ಚಿತ್ರದುರ್ಗ: ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಜೊತೆ ಅಧಿಕಾರ ಹಚ್ಚಿಕೊಂಡಾಗ ಇವ್ರು ಆರ್ ಎಸ್ ಎಸ್ ನವರು ಅಂತ ಗೊತ್ತಿರಲಿಲ್ಲವೇ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಶುಕ್ರವಾರ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕುಮಾರಸ್ವಾಮಿ ಅವರು ರಾಜಕಾರಣಕ್ಕೆ ಬಂದಾಗ ಒಂದು ಮಾತನಾಡುವುದು,
ರಾಜಕಾರಣ ಇಲ್ಲದಿದ್ದಾಗ ಒಂದು ಮಾತನಾಡುವುದು ಬಿಡಬೇಕು.ಬಹುಶಃ ಆರ್ ಎಸ್ಎಸ್ ಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ.
ಯಾವುದೇ ಕಾರಣಕ್ಕೂ ಅಧಿಕಾರದ ವ್ಯವಸ್ಥೆಯಲ್ಲಿ ಆರ್ ಎಸ್ಎಸ್ ನ ಪಾತ್ರ ಇರುವುದಿಲ್ಲ ಎಂದರು.
ಸಂಘದ ಸಿದ್ದಾಂತಗಳನ್ನ ನಾವೆಲ್ಲರೂ ಸ್ವೀಕಾರ ಮಾಡಿಕೊಂಡಿದ್ದು, ಹಾಗಂತ ಹೇಳಿ ಐಎಎಸ್ ಆಡಳಿತ ವ್ಯವಸ್ಥೆ ಮೇಲೆ ಯಾವುದೇ ರಾಜಕಾರಣಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದರು.
ಉತ್ತರಪ್ರದೇಶದ ಲಿಖೀಂಪುರದಲ್ಲಿ ನಡೆದ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿ, ಖಂಡಿತವಾಗಿಯೂ ಆ ಬಗ್ಗೆ ತನಿಖೆ ಆಗಬೇಕಿದೆ, ಆಗುತ್ತದೆ. ಯಾರೇ ತಪ್ಪು ಮಾಡಿದರೂ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದರು.
ಬಿಜೆಪಿ ಕೊಲೆ ಗಡುಕ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ 3000 ಜನ ಆತ್ಮಹತ್ಯೆ ಮಾಡಿಕೊಂಡಿದ್ದರು ಆವಾಗ ಇವರು ಎಲ್ಲಿ ಹೋಗಿದ್ದರು. ಆಡಳಿತ ನಡೆಸುವ ಯಾವುದೇ ಸಿಎಂ, ಪಿಎಂ ಅವರಿಗೆ ಸ್ಥಳೀಯವಾಗಿ ನಡೆಯುವ ಘಟನೆಗಳಿಗೆ ಸಂಬಂಧವಿರುವುದಿಲ್ಲ. ಜವಾಬ್ದಾರಿಯಿಂದ ಸಿಎಂ ಆಗಿ ಕೆಲಸ ಮಾಡಿದವರು ಈ ರೀತಿ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದರು.
ಮಾಜಿ ಸಿಎಂ ಬಿ ಎಸ್ ವೈ ಆಪ್ತರ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ , ಈ ಬಗ್ಗೆ ಬಿಎಸ್ ವೈ, ರಾಘವೇಂದ್ರ ಅವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ.ಈ ದಾಳಿಯನ್ನ ರಾಜಕಾರಣಕ್ಕೆ ಜೋಡಿಸಲು ಹೋಗಬೇಡಿ.ಐಟಿ ದಾಳಿ ದಿನನಿತ್ಯ ದೇಶದಲ್ಲಿ ಆಗುತ್ತಲೇ ಇರುತ್ತದೆ. ಅದಕ್ಕೂ, ಬಿಎಸ್ ವೈ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಎರಡೂ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.