ಮೈಸೂರು: ಕಳೆದ ಮೂರು ತಿಂಗಳಿನಿಂದ ಬಿಸಿಲ ಬೇಗೆಗೆ ಸಿಲುಕಿ ಬಸವಳಿದಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹೊಸ ಚಿಗುರುನೊಂದಿಗೆ ಎಲ್ಲಡೆ ಹಸಿರಿನಿಂದ ನಳನಳಿಸುತ್ತಿದೆ. ವರ್ಷದ ಆರಂಭದಿಂದ ಬಿಸಿಲ ತಾಪಕ್ಕೆ ಇಡೀ ಕಾಡಿನಲ್ಲಿ ಸ್ಮಶಾನ ಮೌನ ಆವರಿಸಿತ್ತು. ಆದರೆ, ಇತ್ತೀಚೆಗೆ ಸುರಿದ ಮುಂಗಾರು ಪೂರ್ವ ಮಳೆಯಿಂದ ಅರಣ್ಯ ಭಾಗದಲ್ಲಿರುವ ಕೆರೆ, ಹಳ್ಳ, ತೊರೆಗಳು ಜೀವ ಪಡೆದುಕೊಳ್ಳುವುದರೊಂದಿಗೆ ಕಾಡಿಗೆ ನವ ಸ್ಪರ್ಶ ನೀಡಿವೆ.
ಕೆರೆಕಟ್ಟೆಗೆ ನೀರು: ಮುಂಗಾರು ಪೂರ್ವ ಮಳೆ ಹಾಗೂ ಕಳೆದ ವರ್ಷ ಸುರಿದ ಅಪಾರ ಪ್ರಮಾಣದ ಮಳೆಯಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿರುವ ಹಳ್ಳ, ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ. ಈ ಹಿನ್ನೆಲೆ ವನ್ಯ ಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗದೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಭರ್ಜರಿ ಮಳೆಯಿಂದ ಮರಗಿಡಗಳೆಲ್ಲ ಚಿಗುರೊಡೆದು ಹಸಿರಿನಿಂದ ವಿಜೃಂಭಿಸುತ್ತಿರುವುದು ಒಂದೆಡೆಯಾದರೆ, ಹೊಟ್ಟೆತುಂಬ ಆಹಾರ ಪಡೆದು ಕಾಡಲ್ಲಿ ಸಂಚರಿಸುವ ಪ್ರಾಣಿ, ಪಕ್ಷಿಗಳ ಸೊಬಗು ಮತ್ತೂಂದೆಡೆ.
ಹಸಿರಿನಿಂದ ನಳನಳಿಸುವ ಕಾಡನ್ನು ಹಾಗೂ ಪ್ರಾಣಿಗಳನ್ನು ನೋಡಲು ನಾಗರಹೊಳೆ ಕಡೆಗೆ ವನ್ಯಜೀವಿ ಪ್ರಿಯರು, ಪ್ರವಾಸಿಗರು ಬರುತ್ತಿದ್ದಾರೆ. ಕಾಡಿನಲ್ಲಿರುವ ಕೆರೆಗಳಲ್ಲಿ ಸಮೃದ್ಧವಾಗಿ ನೀರಿರುವ ಕಾರಣ ಪ್ರಾಣಿಗಳು ನೀರಿಗಾಗಿ ಪರದಾಡುವುದು ತಪ್ಪಿದಂತಾಗಿದ್ದು, ಮನುಷ್ಯ-ಪ್ರಾಣಿ ನಡುವಿನ ಸಂಘರ್ಷ ತಗ್ಗಲಿದೆ. 643 ಕಿ.ಮೀ. (248 ಚದರಮೈಲಿ) ವ್ಯಾಪಿಸಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ 80 ಹುಲಿಗಳಿದ್ದು, ಒಂದು ಸಾವಿರಕ್ಕೂ ಹೆಚ್ಚು ಆನೆ, ಚಿರತೆಗಳು ಸೇರಿದಂತೆ ವೈವಿಧ್ಯಮಯ ವನ್ಯಜೀವಿ ಸಂಕುಲವಿದೆ.
ಎಲ್ಲಾ ಕೆರೆಗಳಲ್ಲೂ ನೀರು: ನಾಗರಹೊಳೆಯ 158 ಕೆರೆಗಳ ಪೈಕಿ ಬಹುತೇಕ ಕೆರೆಗಳಲ್ಲಿ ನೀರಿದೆ. ಇವುಗಳಲ್ಲಿ 25 ಕೆರೆಗಳಿಗೆ ಕೊಳವೆ ಬಾವಿ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ಬಾರಿ ಕೇರಳದಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಆ ನೀರು ಕಬಿನಿ ಜಲಾಶಯಕ್ಕೆ ಹರಿದಿದೆ. ಇದರಿಂದ ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಹಿನ್ನೀರು ಸಂಗ್ರಹವಾಗಿದೆ.
ಕಬಿನಿಯಲ್ಲಿ ಹೆಚ್ಚಾದ ಒಳ ಹರಿವು: ಕೇರಳ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೆಗ್ಗಡದೇವನಕೋಟೆ ತಾಲೂಕಿನಲ್ಲಿರುವ ಕಬಿನಿ ಹಿನ್ನೀರಿನಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಸದ್ಯ ಜಲಾಶಯದ ನೀರಿನ ಮಟ್ಟ 2260.20 ಆಗಿದ್ದು ಕಳೆದ ವರ್ಷ ಇದೇ ದಿನ 2254.6 ಅಡಿಗಳಷ್ಟಿತ್ತು. ಹೀಗಾಗಿ ಜಲಾಶಯದಲ್ಲಿ 6 ಅಡಿ ನೀರು ಹೆಚ್ಚಾಗಿದೆ. ಕಳೆದ ವರ್ಷ 702 ಕ್ಯೂಸೆಕ್ ಇದ್ದ ಒಳಹರಿವು ಸದ್ಯ 1,110 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಹೀಗಾಗಿ ಕಳೆದ ಬಾರಿಗಿಂದ 312 ಕ್ಯೂಸೆಕ್ ನೀರು ಹೆಚ್ಚಾಗಿ ಹರಿದು ಬರುತ್ತಿದೆ. ಅಂತೆಯೆ ಕಬಿನಿ ಹಿನ್ನೀರಿನ ವ್ಯಾಪ್ತಿಗೆ ಬರುವ ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶದ ಕಾಡು ಪ್ರಾಣಿಗಳಿಗೆ ನೀರಿನ ಕೊರತೆ ದೂರವಾಗಿದೆ.
ಬಿದಿರು ಬಂದರೆ ತಪ್ಪಲಿದೆ ಗಜಕಾಟ: ದಶಕಗಳ ಹಿಂದೆ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಬಿದಿರು ಸಂಪೂರ್ಣವಾಗಿ ನಾಶವಾಯಿತು. ಬಿದಿರನ್ನೇ ಪ್ರಮುಖ ಆಹಾರವನ್ನಾಗಿ ಬಳಸುತ್ತಿದ್ದ ಆನೆಗಳು, ಬಿದಿರಿಲ್ಲದೇ ಕಾಡೆಲ್ಲ ಅಲೆದು, ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಕೃಷಿ ಭೂಮಿಯಲ್ಲಿ ಬೆಳೆದ ಬಾಳೆ, ಭತ್ತ, ರಾಗಿ ಸೇರಿದಂತೆ ಹಲವು ಬೆಳೆಯನ್ನು ನಾಶಗೊಳಿಸುತ್ತಿವೆ. ಇದರಿಂದ ಆನೆ-ಮಾನವ ಸಂಘರ್ಷ ಏರ್ಪಟ್ಟಿದ್ದು, ಇದಕ್ಕೆ ಕಡಿವಾಣ ಬೀಳಬೇಕಾದರೆ ಅರಣ್ಯದಲ್ಲಿ ಬಿದಿರು ಚಿಗುರೊಡೆಯಬೇಕಿದೆ. ಈಗಾಗಲೇ ಭೂಮಿಯಲ್ಲಿ ಹುದುಗಿದ್ದ ಬಿದಿರಿನ ಬೀಜಗಳು ನೈಸರ್ಗಿಕವಾಗಿ ಚಿಗುರೊಡೆಯುತ್ತಿವೆ. ಆದರೆ ಅವುಗಳನ್ನೆ ಪ್ರಾಣಿಗಳು ಕಿತ್ತು ತಿನ್ನುತ್ತಿದ್ದು, ಸದ್ಯಕ್ಕೆ ಬಿದಿರು ಬರುವ ನಿರೀಕ್ಷೆ ಕಡಿಮೆಯಾದಂತಿದೆ.
ನಾಗರಹೊಳೆ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಒಣ ಪ್ರದೇಶವಾದ ವೀರನ ಹೊಸಹಳ್ಳಿ, ಹುಣಸೂರು ವಲಯ ಹೊರತು ಪಡಿಸಿ ಉಳಿದ ಎಲ್ಲಾ ವಲಯದ ಕೆರೆಗಳಲ್ಲಿಯೂ ನೀರಿದೆ. ಹೀಗಾಗಿ ಪ್ರಾಣಿಗಳಿಗೆ ನೀರಿನ ಕೊರತೆ ತಪ್ಪಿದೆ. ನೀರಿನ ಸಂರಕ್ಷಣೆ ಉದ್ದೇಶದಿಂದ ಈ ಭಾಗದ ಕೆರೆಗಳು ಹಾಗೂ ಕೆರೆಗೆ ನೀರು ಹರಿದು ಬರುವ ಪೋಷಕ ಕಾಲುವೆಗಳು, ರಾಜಕಾಲುವೆಗಳಲ್ಲಿ ಹೂಳು ತೆಗೆಸಲಾಗಿದೆ. ಅಂತೆಯೆ ಈಗ ಕೆರೆಗೆ ನೀರು ಚೆನ್ನಾಗಿ ಹರಿದು ಬರುತ್ತಿದೆ.
-ನಾರಾಯಣಸ್ವಾಮಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ನಾಗರಹೊಳೆ
* ಸತೀಶ್ ದೇಪುರ