Advertisement

ಕಡಲ್ಕೊರೆತಕ್ಕೆ ಸಿಗದ ಶಾಶ್ವತ ತಡೆಗೋಡೆ; ಮುಂಗಾರು,ಈ ವರ್ಷವೂ ಕಲ್ಲು ಸುರಿಯುವ ಸಾಧ್ಯತೆ ಅಧಿಕ

01:25 AM Jun 01, 2024 | Team Udayavani |

ಉಡುಪಿ: ಮಳೆಗಾಲದಲ್ಲಿ ಸಂಭವಿಸಬಹು ದಾದ ಹಾನಿ ಹಾಗೂ ನೆರೆ ತೀವ್ರತೆ ಕಡಿಮೆ ಮಾಡಲು ಜಿಲ್ಲಾಡಳಿತ ಅಗತ್ಯ ಮುನ್ನೆ ಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳುತ್ತಿದೆ. ಮುಂಗಾರು ಪೂರ್ವ ಮಳೆಯೂ ಚೆನ್ನಾಗಿ ಸುರಿ ದಿದ್ದು, ಜೂನ್‌ ಮೊದಲ ವಾರ ಮುಂಗಾರು ಆಗಮನವಾಗುವ ಸಾಧ್ಯತೆಯಿದೆ. ಆದರೆ ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿ ನಡೆಸಲು ಸಲ್ಲಿಸಿದ ಪ್ರಸ್ತಾವನೆಗಳಿಗೆ ವರ್ಷ ಕಳೆದರೂ ನಯಾಪೈಸೆ ಅನುದಾನ ಬಂದಿಲ್ಲ.

Advertisement

ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು ಎಂಬ ಆಗ್ರಹ ಸ್ಥಳೀಯವಾಗಿ ವರ್ಷಗಳಿಂದ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಡಕ್‌ಫ‌ುಟ್‌ ಅಥವಾ ಸೀ ವೇವ್‌ ಬ್ರೇಕರ್‌ ತಂತ್ರಜ್ಞಾನ ಅಳವಡಿಸುವ ಬಗ್ಗೆಯೂ ಚಿಂತನೆ ನಡೆದಿತ್ತು. ಪ್ರಾಯೋಗಿಕವಾಗಿ ಮರವಂತೆ ಪ್ರದೇಶದಲ್ಲಿ ಅನುಷ್ಠಾನಕ್ಕೆ ಹಿಂದಿನ ಸರಕಾರದಲ್ಲಿ ಕ್ರಮ ಕೈಗೊಂಡಿದ್ದರೂ ಈವರೆಗೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಮಳೆಗಾಲ ಹೊಸ್ತಿಲಿನ ಲ್ಲಿರುವುದರಿಂದ ಇನ್ನು ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿ ಸಾಧ್ಯವಿಲ್ಲ. ತಾತ್ಕಾಲಿಕ ವ್ಯವಸ್ಥೆಯಾಗಿ ಕೆಲವು ಕ್ರಮ ತೆಗೆದುಕೊಳ್ಳಬೇಕು. ಮಳೆಗಾಲ ಪೂರ್ವದಲ್ಲಿ ತಡೆಗೋಡೆ ನಿರ್ಮಾಣ ಇತ್ಯಾದಿ ಮಾಡಬೇಕು. ಆದರೆ ಜಿಲ್ಲೆಯಿಂದ ಹೋಗಿರುವ ಸುಮಾರು 10 ಪ್ರಸ್ತಾವನೆಗಳಿಗೆ ಸರಕಾರದಿಂದ ಈವರೆಗೂ ಅನುಮತಿಯೇ ಸಿಕ್ಕಿಲ್ಲ. ಹೀಗಾಗಿ ಈ ವರ್ಷ ಅವೈಜ್ಞಾನಿಕ ಪದ್ಧತಿಯಲ್ಲಿ ಕಲ್ಲು ಸುರಿಯುವುದೇ ಮುಂದುವರಿಯುವ ಎಲ್ಲ ಸಾಧ್ಯತೆ ಇದೆ.

27.98 ಕೋ.ರೂ. ಪ್ರಸ್ತಾವನೆ
ಜಿಲ್ಲೆಯಲ್ಲಿ ದೀರ್ಘ‌ಕಾಲ ಬಾಳಿಕೆ ಬರಬಹುದಾದ ಶಾಶ್ವತ ತಡೆಗೋಡೆಗಳನ್ನು 10 ಕಡೆಗಳಲ್ಲಿ ಸುಮಾರು 27.98 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲು ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಕಚೇರಿಗೆ ಸಲ್ಲಿಸಿದ್ದಾರೆ. ಸುಮಾರು 2,515 ಮೀ. ತಡೆಗೋಡೆ ನಿರ್ಮಾಣವಾಗಲಿದೆ. ಸಭೆಯಲ್ಲೂ ಚರ್ಚೆ ನಡೆದಿದೆ. ಆದರೆ ಅನುದಾನ ಮಾತ್ರ ಬಂದಿಲ್ಲ ಎನ್ನುತ್ತಾರೆ ಜಿಲ್ಲೆಯ ಹಿರಿಯ ಅಧಿಕಾರಿಗಳು.

ಎಲ್ಲೆಲ್ಲಿ ಶಾಶ್ವತ ತಡೆಗೋಡೆ?
ಕಾಪು ತಾಲೂಕು: ಮೂಳೂರು ತೊಟ್ಟಂ ಕಡಲ ತೀರದಲ್ಲಿ 300 ಮೀ. ಉದ್ದದ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 3.75 ಕೋ.ರೂ., ಪಡುಬಿದ್ರಿಯ ಕಡಲ ತೀರದಲ್ಲಿ 200 ಮೀ. ಉದ್ದ ಶಾಶ್ವತ ತಡೆಗೋಡೆಗಾಗಿ 2.50 ಕೋ.ರೂ., ಹೆಜಮಾಡಿ ಕಡಲ ತೀರದಲ್ಲಿ 190 ಮೀ. ಶಾಶ್ವತ ತಡೆಗೋಡೆ ಕಟ್ಟಲು 2.40 ಕೋ.ರೂ. ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ.

Advertisement

ಉಡುಪಿ ತಾಲೂಕು: ಉದ್ಯಾವರ ಪಡುಕೆರೆ ಕಡಲ ತೀರದಲ್ಲಿ 200 ಮೀ. ಉದ್ದದ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 2.50 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ.

ಬ್ರಹ್ಮಾವರ ತಾಲೂಕು: ಕೋಡಿ ಕನ್ಯಾನ ಹೊಸಬೆಂಗ್ರೆ ಲೈಟ್‌ ಹೌಸ್‌ನಿಂದ ಅಮ್ಮ ಸ್ಟೋರ್‌ ವರೆಗೆ ಆಯ್ದ ಕಡೆಗಳಲ್ಲಿ 440 ಮೀ. ಉದ್ದದ ಶಾಶ್ವತ ತಡೆಗೋಡೆ ನಿರ್ಮಿಸಲು 5 ಕೋ.ರೂ., ಲಿಲ್ಲಿ ಫೆರ್ನಾಂಡಿಸ್‌ ರಸ್ತೆಯಿಂದ ಶಿವರಾಜ್‌ ಜನರಲ್‌ ಸ್ಟೋರ್ ಸಮೀಪದ ವರೆಗಿನ ಆಯ್ದ ಭಾಗಗಳಲ್ಲಿ 250 ಮೀ. ಉದ್ದದ ತಡೆಗೋಡೆ ನಿರ್ಮಿಸಲು 2.25 ಕೋ.ರೂ. ಹಾಗೂ ಗೋಪಾಲ್‌ ಪೂಜಾರಿಯವರ ಮನೆಯಿಂದ ಹೊಸಬೆಂಗ್ರೆ ಲೈಟ್‌ಹೌಸ್‌ವರೆಗೆ 400 ಮೀ. ಉದ್ದದ ಶಾಶ್ವತ ತಡೆಗೋಡೆ ನಿರ್ಮಿಸಲು 3.80 ಕೋ.ರೂ. ಪ್ರಸ್ತಾವನೆ ನೀಡಲಾಗಿದೆ.

ಕುಂದಾಪುರ ತಾಲೂಕು: ಕೋಟೇಶ್ವರ ಗ್ರಾ.ಪಂ. ವ್ಯಾಪ್ತಿಯ ಹಳೇ ಅಳಿವೆ ಕಿನಾರ ಹೊಟೇಲ್‌ ಮುಂಭಾಗದಲ್ಲಿ 65 ಮೀ. ಉದ್ದದ ಶಾಶ್ವತ ತಡೆಗೋಡೆ ನಿರ್ಮಿಸಲು 78 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೈಂದೂರು ತಾಲೂಕು: ಮರವಂತೆ ಬ್ರೇಕ್‌ ವಾಟರ್‌ ಬಳಿ 120 ಮೀ. ಉದ್ದದ ಶಾಶ್ವತ ತಡೆಗೋಡೆ ನಿರ್ಮಿಸಲು 1.90 ಕೋ.ರೂ., ಮರವಂತೆಯ ನಾಗ ಬನದ ಹತ್ತಿರ 250 ಮೀ. ಉದ್ದದ ಶಾಶ್ವತ ತಡೆಗೋಡೆ ನಿರ್ಮಿಸಲು 3.10 ಕೋ.ರೂ. ಪ್ರಸ್ತಾವನೆ ಕೊಡಲಾಗಿದೆ.

ಉಡುಪಿ ಜಿಲ್ಲೆಯಿಂದ ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಿಸುವ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಸಚಿವರೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಅಗತ್ಯ ಇದ್ದ ಕಡೆಗಳಲ್ಲಿ ಕಾಮಗಾರಿ ನಡೆಸಬೇಕಾಗುತ್ತದೆ. ಈ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳಿಗೂ ಸೂಚನೆ ನೀಡಲಿದ್ದೇವೆ.
-ಕ್ಯಾ| ಸ್ವಾಮಿ, ನಿರ್ದೇಶಕರು,
ಬಂದರು ಇಲಾಖೆ, ಕಾರವಾರ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next