Advertisement

ಕಣ್ಮನ ಸೆಳೆದ ಕಲಾತಂಡಗಳ ಮೆರವಣಿಗೆ

09:00 PM Oct 01, 2019 | Team Udayavani |

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವ ಅಂಗವಾಗಿ ನಗರದಲ್ಲಿ ನಡೆದ ಕಲಾತಂಡಗಳ ಮೆರವಣಿಗೆ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜಿಲ್ಲಾಡಳಿತ ಭವನದಿಂದ ಆರಂಭಗೊಂಡ ಕಲಾತಂಡಗಳ ಮೆರವಣಿಗೆಗೆ ದಸರಾ ಮಹೋತ್ಸವ ಸಮಿತಿಯಕ್ಷ ಹಾಗೂ ಶಾಸಕ‌ ಸಿ. ಎಸ್‌. ನಿರಂಜನ್‌ಕುಮಾರ್‌, ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ನಂದಿ ಕಂಬಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದಿಂದ ಬಿ. ರಾಚಯ್ಯ ಜೋಡಿ ರಸ್ತೆಯ ಮೂಲಕ ಚಾಮರಾಜೇಶ್ವರ ದೇವಾಲಯದವರೆಗೆ ಕಲಾತಂಡಗಳು ಸಾಗಿದವು. ವಿವಿಧ ಕಲಾತಂಡಗಳ ಮೆರವಣಿಗೆ ಸಾರ್ವಜನಿಕರನ್ನು ಆಕರ್ಷಿಸಿತು. ಗೊರವರ ಕುಣಿತ, ದೊಣ್ಣೆ ವರಸೆ, ನಂದಿ ಕಂಬ, ಹುಲಿವೇಷ, ನಾದಸ್ವರ, ವೀರಗಾಸೆ, ಡೊಳ್ಳು ಕುಣಿತ, ಸುಗ್ಗಿ ಕುಣಿತ, ಬೀಸು ಕಂಸಾಳೆ, ಟಿಬೇಟಿಯನ್‌ ನೃತ್ಯ, ಗೊರುಕನ ನೃತ್ಯ, ಗುಬ್ಬಿಹಾಲೆ ನೃತ್ಯ, ಪಿನಾಸಿ ನೃತ್ಯ, ಚಿಲಿಪಿಲಿ ಗೊಂಬೆ, ಕೊಂಬು ಕಹಳೆ, ತಮಟೆ, ಸೋಮನ ಕುಣಿತ, ನಗಾರಿ, ಗಾರುಡಿ ಗೊಂಬೆಗಳ ಪ್ರದರ್ಶನ ವಿಶೇಷವಾಗಿ ಆಕರ್ಷಿಸಿತು.

ಕಲಾವಿದರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳು ನಿರ್ಮಿಸಿದ ಸ್ಥಬ್ಧಚಿತ್ರಗಳು ಸಹ ಭಾಗವಹಿಸಿ ಮೆರಗು ನೀಡುವುದರ ಜೊತೆಗೆ ಮಾಹಿತಿ ನೀಡುವಲ್ಲಿ ಮುಂದಾದವು. ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಿದ ಸ್ವಚ್ಚ ಭಾರತ್‌ ಕುರಿತ ಸ್ಥಬ್ಧಚಿತ್ರ ನೈರ್ಮಲ್ಯ ಮಹತ್ವವನ್ನು ಸಾರಿತು. ನಗರಸಭೆಯ ಜಲಶಕ್ತಿ ಅಭಿಯಾನ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ಜಾಗೃತಿ ರಥ, ಆರೋಗ್ಯ ಇಲಾಖೆಯ ಪರ್ಯಾವರಣ ತುರ್ತು ಸ್ಥಬ್ಧಚಿತ್ರಗಳು ಆಕರ್ಷಕವಾಗಿ ನಿರ್ಮಾಣವಾಗಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾದವು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌. ನಾರಾಯಣ್‌ರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ‌ ವೈ. ಸೋಮಶೇಖರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next