ಬೆಂಗಳೂರು: ಅನರ್ಹ ಶಾಸಕರ ರಾಜೀನಾಮೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ಮಾತನಾಡಿರುವ ವಿಡಿಯೋ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಅದರ “ಕಾನೂನು ಮಾನ್ಯತೆ’ ಬಗ್ಗೆ ಕಾನೂನು ತಜ್ಞರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ವಿಡಿಯೋ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವುದು ಅಪ್ರಸ್ತುತ ಹಾಗೂ ಅಭಾಸ ಎಂದು ಕೆಲವು ಕಾನೂನು ತಜ್ಞರು ಹೇಳಿದರೆ, ಇದು ಪ್ರಬಲ ಸಾಕ್ಷ್ಯವಾಗಿ ಪರಿಗಣಿಸಲ್ಪಟ್ಟು ಇಡೀ ಪ್ರಕರಣಕ್ಕೆ ಹೊಸದೊಂದು ತಿರುವು ಸಿಗುವ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಮತ್ತೆ ಕೆಲವು ಕಾನೂನು ತಜ್ಞರು ತಿಳಿಸಿದ್ದಾರೆ.
“ನನ್ನ ಪ್ರಕಾರ ಸುಪ್ರೀಂಕೋರ್ಟ್ ವಿಡಿಯೋ ಅನ್ನು ಪರಿಗಣಿಸಲಿಕ್ಕಿಲ್ಲ. ಏಕೆಂದರೆ, ಒಂದು ಪ್ರಕರಣದಲ್ಲಿ ವಾದ-ಪ್ರತಿವಾದ ಮುಗಿದ ಬಳಿಕ ಅದಕ್ಕೆ ಸಂಬಂಧಿಸಿದ ಪೂರಕ ವಿಷಯಗಳನ್ನು ಸಾಮಾನ್ಯವಾಗಿ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಒಂದೊಮ್ಮೆ ಸಾಕ್ಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರೆ, ಪರಿಗಣಿಸಬಹುದು. ಆದರೆ, ವಿಡಿಯೋನಲ್ಲಿರುವ ಹೇಳಿಕೆ ಯಡಿಯೂರಪ್ಪ ನವರದು ಎನ್ನಲಾಗುತ್ತಿದೆ. ಅಷ್ಟಕ್ಕೂ ಯಡಿಯೂರಪ್ಪ ಮೂರನೇ ವ್ಯಕ್ತಿ, ಪ್ರಕರಣದಲ್ಲಿ ಅವರು ಪಕ್ಷಗಾರ (ಪಾರ್ಟಿ) ಅಲ್ಲ, ಮೂರನೇ ವ್ಯಕ್ತಿಯ ಹೇಳಿಕೆಯನ್ನು ಪರಿಗಣಿಸಲು ಹೇಗೆ ಸಾಧ್ಯ? ಒಂದೊಮ್ಮೆ ಇದೇ ಮಾತನ್ನು ಅರ್ಜಿದಾರರು (ಅನರ್ಹ) ಶಾಸಕರು ಹೇಳಿದ್ದರೆ ಒಪ್ಪಬಹುದಿತ್ತು.
ಹಾಗಾಗಿ, ಈ ವಿಡಿಯೋ ಸುಪ್ರೀಂಕೋರ್ಟ್ ಪರಿಗಣಿಸಲಿಕ್ಕಿಲ್ಲ ಎಂದು ನನ್ನ ಅಭಿಪ್ರಾಯವೆಂದು ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ ಹೇಳಿದ್ದಾರೆ. “ಒಂದೊಮ್ಮೆ ಸುಪ್ರೀಂಕೋರ್ಟ್ ವಿಡಿಯೋ ಪರಿಗಣಿಸಿದರೆ, ಸಹಜ ನ್ಯಾಯದ ತತ್ವದಂತೆ ತಮ್ಮ ವಾದ ಮಂಡಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಕಾಶ ಕೊಡಬೇಕಾಗುತ್ತದೆ. ಧ್ವನಿಯ “ಸಾಚಾತನ’ ಸಾಬೀತಾಗಬೇಕು. ಅದೇ ರೀತಿ ವಿಡಿಯೋ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸುವಂತೆ ಹೇಳಬಹುದು. ಆಗ, ವಿಡಿಯೋ ಅನ್ನು ಸ್ಪೀಕರ್ ಕಳಿಸಬಹುದು. ಬಳಿಕ ಕಾನೂನು ಪ್ರಕ್ರಿಯೆ ಮೂಲಕ ಅದು ಇತ್ಯರ್ಥ ವಾಗಬೇಕಾಗುತ್ತದೆ ಎಂದು ಹೇಳಿದರು.
ಅಂಗೀಕಾರಾರ್ಹ ಸಾಕ್ಷ್ಯ: ವಿಡಿಯೋ ಅನ್ನು ಸುಪ್ರೀಂಕೋರ್ಟ್ ಪರಿಗಣಿಸಬಹುದು. ಅಷ್ಟೇ ಅಲ್ಲ, ಈ ವಿಡಿಯೋ “ಅಂಗೀಕಾರಾರ್ಹ ಸಾಕ್ಷ್ಯವಾಗಲಿದೆ’. ಪ್ರಕರಣದ ವಿಚಾರಣೆ ಮುಗಿದಿರುವ ಈ ಹಂತದಲ್ಲೂ ಅದನ್ನು ಗಣನೆಗೆ ತೆಗೆದುಕೊಳ್ಳಬಹುದು. ಏಕೆಂದರೆ, ಧ್ವನಿಸುರಳಿಗಳನ್ನು ವಿಚಾರಣೆಗೆ ಮತ್ತು ಸಾಕ್ಷ್ಯವಾಗಿ ಅಂಗೀಕರಿಸಿದ ಸಾಕಷ್ಟು ನಿರ್ದಶನಗಳಿವೆ. 1972ರಲ್ಲೇ ಧ್ವನಿಸುರಳಿ ಅಂಗೀಕರಿಸಲಾಗಿತ್ತು. ಸುಪ್ರೀಂಕೋರ್ಟ್‌ಗೆ ಪರಮಾಧಿಕಾರವಿದೆ. ಧ್ವನಿಯ ನೈಜತೆ ಪರೀಕ್ಷಿಸಲು ಯಾರ ವಿರುದ್ಧ ಆರೋಪ ಮಾಡಲಾಗಿದೆ ಅವರಿಗೆ ನೋಟಿಸ್ ಕೊಟ್ಟು, ಅವರ ವಾದ ಅಥವಾ ನಿಲುವು ಕೇಳಬೇಕಾಗುತ್ತದೆ. ಅಗ, ಸಮಯ ಹಿಡಿಯುತ್ತದೆ ಎಂದು ಮತ್ತೂಬ್ಬ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಹೇಳಿದರು.
ವಿಡಿಯೋ ಅಪ್ರಸ್ತುತ: ನನ್ನ ಪ್ರಕಾರ ವಿಡಿಯೋ ಗಣನೆಗೆ ತೆಗೆದುಕೊಳ್ಳುವ ಹಾಗಿಲ್ಲ. ಏಕೆಂದರೆ, ಪ್ರಕರಣ ಇರುವುದು ಸ್ಪೀಕರ್ ಆದೇಶ ಸರಿಯೋ ಅಥವಾ ತಪ್ಪೋ ಅನ್ನುವ ಬಗ್ಗೆ, ಈ ಹಂತದಲ್ಲಿ ನಡೆದ ಸಂಗತಿಯನ್ನು ಪರಿಗಣಿಸಲು ಬರುವು ದಿಲ್ಲ. ಒಂದು ವೇಳೆ ಈ ವಿಡಿಯೋ ಪರಿಗಣಿಸಬೇಕಾದರೆ, ಯಡಿಯೂರಪ್ಪ ಏನು ಹೇಳಿದ್ದಾರೆ ಅನ್ನುವುದು ಮುಖ್ಯ ಅಲ್ಲ. ಅನರ್ಹ ಶಾಸಕರು ಏನು ಹೇಳಿದ್ದಾರೆ ಅನ್ನುವುದು ಮುಖ್ಯ. ಯಡಿಯೂರಪ್ಪ ಹೇಳಿರಬಹುದು. ಆದರೆ, ಇವರು (ಅನರ್ಹ) ಶಾಸಕರು ಹೇಳಲಿಲ್ವ. ಹಾಗಾಗಿ, ನನ್ನ ಪ್ರಕಾರ ವಿಡಿಯೋ ಅಪ್ರಸ್ತುತ ಎಂದು ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಹೇಳುತ್ತಾರೆ.
ಮೈತ್ರಿ ಸರ್ಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತಕ್ಕೆ ಬೇಸತ್ತು ರಾಜೀನಾಮೆ ಕೊಟ್ಟಿರುವುದಾಗಿ ಅನರ್ಹ ಶಾಸಕರು ಹೇಳಿದ್ದರು. ಸರ್ಕಾರ ಬೀಳಿಸಲು ಬಿಜೆಪಿ ಜತೆಗೆ ಕೈಜೋಡಿಸಿ ರಾಜಿನಾಮೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದವು. ಈಗ ಅದಕ್ಕೆ ಪೂರಕವಾಗಿ ವಿಡಿಯೋ ಸಿಕ್ಕಿದೆ. ರಾಜೀನಾಮೆ ವಿಚಾರಕ್ಕೆ ಮುಖ್ಯ ವಿಷಯವಾಗಿರುವ ಕಾರಣ ವಿಡಿಯೋ ಪರಿಗಣನೆ ಸಾಧ್ಯವಿದೆ.
-ಕೆ.ವಿ. ಧನಂಜಯ, ಸುಪ್ರೀಂಕೋರ್ಟ್ ವಕೀಲ
ವಿಡಿಯೋ ಅನ್ನು ಪರಿಗಣಿಸದೇ ಇರುವುದಕ್ಕೆ ಯಾವುದೇ ಕಾರಣಗಳು ನನಗೆ ಕಾಣಿಸುತ್ತಿಲ್ಲ. ಏಕೆಂದರೆ, ಸರ್ಕಾರ ಬೀಳಿಸುವ ಉದ್ದೇಶದಿಂದ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಸಂವಿಧಾನದ ಶೆಡ್ನೂಲ್ 10 ಇವರಿಗೆ ಅನ್ವಯವಾಗುತ್ತದೆ. ಅದರಂತೆ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಮತ್ತು ಕೆಪಿಸಿಸಿ ವಾದವಾಗಿತ್ತು. ಅದಕ್ಕೆ ಖಚಿತಪಡಿಸಲು ಈ ವಿಡಿಯೋ ಪುರಾವೆಯಾಗಬಹುದು.
-ಎ.ಎಸ್. ಪೊನ್ನಣ್ಣ, ಹಿರಿಯ ವಕೀಲ
* ರಫೀಕ್ ಅಹ್ಮದ್