Advertisement
ಅಂದು ಒರಾಯನ್ ಮಾಲ್ ಎಂದಿಗಿಂತ ಕಲರ್‌ಫುಲ್ ಆಗಿತ್ತು. ಅದರಲ್ಲೂ ಕನ್ನಡತನ ಅಲ್ಲಿ ಮೇಳೈಸಿತ್ತು. ಅದಕ್ಕೆ ಕಾರಣ, “ಪ್ರೀತಿಯ ರಾಯಭಾರಿ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ. ಹೊಸತಂಡ ಆಗಿದ್ದರಿಂದ, ಕೊಂಚ ಜನರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಆ ಮಾಲ್‌ನ ವಾಟರ್‌ಪೂಲ್ ಬಳಿ ತಕ್ಕಮಟ್ಟಿಗೊಂದು ಸೆಟ್ ಹಾಕಿ, ಝಗಮಗಿಸೋ ಕಲರ್ ಕಲರ್ ಲೈಟಿಂಗ್ಸ್ ಬಿಟ್ಟು, ಒಂದಷ್ಟು ಮೆರುಗು ತುಂಬಿತ್ತು ಚಿತ್ರತಂಡ. ಸಂಜೆ ಆಗುತ್ತಿದ್ದಂತೆಯೇ, ಆವರಣವೆಲ್ಲಾ ಭರ್ತಿಯಾಗಿತ್ತು. ನೋಡನೋಡುತ್ತಿದ್ದಂತೆಯೇ ಕಾಲಿಡಲಾಗದಷ್ಟು ಜನಜಂಗುಳಿ. ಅದಕ್ಕೆ ಇನ್ನೂ ಒಂದು ಕಾರಣವೆಂದರೆ, ಸುದೀಪ್ ಸಿಡಿ ರಿಲೀಸ್ ಮಾಡ್ತಾರೆ ಅನ್ನೋದು ಒಂದಾದರೆ, ಇನ್ನೊಂದು ನಿರ್ಮಾಪಕರು ಜೆಡಿಎಸ್ ಪಕ್ಷದ ರಾಜಕಾರಣಿ. ಹಾಗಾಗಿ ಅದೊಂದು ಜೆಡಿಎಸ್ ಸಮಾವೇಶವೇನೋ ಎಂಬಂತೆಯೂ ಕಂಡುಬಂತು. ಹಾಗಾಗಿ ಜನ ಜನ ಮತ್ತು ಜನ ಅಲ್ಲಿ ತುಂಬಿದ್ದರು.
ಈ ಚಿತ್ರದ ಮೂಲಕ ನಕುಲ್ ಹೀರೋ ಆಗಿದ್ದಾರೆ. ಇವರ ತಂದೆ ವೆಂಕಟೇಶ್ ನಿರ್ಮಾಪಕರು. ಹಾಗಾಗಿ, ನಕುಲ್‌ಗೆ ಅಂದು ಉತ್ಸಾಹ ಕೊಂಚ ಜಾಸ್ತೀನೇ ಇತ್ತು. ಅವರಿಲ್ಲಿ ಚೆನ್ನಾಗಿ ಓದಿಕೊಂಡು, ಪುನಃ ಹಳ್ಳಿಗೆ ವಾಪಾಸ್ ಆಗಿ, ಅದರ ಅಭಿವೃದ್ಧಿಗೆ ಹೋರಾಡುವ ಪಾತ್ರವಂತೆ. ಆ ಹಳ್ಳಿಗೆ ಬರುವ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಪೈಕಿ ಒಂದು ಹುಡುಗಿಯನ್ನು ನೋಡಿ ಪ್ರೀತಿಗೆ ಬೀಳುತ್ತಾನೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆಯಂತೆ.
Related Articles
Advertisement