Advertisement

Modi ಸರಕಾರಕ್ಕೆ ನವ ಸಂಭ್ರಮ

11:24 PM May 29, 2023 | Team Udayavani |

ಹೊಸದಿಲ್ಲಿ/ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದು ಸೋಮವಾರ ( ಮೇ 29)ಕ್ಕೆ ಸರಿಯಾಗಿ ಒಂಬತ್ತು ವರ್ಷಗಳು ಪೂರ್ಣ ಗೊಂಡಿವೆ. ದೇಶದ 75 ವರ್ಷಗಳ ಇತಿಹಾಸ ನೋಡುವುದಿದ್ದರೆ ಕಾಂಗ್ರೆಸ್‌ ನೇತೃತ್ವದ ಸರಕಾರಗಳ ಆಳ್ವಿಕೆಯ ಅವಧಿಯೇ ಹೆಚ್ಚು. ಸತತ ಎರಡನೇ ಬಾರಿಗೆ ಅಧಿಕಾರ ಉಳಿಸಿಕೊಂಡ ಕಾಂಗ್ರೆಸೇತರ ಸರಕಾರದ ಮೊದಲ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಕೂಡ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಜಗತ್ತಿನ 5ನೇ ದೊಡ್ಡ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆ ಸೇರಿದಂತೆ ಹಲವು ಸಾಧನೆಗಳನ್ನೂ ಮಾಡಿದ ಖ್ಯಾತಿ ಹಾಲಿ ಸರಕಾರಕ್ಕೆ ಸಲ್ಲುತ್ತದೆ.

Advertisement

ಮಂಗಳವಾರದಿಂದ (ಮೇ 30) ಜೂ.30ರ ವರೆಗೆ ದೇಶದ ಐವತ್ತು ಸ್ಥಳಗಳಲ್ಲಿ ರ್ಯಾಲಿಗಳನ್ನು ಆಯೋಜಿಸಲೂ ಬಿಜೆಪಿ ಚಿಂತನೆ ನಡೆಸಿದೆ. ಈ ಪೈಕಿ ಹೆಚ್ಚಿನದ್ದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿ, ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ವಿವರಿಸಲಿದ್ದಾರೆ. ಅದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮೇ 31 (ಬುಧವಾರ) ರಾಜಸ್ಥಾನದ ಅಜ್ಮೇರ್‌ನಲ್ಲಿ ಆಯೋಜಿಸಲಾಗಿರುವ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಈ ಸಂದರ್ಭದಲ್ಲಿ ಉಪಸ್ಥಿತರಿಲಿದ್ದಾರೆ.

ಸಂಪರ್ಕದಿಂದ ಸಮರ್ಥನೆ: ಮೇ 30ರಿಂದ ಕೇಂದ್ರದ ಸಾಧನೆಗಳನ್ನು ಜನರಿಗೆ ಪ್ರಚಾರ ಮಾಡುವ ನಿಟ್ಟನಲ್ಲಿ ದೇಶಾದ್ಯಂತ ಬಿಜೆಪಿ ಸಂಪರ್ಕದಿಂದ ಸಮರ್ಥನೆ (ಸಂಪರ್ಕ್‌ ಸೇ ಸಮರ್ಥನ್‌) ಎಂಬ ಪ್ರಚಾರಾಭಿಯಾನ ಆರಂಭಿಸಲಿದೆ. ಜತೆಗೆ ಇನ್ನಿತರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿದೆ.

ಚುನಾವಣೆಗೆ ಸಿದ್ಧತೆ: ಈ ಎಲ್ಲ ಕಾರ್ಯಕ್ರಮ ಗಳ ಮೂಲಕ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿನ 50 ರ್ಯಾಲಿಗಳು ಮತ್ತು ಜನ ಸಂಪರ್ಕ ಕಾರ್ಯಕ್ರಮದ ಮೂಲಕ ಮೂರನೇ ಅವಧಿಗೆ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದೆ.
ಪ್ರಮುಖರಿಂದ ಸುದ್ದಿಗೋಷ್ಠಿ: ಪ್ರಧಾನಿ ಮೋದಿ ನೇತೃತ್ವದ ಸರಕಾರ ಒಂಬತ್ತು ವರ್ಷ ಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಮತ್ತು ಕೇಂದ್ರ ಸಚಿವರು ದೇಶದ ವಿವಿಧ ಭಾಗಗಳಲ್ಲಿ ಸುದ್ದಿಗೋಷ್ಠಿ ನಡೆಸಿ, ಸರಕಾರದ ಸಾಧನೆ ಗಳನ್ನು ವಿವರಿಸಿದ್ದಾರೆ. ಮೋದಿಯವರು ಮೊದಲ ಬಾರಿಗೆ 2014 ಮೇ 26ರಂದು, 2ನೇ ಬಾರಿಗೆ 2019 ಮೇ 30ರಂದು ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ್ದರು.

ಎನ್‌ಡಿಎಗೆ 25 ವರ್ಷಗಳ ಸಂಭ್ರಮ
ಮಹತ್ವ ಪೂರ್ಣ ಅಂಶವೆಂದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ)ಕ್ಕೆ ಬೆಳ್ಳಿ ಹಬ್ಬದ ಸಂಭ್ರಮ (25 ವರ್ಷ). 1998 ಮೇ 15ರಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ದಿ| ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಈ ಮೈತ್ರಿಕೂಟ ರಚನೆಯಾಗಿತ್ತು. 23 ಪಕ್ಷಗಳನ್ನು ಒಗ್ಗೂಡಿಸಿ ಹೇಗೆ ಸರಕಾರ ರಚನೆ ಮಾಡಿ, ಪೂರ್ಣಾವಧಿಯತ್ತ ಕೊಂಡೊಯ್ಯ ಬಹುದು ಎಂಬುದರ ಬಗ್ಗೆ ವಾಜಪೇಯಿ ದೇಶದ ರಾಜ ಕೀಯ ವ್ಯವಸ್ಥೆಗೆ ತೋರಿಸಿ ಕೊಟ್ಟದ್ದು ಈಗ ಇತಿಹಾಸ. ಎನ್‌ಡಿಎಯಲ್ಲಿ ಟಿಎಂಸಿ, ಎಐಎಡಿಎಂಕೆ, ಶಿವಸೇನೆ, ಬಿಜೆಡಿ ಕೂಡ ಇದ್ದವು. ಟಿಡಿಪಿ ಕೂಡ ಸೀಮಿತವಾಗಿ ಗುರುತಿಸಿಕೊಂಡಿತ್ತು. ರವಿವಾರ ಹೊಸದಿಲ್ಲಿಯಲ್ಲಿ ನಡೆದಿದ್ದ ಬಿಜೆಪಿ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಸೇರ್ಪಡೆಗೊಳಿಸುತ್ತಿಲ್ಲ ಎಂಬ ಮಿಥ್ಯೆ ಯನ್ನು ತೊಡೆದು ಹಾಕಲು ಪಕ್ಷದ ಆಡಳಿತ ಇರುವ ರಾಜ್ಯಗಳ ಮುಖ್ಯ ಮಂತ್ರಿಗಳು ಮುಂದಾಗಬೇಕು’ ಎಂದು ಸಲಹೆ ನೀಡಿದ್ದರು. 25 ವರ್ಷಗಳ ದೀರ್ಘ‌ ಕಾಲ ಮೈತ್ರಿಕೂಟ ಉಳಿದದ್ದು ಕಡಿಮೆ ಎಂದೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಂಸತ್‌ ಭವನ ಉದ್ಘಾಟನೆ ಬಹಿಷ್ಕರಿಸಬೇಕು ಎಂದು ಕಾಂಗ್ರೆಸ್‌ ಕರೆಯನ್ನು ವೈಎಸ್‌ಆರ್‌ಸಿಪಿ, ಜೆಡಿಎಸ್‌, ಬಿಜೆಡಿ, ಬಿಎಸ್‌ಪಿ, ಅಕಾಲಿ ದಳ, ಟಿಡಿಪಿ ತಿರಸ್ಕರಿಸಿರುವಂತೆಯೇ ಮೋದಿ ಈ ಮಾತುಗಳನ್ನಾಡಿದ್ದಾರೆ.

Advertisement

ಮೋದಿ ಸರಕಾರದ ಅವಧಿಯಲ್ಲಿ ಬಡವರ ಪರಿಸ್ಥಿತಿ ಹದಗೆಟ್ಟಿದೆ. ಹಣದುಬ್ಬರ ದೇಶದ ಜನರನ್ನು ಲೂಟಿ ಹೊಡೆದಿದೆ. ಬೆಲೆ ಏರಿಕೆಗಳ ಮೂಲಕ ಬಡವರ ಏಳಿಗೆಯನ್ನು ನಿರ್ನಾಮ ಮಾಡಿದೆ. ಇದನ್ನೇ ಕೆಲ ಸಚಿವರು ಸಮರ್ಥಿಸಿಕೊಂಡು ಮಹಾ ಸಾಧನೆ ಎಂದು ನಗಾರಿ ಬಡಿಯುತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

ಮೋದಿ ಸರಕಾರದ ಅವಧಿಯಲ್ಲಿ ದೇಶದ ಗಡಿಗಳು ಭದ್ರಗೊಂಡಿವೆ. ಜಗತ್ತಿನಲ್ಲಿ ದೇಶದ ಹಿರಿಮೆ-ಗರಿಮೆ ವೃದ್ಧಿಯಾಗಿದೆ. ಆತಂರಿಕ ಭದ್ರತೆಯೂ ಇಮ್ಮಡಿಯಾಗಿದೆ.
ಯೋಗಿ ಆದಿತ್ಯನಾಥ್‌, ಉ.ಪ್ರ. ಮುಖ್ಯಮಂತ್ರಿ

ಚಿದಂಬರಂಗೆ ನಿರ್ಮಲಾ ತರಾಟೆ
2 ಸಾವಿರ ರೂ. ನೋಟುಗಳನ್ನು ಜಾರಿಗೊಳಿಸಿ, ವಾಪಸ್‌ ಪಡೆದ ನಿರ್ಧಾರದ ಬಗ್ಗೆ ವಿತ್ತ ಖಾತೆ ಮಾಜಿ ಸಚಿವ ಪಿ.ಚಿದಂಬರಂ ಟೀಕೆಯನ್ನು ವಿತ್ತ ಸಚಿವೆ ನಿರ್ಮಲಾ ಟೀಕಿಸಿದ್ದಾರೆ. ಮುಂಬಯಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ನಾಯಕತ್ವ ದೇಶದ ಸರ್ವಾಂಗೀಣ ಬೆಳವಣಿಗೆಗೆ ನೆರವಾಗಿದೆ. ಹಲವಾರು ಆಯಾಮಗಳನ್ನು ಅವಲಂಬಿಸಿ ಆರ್‌ಬಿಐ 2 ಸಾವಿರ ರೂ. ನೋಟುಗಳನ್ನು ವಾಪಸ್‌ ಪಡೆದಿದೆ. ಜಗತ್ತಿನ ಇತರ ದೇಶಗಳ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ಸ್ಥಿತಿ ಹೋಲಿಕೆ ತಪ್ಪು. ಜತೆಗೆ ಹತ್ತು ವರ್ಷಗಳ ಕಾಲ ವಿತ್ತ ಸಚಿವ ಸ್ಥಾನ ನಿಭಾಯಿಸಿದ್ದ ಚಿದಂಬರಂ ಅವರು ಆರ್‌ಬಿಐನ ವಿಶ್ವಾಸಾರ್ಹತೆ ಪ್ರಶ್ನಿಸಿದ್ದು ಅವರ ಘನತೆಗೆ ತಕ್ಕುದಲ್ಲ ಎಂದರು. ಚಿದಂಬರಂ ಅವರು, 2 ಸಾವಿರ ರೂ.ನೋಟನ್ನು ಮುಂದಾಲೋಚನೆ ಇಲ್ಲದೆ ಜಾರಿಗೊಳಿಸಲಾಗಿತ್ತು. ಈಗ ಅದನ್ನು ವಾಪಸ್‌ ಪಡೆಯುತ್ತಿರುವುದರಿಂದ ಆರ್‌ಬಿಐನ ವಿಶ್ವಾಸಾರ್ಹತೆ ಮತ್ತು ದೇಶದ ಕರೆನ್ಸಿಯ ಸ್ಥಿರತೆಯ ಮೇಲೆಯೇ ಪ್ರಶ್ನೆ ಮೂಡುವಂತಾಗಿದೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next