ಕೆಲವು ವರ್ಷಗಳ ಹಿಂದೆ ಸಿನಿಮಾ ತಾರೆಯರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಶುರು ಆಗಿ ಹವಾ ಎಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಕೆಲವು ವರ್ಷಗಳ ಕಾಲ ನಡೆದ ಈ ಕ್ರಿಕೆಟ್ ಪಂದ್ಯಾವಳಿ ಆಮೇಲೇನಾಯಿತೋ ಸುದ್ದಿಯೇ ಇಲ್ಲ. ಕ್ರಿಕೆಟ್ ನಂತರ ಸೂಪರ್ ಕಬಡ್ಡಿ ಮತ್ತು ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಎಂಬ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಪಂದ್ಯಾವಳಿಗಳು ನಡೆದವು. ಈಗ ಲಗೋರಿ ಸರದಿ.
ರಾಜೇಶ್ ಬ್ರಹ್ಮಾವರ್ ನೇತೃತ್ವದ ಇನ್ನೊಂದು ಕಾರ್ಮಿಕರ ಒಕ್ಕೂಟವು ಇದಕ್ಕೂ ಮುನ್ನ ಡಾ. ರಾಜ್ ಕಪ್ ಆಯೋಜಿಸಿತ್ತು. ಈಗ ಇದೇ ಮೊದಲ ಬಾರಿಗೆ ಆಗಸ್ಟ್ 13ರಂದು ಸೆಲೆಬ್ರಿಟಿ ಲಗೋರಿ ಪ್ರೀಮಿಯರ್ ಲೀಗ್ ಎಂಬ ಲಗೋರಿ ಪಂದ್ಯಾವಳಿಗಳನ್ನು ಆಯೋಜಿಸಿದೆ. ಈ ಲಗೋರಿ ಪಂದ್ಯಾವಳಿಗಳು ಚಾಮರಾಜಪೇಟೆಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಕ್ರಿಕೆಟ್ ಬಿಟ್ಟು ಲಗೋರಿ ಪಂದ್ಯಾವಳಿಯನ್ನು ಮಾಡುತ್ತಿರುವುದೇಕೆ ಎಂದರೆ, ದೇಸಿ ಕ್ರೀಡೆಗಳನ್ನು ಪ್ರೋತ್ಸಾಹಿಸುವುದಕ್ಕೆ ಎಂಬ ಉತ್ತರ ರಾಹೇಶ್ ಬ್ರಹ್ಮಾವರ್ ಅವರಿಂದ ಬರುತ್ತದೆ. ಈ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳಿದ್ದು, ಈ ಪೈಕಿ ಕನ್ನಡ ಚಿತ್ರರಂಗದಿಂದ 9 ತಂಡಗಳು, ತುಳು ಚಿತ್ರರಂಗದಿಂದ ಎರಡು ತಂಡಗಳು ಮತ್ತು ಕಿರುತೆರೆಯಿಂದ ಒಂದು ತಂಡ ಭಾಗವಹಿಸಲಿದೆ. ಪ್ರತಿ ತಂಡದಲ್ಲೂ ಆರು ಆಟಗಾರರು ಇದ್ದು, ಅದರಲ್ಲಿ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು ಇರುತ್ತಾರಂತೆ.
ಈ 12 ತಂಡಗಳನ್ನು ರಾಜು ಗೌಡ, ಕನಕಪುರ ಶ್ರೀನಿವಾಸ್, ಬಾ.ಮಾ. ಹರೀಶ್, ಕೆ.ಪಿ. ಶ್ರೀಕಾಂತ್, ಉದಯ್ ಪೂಜಾರಿ, ಸಚಿನ್ ಉಪ್ಪಿನಂಗಡಿ, ವೀರೇಂದ್ರ ಶೆಟ್ಟಿ ಸೇರಿದಂತೆ ಕೆಲವರು ಖರೀದಿಸಿದ್ದು, ಒಂದೊಂದು ತಂಡದ ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿದ್ದಾರೆ. ಇನ್ನು ಶ್ರೀನಗರ ಕಿಟ್ಟಿ, ಧನಂಜಯ್, ಥ್ರಿಲ್ಲರ್ ಮಂಜು, ನೀನಾಸಂ ಸತೀಶ್ ಸೇರಿದಂತೆ ಹಲವು ಕಲಾವಿದರು ಈ ಪಂದ್ಯಾವಳಿಗಳಲ್ಲಿ ಭಾಗವಹಿಸಲಿದ್ದಾರೆ.
ಅಂದಹಾಗೆ, ಈ ಪಂದ್ಯಾವಳಿ ನಡೆಯುವುದು ಒಂದೇ ದಿನ. ಒಂದು ದಿನದಲ್ಲಿ ಒಟ್ಟು 21 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಅಂತಿಮವಾಗಿ ಗೆದ್ದವರನ್ನು ವಿಜೇತರು ಎಂದು ಘೋಷಿಸಲಾಗಿದೆ. ಈ ಪಂದ್ಯಾವಳಿಯನ್ನು ಇನ್ನು ಮುಂದೆ ಪ್ರತಿ ವರ್ಷವೂ ಆಯೋಜಿಸಲಾಗುತ್ತದಂತೆ.