಯಕರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿದೆ. ವಿದೇಶಿ ಮೂಲದ ಈ ಆ್ಯಪ್‌ ಗಳಿಂದ ಜನರು ವಂಚನೆಗೊಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಶೀಲನೆಯ ಬಳಿಕ 138 ಬೆಟ್ಟಿಂಗ್‌ ಮತ್ತು 94 ಸಾಲ ನೀಡಿಕೆ ಆ್ಯಪ್‌ ಗಳನ್ನು ನಿಷೇಧಿಸುವಂತೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ನಿರ್ದೇಶ ನೀಡಿದೆ. ನಿಷೇಧಿತ ಆ್ಯಪ್‌ ಗಳನ್ನು ದೇಶದಲ್ಲಿ ಬ್ಲಾಕ್‌ ಮಾಡುವ ಪ್ರಕ್ರಿಯೆಯನ್ನು ಇಲಾಖೆ ಈಗಾಗಲೇ ಕೈಗೆತ್ತಿಕೊಂಡಿದೆ.

Advertisement

ಚೀನ ಮೂಲದ ವ್ಯಕ್ತಿಗಳಿಂದ ಹೆಚ್ಚಿನ ಆ್ಯಪ್‌ ಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಭಾರತದಲ್ಲಿ ಈ ಆ್ಯಪ್‌ ಗಳ ಕಾರ್ಯಾಚರ ಣೆಗೆ ಅನುಕೂಲವಾಗುವಂತೆ ಭಾರತೀಯ ಮೂಲದವರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುತ್ತಿರುವುದು ಗೃಹ ಇಲಾಖೆಯ ಪರಿಶೀಲನೆಯ ವೇಳೆ ದೃಢಪಟ್ಟಿದೆ. ಸಾಲ ನೀಡಿಕೆ ಆ್ಯಪ್‌ ಗಳ ವಂಚನಾ ಜಾಲಕ್ಕೆ ಸಿಲುಕಿ ಸಾಲಗಾರರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದೇಶದೆಲ್ಲೆಡೆಯಿಂದ ವರದಿಯಾಗುತ್ತಲೇ ಇವೆ. ಇದೇ ಮಾದರಿಯಲ್ಲಿ ಜೂಜು ಮತ್ತು ಬೆಟ್ಟಿಂಗ್‌ ಆ್ಯಪ್‌ ಗಳೂ ಕಾರ್ಯನಿರ್ವಹಿಸುತ್ತಿದ್ದು ಇವುಗಳ ಗೀಳಿಗೆ ತುತ್ತಾದ ಜನರು ಇದರಿಂದ ಹೊರಬರಲಾಗದೆ ಸಾಲಗಾರರಾಗಿಯೋ, ಮರ್ಯಾದೆಗೆ ಅಂಜಿಯೋ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ದೇಶದ ವಿವಿಧೆಡೆಗಳಲ್ಲಿ ನಡೆದಿವೆ.

ವಿವಿಧ ರಾಜ್ಯ ಸರಕಾರಗಳು ಮತ್ತು ಗುಪ್ತಚರ ಸಂಸ್ಥೆಗಳು ಇಂತಹ ಆ್ಯಪ್‌ ಗಳ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದವು. ಅದರಂತೆ ಕೇಂದ್ರ ಗೃಹ ಖಾತೆ ವಿದೇಶಿ ಮೂಲದ ಕೆಲವೊಂದು ನಿರ್ದಿಷ್ಟ ಆ್ಯಪ್‌ಗ್ಳನ್ನು ತೀವ್ರ ಪರಿಶೀಲನೆಗೊಳಪಡಿಸಿದಾಗ ಇವು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆಯುಂಟು ಮಾಡುತ್ತಿರುವುದು ಸಾಬೀತಾಗಿತ್ತು. ನಿಷೇಧಿತ ಆ್ಯಪ್‌ಗ್ಳಲ್ಲಿ ಬಹುತೇಕವು ಥರ್ಡ್‌ ಪಾರ್ಟಿ ಮೂಲಕ ದೇಶದಲ್ಲಿ ಕಾರ್ಯಾಚರಿಸುತ್ತಿರುವುದು ತನಿಖೆಯ ವೇಳೆ ದೃಢಪಟ್ಟಿದೆ. ಇದು ದೇಶದಲ್ಲಿ ಜಾರಿಯಲ್ಲಿರುವ ಐಟಿ ಕಾಯಿದೆಯ ಸೆಕ್ಷನ್‌ 69ರ ಸ್ಪಷ್ಟ ಉಲ್ಲಂಘನೆಯಾದ್ದರಿಂದ ಇವುಗಳನ್ನು ನಿಷೇಧಿಸುವಂತೆ ಐಟಿ ಸಚಿವಾಲಯಕ್ಕೆ ನಿರ್ದೇಶ ನೀಡಿತ್ತು.

ಎರಡು ವರ್ಷಗಳ ಹಿಂದೆಯೂ ಕೇಂದ್ರ ಸರಕಾರ ದೇಶದ ಸಮಗ್ರತೆಗೆ ಅಪಾಯ ಉಂಟುಮಾಡುವಂತಹ ಚೀನದ ಹಲವು ಆ್ಯಪ್‌ ಗಳನ್ನು ನಿಷೇಧಿಸಿತ್ತು. ಈವರೆಗೆ 200ಕ್ಕೂ ಅಧಿಕ ಆ್ಯಪ್‌ ಗಳಿಗೆ ದೇಶದಲ್ಲಿ ನಿರ್ಬಂಧ ಹೇರಲಾಗಿದೆ. ಇದೀಗ ಕೇಂದ್ರ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಶದ ಜನರನ್ನು ತನ್ನ ವಂಚನಾಜಾಲದಲ್ಲಿ ಸಿಲುಕುವಂತೆ ಮಾಡಿ ಅವರನ್ನು ಇನ್ನಿಲ್ಲದ ಸಂಕಷ್ಟಕ್ಕೆ ಗುರಿ ಮಾಡುತ್ತಿರುವ ಮತ್ತು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವ ಆ್ಯಪ್‌ಗ್ಳಿಗೆ ನಿರ್ಬಂಧ ಹೇರಿದೆ.

ಆದರೆ ಇಂತಹ ಆ್ಯಪ್‌ ಗಳು ಹೊಸಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವು­ದರಿಂದ ಈ ನಿಷೇಧದ ಪರಿಣಾಮಗಳು ತಾತ್ಕಾಲಿಕವಾಗಬಹುದೇ ವಿನಾ ಶಾಶ್ವತ ಪರಿಹಾರ ಎಂದೆನಿಸಲಾರದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ದೇಶದ ಜನರಿಗೆ ಇಂತಹ ವಂಚನೆ, ನಕಲಿ, ಅಕ್ರಮ ಆ್ಯಪ್‌ ಗಳು ಯಾವ ಮೂಲದಿಂದಲೂ ಲಭ್ಯವಾಗದಂತೆ ಕಟ್ಟುನಿಟ್ಟಿನ ಕಾನೂನು ಒಂದನ್ನು ಜಾರಿಗೆ ತರಲೇಬೇಕಿದೆ. ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಭಾರೀ ಬೆಳವಣಿಗೆಗಳಾಗು ತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಸಮಸ್ಯೆಗೆ ಸೂಕ್ತ ಪರಿಹಾರೋಪಾಯವನ್ನು ಕಂಡುಹುಡುಕುವ ಅಗತ್ಯವಿದೆ. ಪ್ರತಿಯೊಂದೂ ಆ್ಯಪ್‌ ಅನ್ನು ಅದರ ಮೂಲದಲ್ಲಿಯೇ ಜರಡಿ ಹಿಡಿದು ಅದರ ಒಳಿತು-ಕೆಡುಕುಗಳ ಬಗೆಗೆ ಪರಾಮರ್ಶೆ ನಡೆಸಿದ ಬಳಿಕವಷ್ಟೆ ಅದು ದೇಶದಲ್ಲಿ ಜನರಿಗೆ ಲಭ್ಯವಾಗುವಂತೆ ಮತ್ತು ಆ ಬಳಿಕವೂ ಈ ಆ್ಯಪ್‌ ಗಳ ಮೇಲೆ ಕಣ್ಗಾವಲು ಇರಿಸುವ ಕಾರ್ಯ ಸರಕಾರದಿಂದಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next