Advertisement

ಮನ ತಣಿಸಿದ ಸಂಗೀತ ಕಛೇರಿ

06:00 AM Jul 20, 2018 | |

ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಿದ್ದ ಚೆನ್ನೈಯ ಯುವ ಗಾಯಕಿ ಕುಮಾರಿ ಸಹನಾ ಸಾಮ್ರಾಜ್‌ ಜೂ.25 ಸಂಗೀತ ಕಛೇರಿ ನೀಡಿದರು. ಸಭಾಂಗಣ ಪೂರ್ತಿ ತುಂಬಿದ್ದ ಸಂಗೀತ ರಸಿಕರ ಮನದಂತರಾಳದ ಬಯಕೆಯನ್ನು ಮೊದಲೇ ಅರಿತಂತೆ ಪ್ರಸ್ತುತಗೊಂಡ ಸಂಗೀತ ಸಭಿಕರಿಂದ ದೊರೆತ ಕರತಾಡನದ ಪ್ರಶಂಸೆ ಕಛೇರಿಯ ಯಶಸ್ಸನ್ನು ಪ್ರತಿಬಿಂಬಿಸುತ್ತಿತ್ತು. 

Advertisement

ಸ್ವಾತಿ ತಿರುನಾಳರ ಮಾಯಾಮಾಳವಗೌಳ ರಾಗ-ರೂಪಕ ತಾಳದ ತುಳಸೀದಳ ಕೃತಿಯಿಂದ ಪ್ರಾರಂಭವಾದ ಕಛೇರಿ ಕೃತಿ ದೇವರನಾಮಗಳನ್ನು ಒಂದರ ಹಿಂದೊಂದರಂತೆ ಪೋಣಿಸುವ ಮೂಲಕ ಎಲ್ಲ ವರ್ಗದ ಶ್ರೋತೃಗಳಿಗೂ ಸಂತಸ ನೀಡಿತು. ಕೇದಾರಗೌಳ-ಮಿಶ್ರಛಾಪು ತಾಳದ ತನುವು ನಿನ್ನದು, ವಸಂತ ರಾಗ-ರೂಪಕ ತಾಳದ ಸೀತಮ್ಮ ಮಾಯಮ್ಮ ಶ್ಯಾಮ ಶಾಸ್ತ್ರಿಗಳ, ವರಾಳಿ- ಆದಿತಾಳದ ಮಾಮವ ಮೀನಾಕ್ಷಿ, ರಾಗಮಾಲಿಕೆ-ಆದಿತಾಳದ ಬಾರೋ ಕೃಷ್ಣಯ್ಯ, ಕಲ್ಯಾಣ ವಸಂತ-ಆದಿ ತಾಳದ ಇನ್ನು ದಯೆ ಬಾರದೆ, ರೇವತಿ-ಆದಿ ತಾಳದ ಶಂಭೋ ಶಿವ ಶಂಭೋ , ಬೇಹಾಗ್‌-ಆದಿತಾಳದಲ್ಲಿನ ಸಾರಮೈನ ಜಾವಳಿ, ಕಾಪಿ-ಆದಿತಾಳದ ಜಗದೋದ್ಧಾರನ, ನಾದನಾಮಕ್ರಿಯ-ಆದಿತಾಳದ ದಾಸನ ಮಾಡಿಕೋ, ತಿಲ್ಲಾನ, ಭಾಗ್ಯದ ಲಕ್ಷ್ಮಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಗಮಕ-ಬಿರ್ಕಾಗಳಿಗೆ ಪಳಗಿಸಿಕೊಂಡ ಉತ್ತಮ ಶಾರೀರ, ರಾಗ-ಸಾಹಿತ್ಯ ಭಾವಗಳನ್ನು ಪುಷ್ಠಿàಕರಿಸಿ ಶ್ರೋತೃಗಳಿಂದ ಭಲೇ ಅನ್ನಿಸಿಕೊಳ್ಳುವ ಕಲಾವಿದೆಯ ಸಾಮರ್ಥ್ಯ ಶ್ಲಾಘನೀಯ. ವಯಲಿನ್‌ನಲ್ಲಿ ವಿಶ್ವಜಿತ್‌ ಮತ್ತೂರು ಮತ್ತು ಮೃದಂಗದಲ್ಲಿ ನಿಕ್ಷಿತ್‌ ಟಿ. ಪುತ್ತೂರು ಸಹಕಸಿದರು. 

ಈ ಸಂದರ್ಭದಲ್ಲಿ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭದಿಂದ ಅಂತ್ಯದ ತನಕ ಕಛೇರಿಯನ್ನು ಆಲಿಸಿ ಕೊನೆಗೆ ಕಲಾವಿದರೆಲ್ಲರನ್ನೂ ಸನ್ಮಾನಿಸಿದರು. 

ಪಿ. ನಿತ್ಯಾನಂದ ರಾವ್‌ 

Advertisement

Udayavani is now on Telegram. Click here to join our channel and stay updated with the latest news.

Next