Advertisement

ಒಣತ್ಯಾಜ್ಯ ಸಂಗ್ರಹ ಕೇಂದ್ರಕ್ಕೆ ಹೊಸ ರೂಪ

11:38 AM Feb 11, 2017 | Team Udayavani |

ಬೆಂಗಳೂರು: ನಗರದ ಮಾರಪ್ಪನಪಾಳ್ಯದಲ್ಲಿ ಹಸಿರು ದಳ ಹಾಗೂ ಸ್ವೀಪ್‌ ಸ್ಮಾರ್ಟ್‌ ಸಾಮಾಜಿಕ ಉದ್ದಿಮೆ ಸಹಯೋಗದಲ್ಲಿ ನವೀಕರಿಸಲಾದ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಶುಕ್ರವಾರ ಅಧಿಕೃತ ಚಾಲನೆ ದೊರೆಯಿತು. 

Advertisement

ವಾರ್ಡ್‌ ಸಂಖ್ಯೆ 44ರಲ್ಲಿ (ಮಾರಪ್ಪನಪಾಳ್ಯ) ಆರಂಭಗೊಂಡ ಈ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಇತರೆ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗಿಂತ ತುಸು ಭಿನ್ನವಾಗಿದ್ದು, ಕನ್ವೇಯರ್‌ ಬೆಲ್ಟ್ (ಸಾಗಣೆ ಪಟ್ಟಿ) ಮತ್ತು ಬೇಲರ್‌ಗಳನ್ನು ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ತ್ಯಾಜ್ಯ ವಿಂಗಡಣೆ ಮಾಡಲಾಗುವುದು. ವಾರದ ಹಿಂದಷ್ಟೇ ಸ್ವೀಪ್‌ಸ್ಮಾರ್ಟ್‌ ಈ ಕೇಂದ್ರವನ್ನು ನವೀಕರಿಸಿದೆ.

ಈ ಕೇಂದ್ರದಲ್ಲಿರುವ ಕಸ ಆಯುವವರಿಗೆ ಕುಳಿತಲ್ಲಿಯೇ ಕಸ ಹರಿದುಬರುತ್ತದೆ. ಇದರಿಂದ ಕಸದ ವಿಂಗಡಣೆ ವ್ಯವಸ್ಥಿತವಾಗಿ ಮತ್ತು ತ್ವರಿತವಾಗಿ ನಡೆಯುತ್ತದೆ. ನಿತ್ಯ ಈ ಕೇಂದ್ರಕ್ಕೆ 1.25 ಟನ್‌ ಒಣತ್ಯಾಜ್ಯ ಬರುತ್ತದೆ. ಇದನ್ನು ವಿಂಗಡಿಸಿ, ಮರು ಉತ್ಪಾದನೆಗಾಗಿ ರವಾನಿಸಲಾಗುತ್ತದೆ. ಇದಕ್ಕೆ ನೆದರ್‌ಲ್ಯಾಂಡ್‌ ಸರ್ಕಾರ ಮತ್ತು ಬಿಬಿಎಂಪಿ ಸಾಥ್‌ ನೀಡಿದೆ.

ಬಿಬಿಎಂಪಿ ಮರು ಉತ್ಪಾದನೆಗೆ ಯೋಗ್ಯವಾದ, ಕಡಿಮೆ ಬೆಲೆಯ ಅಥವಾ ನಿಷ್ಕ್ರಿಯವಾದ ತ್ಯಾಜ್ಯವನ್ನು ಸಂಗ್ರಹಿಸಲು ನಗರದ 198 ವಾರ್ಡ್‌ಗಳ ಪೈಕಿ 160 ವಾರ್ಡ್‌ಗಳಲ್ಲಿ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಸ್ಥಾಪಿಸಿತು. ಈಗ ಈ ಕೇಂದ್ರಗಳನ್ನು ಕಸ ಆಯುವವರು, ಸಾðಪ್‌ ವ್ಯಾಪಾರಿಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಕೆಲ ಖಾಸಗಿ ಕಂಪೆನಿಗಳು ನಿರ್ವಹಿಸುತ್ತಿವೆ.

ಇದರಲ್ಲಿ ಹಸಿರು ದಳ ಕೈಗೆತ್ತಿಕೊಂಡ ಮಾರಪ್ಪನಪಾಳ್ಯ ತ್ಯಾಜ್ಯ ನಿರ್ವಹಣಾ ಕೇಂದ್ರವೂ ಒಂದು. ಈ ಕೇಂದ್ರಗಳು ಈಗ ತ್ಯಾಜ್ಯ ಆಯುವವರು ಮತ್ತು ಅನೌಪಚಾರಿಕ ಸಂಗ್ರಹಣೆಕಾರರಿಗೆ ನಿಯಮಿತ ಉದ್ಯೋಗ ಸೃಷ್ಟಿಸುವ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next