Advertisement

Desi Swara:ಮನುಷ್ಯನ ಜೀವನದ ಒಂದು ಭಾಗ ಏಳು-ಬೀಳು- ಬಿದ್ದಾಗ ಛಲದಿಂದ ಮೇಲೇಳುವಂತೆ ಬೀಳೋಣ,

12:24 PM Mar 09, 2024 | Team Udayavani |

ಚಿಕ್ಕಂದಿನ ನಮ್ಮ ಜೀವನದ ಪ್ರಮುಖ ಧ್ಯೇಯವೇ ಹೆಚ್ಚು ಆಟ ಕಡಿಮೆ ಪಾಠ. ಒಂದು ರೀತಿ ಹೇಳಬೇಕು ಎಂದರೆ ನಾವು ಭೂಮಿಗೆ ಬಂದಿರುವುದೇ ಆಟ ಆಡೋದಕ್ಕೆ ಎಂಬಷ್ಟು. ಆಗಿನ ದಿನಗಳಲ್ಲಿ ಟಿವಿ, ಕಂಪ್ಯೂಟರ್‌, ಇಂಟರ್ನೆಟ್‌ ಎಂದರೆ ಏನು ಎಂದೇ ಗೊತ್ತಿರಲಿಲ್ಲ, ಇನ್ನು ಮೊಬೈಲ್‌ ವಿಷಯ ದೂರವೇ ಆಯ್ತು. ಹೀಗಾಗಿ ಜೀವನದಲ್ಲಿ ಆಟ – ಪಾಠ ಅಷ್ಟೇ. ಅದರಲ್ಲೂ ಮುಂಚೂಣಿಯಲ್ಲಿ ಇದ್ದುದು ಎಂದರೆ ಆಟ.

Advertisement

ಅಂದ ಹಾಗೆ, ಈ ದಿನದ ಬರಹ ಆಟದ ಬಗ್ಗೆ ಅಲ್ಲ ಬದಲಿಗೆ ವಿಷಯಕ್ಕೆ ಪೀಠಿಕೆ ಅಷ್ಟೇ. ನಮ್ಮ ಆಟಗಳಲ್ಲಿ ಪ್ರಮುಖ ಎಂದರೆ ಯಥಾರೀತಿ ಕ್ರಿಕೆಟ್‌ ಅದು ಬಿಟ್ಟರೆ ಕಬಡ್ಡಿ, ಓಟ ಇತ್ಯಾದಿಗಳು. ಇದಾವುದೇ ಆಟವಿರಲಿ ಆವಶ್ಯಕತೆಯೇ ಇಲ್ಲದಿದ್ದರೂ ಏಳುಬೀಳು ಬಲು ಸಾಮಾನ್ಯ. ಆಟಗಳಲ್ಲಿ ಏಳುಬೀಳು ಎಂಬುದಕ್ಕಿಂತ ಬೀಳು-ಏಳು ಎಂಬುದೇ ಸರಿ. ಕಾಲುಗಳ ಎರಡೂ ಮಂಡಿಗಳಿಗೆ, ಎರಡೂ ಮೊಣಕೈಗಳ ಮೇಲಿನ ಗಾಯ ಸರ್ವೇಸಾಮಾನ್ಯ. ಇದರ ಮುಂದಿನ ಹಂತವೇ ಪ್ರಾಕ್ಚರ್‌ ಅಥವಾ ಮೂಳೆ ಮುರಿತ. ಮತ್ತದೇ ದೇಹದ ನಾಲ್ಕುಭಾಗಗಳಿಗೆ ಬೀಳುವಿಕೆಯಿಂದ ಸಿಗುವ ಭಾಗ್ಯ. ಪುಣ್ಯಕ್ಕೆ, ನಾನು ಜೀವನದಲ್ಲಿ ಈ ಪ್ಲಾಸ್ಟರ್‌ ಎಂಬ ಆಭರಣ ತೊಟ್ಟಿಲ್ಲ.

ಹಾಗಂತ ನನಗೇನೂ ಆಗಿಲ್ಲ ಎನ್ನದಿರಿ. ಬಿದ್ದಿರೋದೇ ಒಮ್ಮೆ ಅದೂ ತಲೆಗೆ ಬಿದ್ದ ಪೆಟ್ಟು. ಹೊಡೆದರೆ ಆನೆ ಹೊಡೀಬೇಕು ಅನ್ನುತ್ತಾರಲ್ಲ ಹಾಗೆ. ಒಮ್ಮೆ ಹೀಗೇ, ಸೈಕಲ್‌ ನ ಹಿಂಭಾಗದ ಕ್ಯಾರಿಯರ್‌ ಮೇಲೆ ಕೂತಿದ್ದೆ. ರಭಸವಾಗಿ ಇಳಿಜಾರಿನ ರಸ್ತೆಯ ಮೇಲೆ ಭರದಿಂದ ಸಾಗುವ ಸೈಕಲ್‌ ನ ಮೇಲೆ ಸುಮ್ಮನೇನು ಕುಳಿತಿರಲಿಲ್ಲ. ಬೀಸುವ ಗಾಳಿಗೆ ನಾಯಕ ನಟನಂತೆ ಎರಡೂ ಕೈಗಳನ್ನು ಆಚೆಈಚೆ ಚಾಚಿ ಕೂತಿದ್ದೆ. ನನ್ನ ಭಂಗಿಯನ್ನೇ ಅನಂತರ ಎಲ್ಲರೂ ಕಾಪಿ ಮಾಡಿದ್ದು ಬಿಡಿ. ಸಾಗುವ ಸೈಕಲ್‌ ನ ಸವಾರನಿಗೆ ಹಂಪ್‌ ಕಾಣಲಿಲ್ಲ. ಹಂಪ್‌ ಮೇಲೆ ಸೈಕಲ್‌ ಓಡಿದಾಗ ನಾನು ಧಬಕ್ಕನೆ ಬಿದ್ದಿದ್ದೆ. ತಲೆಯ ಹಿಂಭಾಗಕ್ಕೆ ಸರಿಯಾದ ಪೆಟ್ಟು ಬಿತ್ತು. ಆಮೇಲಿನ ವಿಷಯ ಬಿಡಿ. ಬಹುಶಃ ವಿಷಯಗಳನ್ನು ನೇರವಾಗಿ ಆಲೋಚಿಸುವುದನ್ನು ಬಿಟ್ಟು ಬೇರೆ ರೀತಿಯಲ್ಲಿ ಆಲೋಚಿಸುವುದಕ್ಕೆ ಈ ತಲೆಪೆಟ್ಟು ಕಾರಣ ಇರಬಹುದೇ? ಇರಲಿ ಬಿಡಿ, ಆದರೆ ಬೀಳುವಿಕೆ ಎಂದರೆ ನಾವಾಗಿಯೇ ಆಡುವಾಗ ಬೀಳಬೇಕಿಲ್ಲ. ಹೇಗೆ ಬೇಕಾದರೂ ಬೀಳಬಹುದು ಎಂದು ಭಿನ್ನವಾಗಿ ಹೇಳಹೊರಟಿದ್ದು.

ಇಂದಿನ ದಿನಗಳಲ್ಲಿ ತಲೆಸ್ನಾನ ಎಂದರೆ ಶಾಂಪೂ ಸ್ನಾನವೇ ಸರಿ. ನಾವು ಚಿಕ್ಕವರಿದ್ದಾಗ ಅಮ್ಮ ತಲೆಗೂದಲಿಗೆ ಹರಳೆಣ್ಣೆ ಹಚ್ಚಿ, ಸೀಗೆಪುಡಿ ಉಜ್ಜಿದ ಮೇಲೆ ಬಿಸಿ ಬಿಸಿ ನೀರಿನ ಸ್ನಾನ ಆಗುತ್ತಿತ್ತು. ಕೆಲವೊಮ್ಮೆ ಬಚ್ಚಲ ಕಲ್ಲು ನುಣುಪಾಗಿ ಅದರ ಮೇಲೆ ಎಣ್ಣೆಯೂ ಬಿದ್ದಿದ್ದರೆ, ಕಾಲಿಟ್ಟೊಡನೆ ಜಾರುತ್ತಿತ್ತು ಕೂಡ. ಹಾಗೆ ಆಗಿ ಬಿದ್ದದ್ದೂ ಇದೆ. ಆದರೆ ಬಿದ್ದೆ ಬಿದ್ದೆ ಬಾತ್‌ರೂಮಲ್ಲಿ ಲವ್ವಲ್ಲಿ ಬಿದ್ದೆ ಅಂತ ಹಾಡು ಹೇಳೋದಕ್ಕೆ ಈ ಹಾಡು ಇನ್ನೂ ರಿಲೀಸ್‌ ಆಗಿರಲಿಲ್ಲ. ಹಾಗೂ ಒಂದು ವೇಳೆ ರಿಲೀಸ್‌ ಆಗಿದ್ದರೂ ಅಂದಿನ ದಿನಗಳಲ್ಲಿ ಲವ್ವಲ್ಲಿ ಬಿದ್ದೆ ಅಂತ ಹಾಡಿದ್ದರೆ, ಮೈಯೆಲ್ಲಾ ಒದ್ದೆ ಜತೆಗೆ ಮೈಯೆಲ್ಲಾ ಮುದ್ದೆ, ರಾತ್ರಿ ಬರ್ತಿರಲಿಲ್ಲ ನಿದ್ದೆ.

Advertisement

ಲವ್‌ ಎಂಬ ಪದಪ್ರಯೋಗವೇ ನಿಷಿದ್ಧವಾಗಿದ್ದ ಕಾಲ. ಅಂದಿನ ಬೀಳುವಿಕೆ ಹೇಗೆ ಎಂದರೆ, ಆಟವಾಡುವಾಗ ಬೀಳುವಿಕೆ ಎಂದಾದಾಗ ಮನೆಯಲ್ಲಿ ದೊರೆಯುತ್ತಿದ್ದ ಮೊದಲ ಆರೈಕೆಯೇ ಬೈಗುಳ, ಕೆಲವೊಮ್ಮೆ ಹೊಡೆತ. ಕಾಂಪೌಂಡ್‌ನಿಂದ ಹಾರಿ ಕೆಳಕ್ಕೆ ಬಿದ್ದರೆ ಇನ್ನೇನಾಗುತ್ತೆ ಕಾಲು ಮುರಿಯದೇ ? ಎಂಬ ಬೈಗುಳ ಜತೆಗೆ ಒಂದೆರಡು ಪೆಟ್ಟು. ಕಷ್ಟಪಟ್ಟು ಬಿದ್ದಿರುವಾಗ ಮೇಲೆ ಬೋನಸ್‌ ಕೂಡ ದೊರೆಯುತ್ತಿತ್ತು. ಏನು ಅಂದ್ರಾ? ಈ ನಡುವೆ ನಿಂದು ಅತೀ ಆಯ್ತು. ನಿಮ್ಮಪ್ಪ ಬರಲಿ. ಹೇಳಿ ತಕ್ಕ ಶಾಸ್ತಿ ಮಾಡಿಸ್ತೀನಿ. ಇದು ಬೀಳುವಿಕೆಗೆ ಸಿಗುತ್ತಿದ್ದ ಡಬಲ್‌ ಧಮಾಕ.

ಹಂಗೂ ಹಿಂಗೂ ಎದ್ದೂ ಬಿದ್ದೂ ಬಾಲ್ಯ ಕಳೆಯಿತು ಎಂದರೆ ವಿಭಿನ್ನ ಬೀಳುವಿಕೆಗೆ ಹರೆಯ ಕರೆದಿದೆ. ಅಂದ ಹಾಗೆ “ಎದ್ದೂ ಬಿದ್ದೂ’ ಅಂತ ಹೇಳಿದ್ಯಾಕೆ ಎಂದರೆ ಬೀಳುವಿಕೆಯ ಮಗದೊಂದು ಪದಪ್ರಯೋಗ ಸರಿ ಆದರೆ ಬಾಲ್ಯದಲ್ಲಿರುವಾಗ ಬೇಗ ದೊಡ್ಡವರಾಗಿ ಬಿಡಬೇಕು ಎಂಬ ಹಂಬಲ. ಇರಲಿ, ಹರೆಯದ ಬೀಳುವಿಕೆ ತಾರ್ಕಿಕ. ಬಸ್‌ ಸ್ಟ್ಯಾಂಡಿನಲ್ಲಿ ನಿಂತವಳ ಒಂದು ಕುಡಿನೋಟ, ಸ್ಕೂಟಿಯಲ್ಲಿ ಸಾಗುವ ಸುಂದರಿಯ ಹಾರುವ ತಲೆಗೂದಲು, ಸುಂದರನೋರ್ವನ ಖಡಕ್‌ ದೇಹ, ಒರಟು ನಡತೆ ಹೀಗೇ ಯಾವುದೂ ಸಹ ಆ ಮತ್ತೂಬ್ಬರ ಬೀಳುವಿಕೆಗೆ ಕಾರಣವಾಗಬಹುದು. ಹೆಚ್ಚಿನ ವೇಳೆ ಈ ಬೀಳುವಿಕೆ ನಾಲ್ಕು ಹೆಜ್ಜೆ ಮುಂದೆ ಹೋಗಿ, ಏಳು ಹೆಜ್ಜೆಗಳನ್ನೂ ಇಡುವ ತನಕ ಸಾಗಬಹುದು. ಹಲವೊಮ್ಮೆ ಈ ನಿರ್ಧಾರ ಹಳ್ಳ ಹಿಡಿಯಬಹುದು, ಕೆಲವೊಮ್ಮೆ ಮಾತ್ರ ಸರಿಯಾಗಬಹುದು.

ಇಂಥಾ ಬೀಳುವಿಕೆಯ ಮಗದೊಂದೆರಡು ಸನ್ನಿವೇಶಗಳನ್ನು ನೋಡೋಣ. ರಾಮಾಯಣದ ಲಕ್ಷ್ಮಣರೇಖೆ ಇಂಥದೊಂದಕ್ಕೆ ಉದಾಹರಣೆ. ತನ್ನ ಬಾಣದಿಂದ ಮನೆಯ ಮುಂದೆ ಒಂದು ಗೆರೆಯನ್ನೆಳೆದ ಲಕ್ಷ್ಮಣನು ಸೀತಾದೇವಿಗೆ ಆ ಗೆರೆಯನ್ನು ದಾಟಕೂಡದು ಎಂದು ಹೇಳಿರುತ್ತಾನೆ. ಆದರೆ ಸೀತೆ ಸನ್ಯಾಸಿ ವೇಷ ಧರಿಸಿ ಬಂದ ರಾವಣನ ಮೋಸದ ನುಡಿಗಳಿಗೆ ಬಲಿಯಾಗುತ್ತಾಳೆ. ಮುಂದಿನ ಕಥೆ ಈಗ ಬೇಡಾ ಬಿಡಿ. ಗೆರೆಯನ್ನು ದಾಟಿ ಬೀಳುತ್ತಾಳೆ ಎಂದಾಗ ರಂಗೋಲಿಯ ಬಗೆಗಿನ ಒಂದು ಹಾಸ್ಯ ಹೇಳಲೇಬೇಕು. ಮನೆಯ ಮುಂದೆ ರಂಗೋಲಿಯನ್ನು ಹಾಕುವುದು ಒಂದು ಕಲೆ.

ರಂಗೋಲಿಯನ್ನು ಹಾಕುವ ಬೆರಳುಗಳು ಸಣ್ಣ ಇದೆಯೋ, ದಪ್ಪ ಇದೆಯೋ ಮುಖ್ಯವಲ್ಲ ಬದಲಿಗೆ ರಂಗೋಲಿಯ ಗೆರೆಗಳಂತೂ ತೆಳ್ಳಗೆ ಇದ್ದರೇನೇ ಚೆನ್ನ. ದಪ್ಪನೆಯ ಗೆರೆಯ ರಂಗೋಲಿ ಹಾಕಿದಾಗ, ಆ ಕಿರಿಯರನ್ನು ಹಿರಿಯರು ತಿಳಿಯಾಗಿ ಬೈಯುತ್ತಿದ್ದ ಪರಿಯೇ ಸೊಗಸು. ಸಾಕು ಬಿಡಮ್ಮ ರಂಗೋಲಿ ಹಾಕಿದ್ದು, ಹಾದು ಹೋಗುವವರು ಎಡವಿ ಬಿ¨ªಾರು ಅಂತ. ಶಾಲಿನಲ್ಲಿ ಸುತ್ತಿ ಹೊಡೆಯೋದು ಅಂದ್ರೆ ಇದೇನಾ?

ಆಡುವ ಮೋಡಿಯ ಮಾತುಗಳಿಗೆ ಮರುಳಾಗುವವರು ಇಂದಿಗೂ ಇದ್ದಾರೆ, ಮುಂದೆಯೂ ಇರುತ್ತಾರೆ. ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರೂ ಇದ್ದೇ ಇರುತ್ತಾರೆ. ಹಳೆಯ ವಿಧಾನಗಳು ಸದಾ ಜೀವಂತವಿದ್ದು ಅದರ ಮೇಲೆ ಹೊಸ ತಂತ್ರಜ್ಞಾನಗಳೂ ಸೇರಿಕೊಂಡು ಬೀಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಕ್ಷರ ರೂಪದಲ್ಲಿನ ಆನ್‌ಲೈನ್‌ ಖರೀದಿ, ತಾವು ಬ್ಯಾಂಕ್‌ನವರು ಎಂದು ಹೇಳಿಕೊಂಡು ಓಟಿಪಿ ಪಡೆದುಕೊಂಡು ಖಾತೆ ಬೋಳಿಸುವ ಪರಿ ಹೀಗೇ ನಾನಾ ವಿಧ. ನನಗೆ ಚಿತ್ರರಂಗದವರೆಲ್ಲಾ ಗೊತ್ತು ನಿನ್ನನ್ನು ನಾಯಕಿ ಮಾಡುತ್ತೇನೆ, ನಿನ್ನ ಹಣ ಡಬಲ್‌ ಮಾಡುತ್ತೇನೆ, ಸರಕಾರೀ ಕೆಲಸ ಕೊಡಿಸುತ್ತೇನೆ ಮುಂತಾದ ಮೋಸದ ಖೆಡ್ಡಾಗೆ ಬೀಳುವವರ ಸಂಖ್ಯೆ ದಿನೆ ದಿನೇ ಹೆಚ್ಚಿದೆ, ಹೆಚ್ಚುತ್ತಲೇ ಇರುತ್ತದೆ ಎಂದು ಹೇಳಲು ಖೇದವಾಗುತ್ತದೆ.

ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಬೀಳಬಹುದು ಎಂಬ ವಿಷಯಕ್ಕೆ ಬರೋಣ. ಈ ಬೀಳುವಿಕೆ ಎಂಬುದು ಹಿರಿಯರಲ್ಲಿ ಆಗುವ ಸಾಮಾನ್ಯ ಸಂಗತಿ. ಹಾಸಿಗೆಯಿಂದ ಎದ್ದು ಬಚ್ಚಲಿಗೆ ಹೋಗುವಾಗ ಬಿದ್ದರು, ಅದೇ ಒಂದು ನೆಪವಾಗಿ ನಮ್ಮನ್ನು ಬಿಟ್ಟು ಹೋದರು ಎಂಬುದು ನಾನಾ ರೀತಿ ಹೇಳಬಹುದಾದ ಒಂದು ವಿಷಯ. ಮಂಚದಿಂದ ಎದ್ದು ನಿಲ್ಲುವಾಗ ತಲೆಸುತ್ತಿ ಬಂದು ಬಿದ್ದು ವ್ಯತ್ಯಾಸವಾಗೋದು, ನುಣುಪಾದ ಟೈಲ್ಸ್‌ ಮೇಲೆ ಚೆಲ್ಲಿದ ನೀರಿನ ಮೇಲೆ ಕಾಲಿರಿಸಿ ಬೀಳ್ಳೋದು, ಬಚ್ಚಲ ಮನೆಯಲ್ಲಿ ಜಾರಿ ಬೀಳ್ಳೋದು, ಪಂಚೆ ಅಥವಾ ಸೀರೆಯ ಅಂಚು ಕಾಲಿನ ಬೆರಳಿಗೆ ಸಿಕ್ಕು ಬೀಳ್ಳೋದು ಎಂಬುದೆಲ್ಲಾ ಹಲವಾರು ಸನ್ನಿವೇಶಗಳು. ಇಂಥಾ ಬೀಳುವಿಕೆಗಳೆಲ್ಲಾ ಹಿರಿಯರಿಗೆ ಆಗುವಂಥದ್ದಲ್ಲ ಬದಲಿಗೆ ಯಾರಿಗೂ ಆಗಬಹುದು. ಬಿದ್ದ ವ್ಯಕ್ತಿಗೆ ಚೈತನ್ಯವಿದ್ದರೆ ಚೇತರಿಸಿಕೊಳ್ಳುತ್ತಾನೆ ಇಲ್ಲವಾದರೆ ಕುಸಿದೇ ಹೋಗುತ್ತಾನೆ.

ಎಲ್ಲರೂ ಬಯಸುವುದೇ “ಅನಾಯಾಸೇನ ಮರಣಂ’ ಅಲ್ಲವೇ? ಆದರೆ ಯಾವುದೇ ಕಾರಣಕ್ಕೆ ತಲೆಸುತ್ತಿ ಬಂದು ಆಗುವ ಈ ಬೀಳುವಿಕೆಯಿಂದ ಚೇತರಿಸಿಕೊಳ್ಳಲಾಗದ ಪೆಟ್ಟು ಅಥವಾ ಮುರಿತ ಉಂಟಾದರೆ ಮಾತ್ರ ಅದು ಶೋಚನೀಯ. ಇನ್ನೊಬ್ಬರ ಆಶ್ರಯವಾದೆನಲ್ಲಾ ಎಂಬ ನೋವೇ ಬೀಳುವಿಕೆಯಿಂದ ಆದ ಪೆಟ್ಟಿಗಿಂತ ದೊಡ್ಡದು. ಬೀಳೋಣ ಆದರೆ ಜೀವನದಲ್ಲಿ ಯಾವಾಗ ಬೀಳಬೇಕು ಆಗ ಬೀಳೋಣ, ಏಳೋಣ. ಬಿದ್ದಾಗ ಛಲದಿಂದ ಎದ್ದು ಮೇಲೆ ಬರುವಂತೆ ಬೀಳೋಣ. ಬಿದ್ದಾಗ ಮುಳುಗಿಯೇ ಹೋಗದಂತೆ ಎಚ್ಚರವಹಿಸೋಣ. ಏನಂತೀರಾ?

*ಶ್ರೀನಾಥ್‌ ಭಲ್ಲೆ, ರಿಚ್ಮಂಡ್‌

Advertisement

Udayavani is now on Telegram. Click here to join our channel and stay updated with the latest news.

Next