ಬೆಂಗಳೂರು: ಒಂದು ವರ್ಷದ ವಾರಂಟಿಯಿ ಇದ್ದ ಟೀವಿ, ಖರೀದಿಸಿದ ಮೂರೇ ತಿಂಗಳಿಗೆ ಕೆಟ್ಟು ಕೈಕೊಟ್ಟಿತ್ತು. ಹೇಗಿದ್ದರೂ ವಾರಂಟಿ ಅವಧಿಯಲ್ಲೇ ಕೆಟ್ಟಿದೆ. ಕೊಟ್ಟ ಮಾತಿನಂತೆ ಕಂಪನಿಯವರೇ ಫ್ರೀಯಾಗಿ ರಿಪೇರಿ ಮಾಡಿಕೊಡುತ್ತಾರೆ ಎಂದು ಟೀವಿಯನ್ನು ರಿಪೇರಿಗಾಗಿ ಕಂಪನಿ ವಶಕ್ಕೆ ನೀಡಿದರು. ಆದರೆ ಕಂಪನಿ ಮಾತ್ರ ದನ್ನು ಸರಿ ಮಾಡಿಕೊಡದೆ ಅಮಾಯಕ ಗ್ರಾಹಕರನ್ನ ಸತಾಯಿಸಿತು. ಹೀಗೆ ಸತಾಯಿಸಿದ ಕಂಪನಿ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೊರೆ ಹೋದ ಗ್ರಾಹಕ ಈಗ ಹೊಸ ಟೀವಿ ಪಡೆದು, ಕಂಪನಿಗೆ ಬುದ್ಧಿ ಕಲಿಸಿದ್ದಾರೆ.
ಮೂರೇ ತಿಂಗಳಿಗೆ ಕೈಕೊಟ್ಟ ಟೀವಿ ರಿಪೇರಿ ಮಾಡದೆ ಸತಾಯಿಸಿದ ಕಂಪನಿ ಹಾಗೂ ಟೀವಿ ಮಾರಾಟ ಮಾಡಿದ್ದ ಮಾರಾಟ ಮಳಿಗೆ ವಿರುದ್ಧ ಕಾನೂನು ಹೋರಾಟ ನಡೆಸಿದ ನೊಂದ ಗ್ರಾಹಕನಿಗೆ ಗ್ರಾಹಕ ನ್ಯಾಯಾಲಯವು “ಹೊಸ ಟಿವಿ’ ಕೊಡಿಸಿದೆ. ಈ ಮೂಲಕ ಎರಡು ವರ್ಷ ಕಾನೂನು ಹೋರಾಟ ನಡೆಸಿದ ಗ್ರಾಹಕನಿಗೆ ನ್ಯಾಯಾಲಯದಿಂಧ ನ್ಯಾಯ ಸಿಕ್ಕಿದೆ.
ಧಾರವಾಡ ಜಿಲ್ಲೆಯ ತೋಟಪ್ಪ ಎನ್. ಕುರ್ತಕೋಟಿ ಎಂಬುವವರ ದೂರು ಅರ್ಜಿ ಪುರಸ್ಕರಿಸಿರುವ ಬೆಂಗಳೂರಿನ ಎರಡನೇ ಗ್ರಾಹಕ ನ್ಯಾಯಾಲಯ, “ಒಂದು ವರ್ಷದ ವಾರಂಟಿ ಎಂದು ಹೇಳಿ ಮಾರಾಟ ಮಾಡಿದ್ದ ಟೀವಿ, ಮೂರೇ ತಿಂಗಳಿಗೆ ರಿಪೇರಿಗೆ ಬಂದಾಗ ದೂರುದಾರ ಗ್ರಾಹಕರಿಗೆ ಉತ್ಪನ್ನ ಸರಿಮಾಡಿಕೊಡದೇ ಸತಾಯಿಸಿದ ಕಂಪನಿಯ ಕ್ರಮ ಸರಿಯಲ್ಲ,’ ಎಂದು ಅಭಿಪ್ರಾಯಪಟ್ಟಿದೆ. ಜತೆಗೆ ಮುಂದಿನ 30 ದಿನಗಳ ಒಳಗೆ ದೂರುದಾರರಿಗೆ ಈ ಹಿಂದೆ ಖರೀದಿಸಿದ್ದ ಮಾದರಿಯದ್ದೇ ಹೊಸ ಟೀವಿ ನೀಡುವಂತೆ,’ ಪ್ರತಿವಾದಿಗಳಾದ ಮಾರಾಟ ಮಳಿಗೆ ಹಾಗೂ ಕಂಪನಿಗೆ ಆದೇಶಿಸಿದೆ.
ಕಂಪನಿ ವಾದಕ್ಕೆ ದಾಖಲಗಳಿಲ್ಲ: “ಯಾವುದೇ ಗ್ರಾಹಕ ತಾನು ಖರೀದಿಸಿದ ಉತ್ಪನ್ನ ಅಥವಾ ಸಾಧನ ಕೆಟ್ಟು ಹೋದಾಗ, ಮೊದಲು ನೀಡಿದ ಭರವಸೆಯಂತೆ ಅದನ್ನು ರಿಪೇರಿ ಮಾಡಿ ವಾಪಾಸ್ ನೀಡುವುದು ಮಾರಾಟ ಕಂಪನಿಗಳ ಜವಾಬ್ದಾರಿ. ಆದರೆ ಈ ಪ್ರಕರಣದಲ್ಲಿ ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದರೆ, ಕಂಪನಿ ದೂರುದಾರ ಗ್ರಾಹಕ ನೀಡಿದ್ದ ಟೀವಿ ರಿಪೇರಿ ಮಾಡಿಕೊಡದೇ ಅಲೆದಾಡಿಸಿರುವುದು ಸ್ಪಷ್ಟವಾಗಿದೆ. ಜತೆಗೆ ಗ್ರಾಹಕರಿಗೆ ಟಿವಿ ವಾಪಾಸ್ ನೀಡುವಂತೆ ಮಾರಾಟ ಮಳಿಗೆಯವರಿಗೆ ಸೂಚಿಸಲಾಗಿತ್ತು ಎಂಬ ಪ್ರತಿವಾದಿ ಕಂಪನಿಯ ವಕೀಲರ ವಾದಕ್ಕೆ ದಾಖಲೆಗಳಿಲ್ಲ,’ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತೋಟಪ್ಪ ಎನ್. ಕುರ್ತಕೋಟಿ ಅವರು ಬೆಂಗಳೂರಿನ ಹಂಪಿನಗರದಲ್ಲಿರುವ ನಾಕೋಡಾ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ 2015ರ ಜುಲೈ 26ರಂದು, 24,500 ರೂ. ಬೆಲೆಗೆ 32 ಇಂಚಿನ ಒನಿಡಾ ಎಲ್‌ಇಡಿ ಟೀವಿ ಖರೀದಿಸಿದ್ದರು. ಈ ವೇಳೆ ಮಾರಾಟ ಮಳಿಗೆಯವರು “ಟೀವಿಗೆ ಒಂದು ವರ್ಷದ ವಾರಂಟಿ ಇದೆ. ಈ ಅವಧಿಯಲ್ಲಿ ಕೆಟ್ಟರೆ ಕಂಪನಿಯೇ ಉಚಿತವಾಗಿ ರಿಪೇರಿ ಮಾಡಿಕೊಡುತ್ತದೆ’ ಎಂದು ಭರವಸೆ ನೀಡಿದ್ದರು. ಈ ಮಧ್ಯೆ ತೋಟಪ್ಪ ಅವರಿಗೆ ಶಾಕ್ ಕಾದಿತ್ತು. ಮೂರು ತಿಂಗಳ ಹಿಂದಷ್ಟೇ ಖರೀದಿಸಿದ್ದ ಟೀವಿ ಇದಕ್ಕಿದ್ದಂತೆ ಕೆಟ್ಟುಹೋಯಿತು.
ಹೀಗಾಗಿ ಹುಬ್ಬಳ್ಳಿಯಲ್ಲಿರುವ ಒನಿಡಾ ಕಂಪನಿಯ ಗ್ರಾಹಕ ಸೇವಾ ಕೇಂದ್ರಕ್ಕೆ ( ಕಸ್ಟಮರ್ ಕೇರ್) ಟೀವಿ ಕೊಂಡೊಯ್ದ ತೋಟಪ್ಪ, ವಾರಂಟಿ ಭರವಸೆಯಂತೆ ರಿಪೇರಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ಪರಿಶೀಲನೆ ನಡೆಸಿದ ಕಸ್ಟಮರ್ ಕೇರ್ ಸಿಬ್ಬಂದಿ, “ಟಿವಿಯ ಮದರ್ ಬೋರ್ಡ್‌ನಲ್ಲಿ ತೊಂದರೆಯಿದೆ. ಮದರ್ ಬೋರ್ಡ್ ವಾರಂಟಿ ನಿಯಮಗಳಿಗೆ ಒಳಪಡುವುದಿಲ್ಲ. ಹೀಗಾಗಿ ರಿಪೇರಿ ಮಾಡಿಕೊಡಲು ಬರುವುದಿಲ್ಲ ಎಂದು ಸ್ವೀಕೃತಿ ಪತ್ರ ನೀಡಿದ್ದರು.
ಹೀಗಾಗಿ ಟಿವಿ ವಾಪಾಸ್ ಪಡೆದ ತೋಟಪ್ಪ ಅವರು, ಟಿವಿ ಖರೀದಿ ಮಾಡಿದ್ದ ಹಂಪಿನಗರದ ನಾಕೋಡಾ ಎಲೆಕ್ಟ್ರಾನಿಕ್ಸ್ ಮಳಿಗೆಗೆ ಟೀವಿ ತೆಗೆದುಕೊಂಡು ಬಂದು ರಿಪೇರಿ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಇನ್ನೆರಡು ದಿನ ಬಿಟ್ಟು ಬಂದು ಟಿವಿ ಕೊಂಡೊಯ್ಯುವಂತೆ ಮಳಿಗೆ ಸಿಬ್ಬಂದಿ ತಿಳಿಸಿದ್ದರು. ಆದರೆ, ಹಲವು ತಿಂಗಳು ಕಳೆದರೂ ಟೀವಿ ರಿಪೇರಿ ಮಾಡಿ ವಾಪಾಸ್ ಕೊಡಲಿಲ್ಲ. ಈ ನಡುವೆ ಟೀವಿಗಾಗಿಯೇ ಬೆಂಗಳೂರು-ಹುಬ್ಬಳ್ಳಿ ನಡುವೆ ಹಲವು ಬಾರಿ ತಿರುಗಾಡಿ ಹಣ ಕಳೆದುಕೊಂಡಿದ್ದ ತೋಟಪ್ಪ, ಅಂತಿಮವಾಗಿ ಮಾರಾಟ ಮಳಿಗೆ ಹಾಗೂ ಒನಿಡಾ ಕಂಪನಿ ವಿರುದ್ಧ 2016ರಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ನೋಟಿಸ್ ಕೊಡೋವರೆಗೂ ಏನು ಮಾಡ್ತಿದ್ರಿ?: ಗ್ರಾಹಕ ತೋಟಪ್ಪ ಅವರು ತಂದುಕೊಟ್ಟಿದ್ದ ಟೀವಿಯನ್ನು ರಿಪೇರಿ ಮಾಡಿಸಿಕೊಂಡು ತೆಗೆದುಕೊಂಡು ಹೋಗುವಂತೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗಿತ್ತು. ಆದರೆ ಅವರೇ ಬಂದಿಲ್ಲ ಎಂದು ಕಂಪನಿಯು ವಿಚಾರಣೆ ವೇಳೆ ವಾದಿಸಿತ್ತು. ಈ ಅಂಶವನ್ನು ತಳ್ಳಿಹಾಕಿದ ನ್ಯಾಯಾಲಯ, “ಗ್ರಾಹಕ ಲೀಗಲ್ ನೋಟಿಸ್ ನೀಡುವವರೆಗೂ ಯಾಕೆ ಟೀವಿ ಮರಳಿಸಲಿಲ್ಲ. ಅವರಿಗೆ ಖರೆ ಮಾಡಿ ಖುದ್ದಾಗಿ ಮಾಹಿತಿ ನೀಡಬಹುದಿತ್ತು. ಇಷ್ಟಕ್ಕೂ ಟಿವಿ ಖರೀದಿಸಿದ ಮೂರೇ ತಿಂಗಳಿಗೆ ಕೆಟ್ಟುಹೋಗಿದೆ ಎಂದರೆ ಸಮಸ್ಯೆ ಇದೆ ಎಂದೇ ಅರ್ಥವಲ್ಲವೇ,’ ಎಂದು ತರಾಟೆಗೆ ತೆಗೆದುಕೊಂಡಿತು.