ವರದಿ: ಕೆ.ನಿಂಗಜ್ಜ
ಗಂಗಾವತಿ: ನಗರಸಭೆಯ ಬನ್ನಿಗಿಡದ ಕ್ಯಾಂಪ್ ನಲ್ಲಿರುವ ಪಾರ್ಕ್ ಅನ್ನು ಸ್ಥಳೀಯರು ಬಯಲು ಶೌಚಾಲಯವಾಗಿ ಮಾಡಿಕೊಂಡಿದ್ದು, ವಾಕಿಂಗ್ ಟ್ರ್ಯಾಕ್ ಸೇರಿ ಆಟಿಕೆ ಸಾಮಾನುಗಳ ಮೇಲೆ ಅಸ್ವತ್ಛತೆ ಮಾಡುತ್ತಿದ್ದು, ಇದರಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗಿದೆ.
ನಗರಸಭೆಯ ಬನ್ನಿಗಿಡದ ಕ್ಯಾಂಪ್‌ನಲ್ಲಿ ಅಮೃತಸಿಟಿ ಯೋಜನೆಯಡಿ ಉದ್ಯಾನವನ ಸ್ಥಾಪಿಸಿ ಸುತ್ತಲು ಕಾಂಪೌಂಡ್ ನಿರ್ಮಿಸಿ ವಾಕಿಂಗ್ ಟ್ರ್ಯಾಕ್ ಸೇರಿ ಮಕ್ಕಳು ಆಟವಾಡಲು ಆಟಿಕೆ ಸಾಮಾನು ಅಳವಡಿಸಲಾಗಿದೆ. ಇಲ್ಲಿ ಶುದ್ಧ ಪರಿಸರ ನಿರ್ಮಾಣ ಆಗಬೇಕಿದ್ದ ಉದ್ಯಾನವನದಲ್ಲಿ ಅನೈರ್ಮಲ್ಯ ಸೃಷ್ಟಿಯಾಗಿ ಗಬ್ಬು ನಾರುವಂತಾಗಿದೆ.
ನಗರದ ಪ್ರತಿ ಉದ್ಯಾನವನಗಳ ಅಭಿವೃದ್ಧಿಪಡಿಸಲು ಅಮೃತಸಿಟಿ ಯೋಜನೆಯಡಿ ಹಣ ಮೀಸಲಿಡಲಾಗಿದೆ. ಸುತ್ತಲು ಗೋಡೆ ವಾಕಿಂಗ್ ಟ್ರ್ಯಾಕ್ ಮತ್ತು ಮಕ್ಕಳು ಆಟವಾಡಲು ಮತ್ತು ಬೆಳಗಿನ ಜಾವ ವಾಯು ವಿಹಾರಕ್ಕೆ ಆಗಮಿಸುವವರು ದೇಹ ದಂಡನೆ ಮಾಡಲು ವ್ಯಾಯಮ ಸಾಮಾಗ್ರಿಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಹಾಕಲಾಗಿದೆ. ಬನ್ನಿಗಿಡ ಕ್ಯಾಂಪ್ ಹೊರತುಪಡಿಸಿ ಉಳಿದ ಉದ್ಯಾನವನಗಳಲ್ಲಿ ಜನರು ವಿಶ್ರಾಂತಿ ಮತ್ತು ವಾಯುವಿಹಾರಕ್ಕಾಗಿ ಬಳಕೆ ಮಾಡುತ್ತಿದ್ದಾರೆ.
ಬನ್ನಿಗಿಡದ ಕ್ಯಾಂಪ್ ಉದ್ಯಾನವನದಲ್ಲಿ ಕೆಲವರು ನಿತ್ಯವೂ ಬೆಳಗ್ಗೆ ಶೌಚ ಮಾಡಲು ಬಳಕೆ ಮಾಡುತ್ತಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಸುಸಜ್ಜಿತ ಪಾರ್ಕ್ ನಿರ್ಮಿಸಿ ಆಟಿಕೆ ಸಾಮಾನು ಅಳವಡಿಸಿರುವ ನಗರಸಭೆಯವರು ಪಾರ್ಕ್‌ಗೆ ಗೇಟ್ ಅಳವಡಿಕೆ ಮಾಡದೇ ಇರುವುದು ಮತ್ತು ವಾಚ್ ಮ್ಯಾನ್ ಅವರನ್ನು ನಿಯೋಜನೆ ಮಾಡಲು ನಿರ್ಲಕ್ಷ್ಯ ತೋರಿರುವುದು ಇದ್ದಕ್ಕೆ ಕಾರಣವಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.
ಪಾರ್ಕ್‌ನ ಒಂದು ಬದಿಯಲ್ಲಿ ಖಾಸಗಿ ನಿವೇಶನವಿದ್ದು, ಇಲ್ಲಿ ಜಾಲಿ ಗಿಡಗಳು ಬೆಳೆದು ಕಾಡಿನಂತೆ ಕಾಣುತ್ತಿದೆ. ಇದರಿಂದ ಹಾವು, ಹುಳು-ಹುಪ್ಪಡಿ ಸೇರಿ ತಾಣವಾಗಿ ಮಾರ್ಪಟ್ಟಿದೆ. ಬನ್ನಿಗಿಡದ ಕ್ಯಾಂಪಿನಲ್ಲಿ ಬಹುತೇಕ ಕೂಲಿ ಹಮಾಲಿ ಮಾಡುವವರು ಹೆಚ್ಚಾಗಿ ವಾಸ ಮಾಡುವುದರಿಂದ ಇವರ ಮಕ್ಕಳು ಇಲ್ಲಿ ಆಟವಾಡಲು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ವಿಷಜಂತುಗಳು ಕಚ್ಚುವ ಭಯವಿರುವ ಕಾರಣ ಇಡೀ ಪ್ರದೇಶವನ್ನು ಜೆಸಿಬಿ ಮೂಲಕ ಸ್ವತ್ಛ ಮಾಡಿಸುವಂತೆ ನಗರಸಭೆ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.