Advertisement

ಸಿನಿಮಾ ಎಂಬುದೇ ಒಂದು ಕನಸು. ಸಿನಿಮಾ ಮಾಡಬೇಕು, ಆ ಮೂಲಕ ಮಿಂಚಬೇಕು ಎಂದು ಕನಸು ಕಾಣುವ ನವಪ್ರತಿಭೆಗಳಿಗೇನೂ ಕೊರತೆಯಿಲ್ಲ. ಈಗ ಕನಸು ಎಂಬ ಟೈಟಲ್‌ ನಡಿ ಹೊಸಬರ ಸಿನಿಮಾವೊಂದು ಸೆಟ್ಟೇರಿದೆ. ಅದು “ಆ ಒಂದು ಕನಸು’.

Advertisement

ರಂಗು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಆ ಒಂದು ಕನಸು’ ಚಿತ್ರದ ಮುಹೂರ್ತ ಇತ್ತೀಚೆಗೆ ರಾಜರಾಜೇಶ್ವರಿ ನಗರದ ನಿಮಿಷಾಂಭಾ ದೇವಸ್ಥಾನದಲ್ಲಿ ನಡೆಯಿತು. ಚಿತ್ರವನ್ನು ವಿಷ್ಣು ನಾಚನೇಕರ್‌ ನಿರ್ದೆಶಿಸುತ್ತಿದ್ದಾರೆ. ಇಲ್ಲಿಯವರೆಗೂ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ವಿಷ್ಣು ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಚಿತ್ರದಲ್ಲಿ ವಿಶ್ವಾಸ್‌ ನಾಯಕ. “ಸಿನಿಮಾ ಮಾಡಬೇಕೆಂಬುದು ಹಲವು ವರ್ಷಗಳ ಕನಸು. ಇದೀಗ ಆ ಒಂದು ಕನಸು ಮೂಲಕ ಇಬ್ಬರ ಕನಸು ಈಡೇರಿದೆ. ನಿರ್ಮಾಪಕ ದಿಲೀಪ್‌ ಅವರಿಂದ ಈ ಸಿನಿಮಾ ಶುರುವಾಗಿದೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಶೈಲಿಯ ಸಿನಿಮಾ. ಕಮರ್ಷಿಯಲ್‌ ಅಂಶಗಳೊಂದಿಗೆ ಸಾಗಲಿದೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಇನ್ನುಳಿದ ಭಾಗ ಸಾಗರ ಮತ್ತು ಶಿವಮೊಗ್ಗದಲ್ಲಿ ನಡೆಯಲಿದೆ’ ಎನ್ನುವುದು ನಿರ್ದೇಶಕ ವಿಷ್ಣು ಅವರ ಮಾತು. ನಾಯಕ ವಿಶ್ವಾಸ್‌ ಮಾತನಾಡಿ, ತಮಿಳಿನ ಉದಯಂ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕಥೆಯೇ ಈ ಚಿತ್ರದಲ್ಲಿ ಹೀರೋ. ಇದರಲ್ಲಿ ತುಂಬಾ ಮೃದು ಸ್ವಭಾವದ ಪಾತ್ರ ನನ್ನದು. ಹಲ್ಲಿ ಕಂಡರೂ ಹೆದರುವಂಥ ಪಾತ್ರ’ ಎಂದರು. ಚಿತ್ರದ ನಿರ್ಮಾಪಕ ದಿಲೀಪ್‌ ಬಿ.ಎಂ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು.

ಇನ್ನು ಈ ಚಿತ್ರಕ್ಕೆ ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ ಬರೆದಿದ್ದಾರೆ. “ಕನಸು ಕಾಣುವುದು ಮತ್ತು ಕಂಡ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಈ ಸಿನಿಮಾ ಸಾಗುತ್ತದೆ’ ಎಂದರು ಸಾಯಿಕೃಷ್ಣ. ಚಿತ್ರದ ನಾಯಕಿಯಾಗಿ ಧನ್ಯಶ್ರೀ ನಟಿಸುತ್ತಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಬಾಲ ರಾಜವಾಡಿ, ಮಾ. ಚಿರಾಯು ಚಕ್ರವರ್ತಿ, ಅಮಿತ್‌, ಗಿರೀಶ್‌ ಶಿವಣ್ಣ, ರಮೇಶ್‌ ಭಟ್‌, ಗಿರಿಜಾ ಲೋಕೇಶ್‌,ಕುರಿ ಬಾಂಡ್‌ ರಂಗ, ಹರ್ಷವರ್ಧನ್‌, ಶ್ವೇತಾ ರಾವ್‌ ಮತ್ತು ಜಯಶ್ರೀ ನಟಿಸಲಿದ್ದಾರೆ. ಇನ್ನು ಅಭಿಷೇಕ್‌ ಜಿ ರಾಯ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕಥೆ, ಚಿತ್ರಕಥೆ ಉದಯಂ, ವೀನಸ್‌ ಮೂರ್ತಿ ಛಾಯಾಗ್ರಹಣ, ಸುಜನ್‌ ಅವರ ಸಂಕಲನ, ಅಲ್ಟಿಮೇಟ್‌ ಶಿವು ಸಾಹಸ, ಹೈಟ್‌ ಮಂಜು ಮತ್ತು ಸ್ಟಾರ್‌ ಗಿರಿ ನೃತ್ಯ ನಿರ್ದೇಶನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next