Advertisement

ಗ್ರಾಮೀಣ ಪರಿಸರದಲ್ಲಿ ವಿಜೃಂಭಿಸಿದ ಕಛೇರಿ

06:23 PM Jan 31, 2020 | mahesh |

ಸುಳ್ಯದ ಅಡ್ಕಾರು ವಿನೋಬ ನಗರದಲ್ಲಿ ಸುನಾದ ಸಂಗೀತ ಕಲಾ ಶಾಲೆ ಕಲ್ಲುಗುಂಡಿ ಹಾಗೂ ವಿನೋಬನಗರ ಶಾಖೆಯ ಸಂಗೀತೋತ್ಸವ ಇತ್ತೀ ಚೆಗೆ ನಡೆಯಿತು. ಆ ಪ್ರಯುಕ್ತ ಸುನಾದ ಸಂಸ್ಥೆಯು ಏರ್ಪಡಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ವಿ| ಡಾ| ಶ್ರೇಯಸ್‌ ನಾರಾಯಣನ್‌ ಚೆನ್ನೈ ಅವರ ಗಾನ ಮಾಧುರ್ಯತೆ ಪಕ್ವವಾದ ಪಕ್ಕವಾದ್ಯದೊಂದಿಗೆ ಸತತವಾಗಿ ಮೂರು ಗಂಟೆಗಳ ಕಾಲ ಗಾನಲೋಕದಲ್ಲಿ ವಿಹರಿಸುವಂತೆ ಮಾಡಿತು.

Advertisement

ಸಾಂಪ್ರದಾಯಿಕವಾಗಿ ಅಭೋಗಿ ವರ್ಣದೊಂದಿಗೆ ಆರಂಭವಾದ ಕಛೇರಿ ಸಂಗೀತದಲೆಗಳೊಂದಿಗೆ ಸಂಚಲನ ಮೂಡಿಸಿತು. ಅನಂತರ ಮುತ್ತುಸ್ವಾಮಿ ದೀಕ್ಷಿತರ ಕೃತಿ ಮಹಾಗಣಪತಿಂ ಮನಸಾಸ್ಮರಾಮಿ -ನಾಟರಾಗದಲ್ಲಿ ಪ್ರಸ್ತುತಪಡಿಸಿದ್ದು ನೆರವಲ್‌ ಮತ್ತು ಕಲ್ಪನಾ ಸ್ವರಗಳಿಂದ ಆಕರ್ಷಕವಾಗಿ ರಂಜಿಸಿತು. ಮುಂದೆ ಸರಸ್ವತಿ ನಮೋಸ್ತುತೆ -ಸರಸ್ವತಿ ರಾಗದಲ್ಲಿ ಆಲಾಪನೆ ಹಾಗೂ ಸ್ವರ ಪ್ರಸ್ತಾರದೊಂದಿಗೆ ಸುಂದರವಾಗಿ ಮೂಡಿ ಬಂತು. ಆ ಬಳಿಕ ಮನವ್ಯಾಲ ಕಿಂಚರ ಎಂಬ ಕೃತಿಯನ್ನು ನಳಿನಕಾಂತಿ ರಾಗದಲ್ಲಿ ಹಿತವಾದ ಆಲಾಪನೆ ಮತ್ತು ಸ್ವರಪ್ರಸ್ತಾರಗಳೊಂದಿಗೆ ಪ್ರಸ್ತುತ ಪಡಿಸಿದ್ದು ಮೋಹಕವಾಗಿತ್ತು.

ಮೈಸೂರು ವಾಸುದೇವಾಚಾರ್ಯರ ವಿರಚಿತ ನಿನ್ನೆ ನಮ್ಮಿತಿನಯ್ಯ ಕೃತಿಯನ್ನು ಉಪಪ್ರಧಾನವಾಗಿ ಆಯ್ದುಕೊಂಡು ಮಿಶ್ರಛಾಪು ತಾಳದಲ್ಲಿ ಸಿಂಹೇಂದ್ರ ಮಧ್ಯಮ ರಾಗದ ವಿವಿಧ ಮಜಲುಗಳನ್ನು ಆಲಾಪನೆ, ನೆರವಲ್‌ ಹಾಗೂ ಸ್ವರ ವಿನ್ಯಾಸದೊಂದಿಗೆ ವಿಸ್ತಾರವಾಗಿ ಪ್ರಸ್ತುತಪಡಿಸಿದ್ದು ರೋಚಕತೆಯನ್ನುಂಟು ಮಾಡಿತು. ಮನೋಧರ್ಮಕ್ಕನುಗುಣವಾಗಿ ವಯಲಿನ್‌ ,ಮೃದಂಗ, ಮೋರ್ಸಿಂಗ್‌ ನಾದವೂ ಸುಮಧುರವಾಗಿ ಪೂರಕವಾಗಿತ್ತು. ಬಳಿಕ ನನ್ನುಕನ್ನತಲ್ಲಿ ಎಂಬ ತ್ಯಾಗರಾಜರ ಕೃತಿಯನ್ನು ಕೇಸರಿ ರಾಗದಲ್ಲಿ ಸೂಕ್ಷ್ಮವಾದ ಭಾವಗಳಿಂದ ನಿರೂಪಿಸಿದರು. ಆ ಬಳಿಕ ಸೀತಮ್ಮ ಮಾಯಮ್ಮ ವಸಂತ ರಾಗದಲ್ಲಿ ಅಚ್ಚುಕಟ್ಟಾದ ನೆರವಲ್‌ ಸ್ವರ ನಿರೂಪಣೆಯೊಂದಿಗೆ ಭಾವಪೂರ್ಣವಾಗಿ ಹಾಡಿದ್ದು ಮುದ ನೀಡಿತು.

ಕಛೇರಿಯ ಪ್ರಮುಖ ಆಕರ್ಷಣೆಯಾಗಿ ತ್ಯಾಗರಾಜರ ರಚನೆ ಎವ್ವರಿಮಾಟ ಕೃತಿಯನ್ನು ಆದಿತಾಳದಲ್ಲಿ ವಿಶಿಷ್ಟವಾಗಿ ವಿಸ್ತೃತವಾದ ಆಲಾಪನೆ, ವಿನ್ಯಾಸಪೂರಿತ ಸಂಗತಿಗಳು, ನೆರವಲ್‌ ಹಾಗೂ ವಿಸ್ತಾರವಾದ ಕಲ್ಪನಾ ಸ್ವರಗುತ್ಛಗಳೊಂದಿಗೆ ಕಾಂಭೋಜಿ ರಾಗದ ಸೌಂದರ್ಯವನ್ನು ನಾಜೂಕಾಗಿ ಅನಾವರಣಗೊಳಿಸಿದ್ದು ಕಲಾವಿದರ ನೈಪುಣ್ಯತೆಯನ್ನು ಪ್ರತಿಬಿಂಬಿಸಿತು. ಈ ಸಂದರ್ಭದಲ್ಲಿ ತನಿ ಆವರ್ತನ ವೈಶಿಷ್ಟ್ಯ ಪೂರ್ಣವಾಗಿತ್ತು.

ಮುಂದೆ ರಂಗ ಬಾರೋ…ಪಾಂಡುರಂಗ ಬಾರೋ ಹಾಗೂ ಸಿಂಧು ಭೈರವಿ ರಾಗದಲ್ಲಿ ವೆಂಕಟಾಚಲ ನಿಲಯಂ ಆಲಾಪನೆಯೊಂದಿಗಿನ ಗಾಯನ ಸುಶ್ರಾವ್ಯವಾಗಿತ್ತು. ಭಕ್ತಜನವತ್ಸಲೇ- ಬೃಂದಾವನಿ ರಾಗದಲ್ಲಿ ಮೂಡಿ ಬಂದ ಮರಾಠಿ ಅಭಂಗ್‌ ಕಛೇರಿಯ ವೈವಿಧ್ಯತೆಗೆ ರಂಗನ್ನು ತಂದಿತು. ಧನಶ್ರೀ ತಿಲ್ಲಾನ ಹಾಗೂ ಪವಮಾನದೊಂದಿಗೆ ಕಛೇರಿ ಸಂಪನ್ನಗೊಂಡಿತು. ವಯಲಿನ್‌ನಲ್ಲಿ ವಿ| ವಿಠಲ್‌ ರಾಮಮೂರ್ತಿ ಚೆನ್ನೈ, ಮೃದಂಗದಲ್ಲಿ ವಿ|ಕಾಂಚನ ಎ.ಈಶ್ವರ ಭಟ್‌, ಮೋರ್ಸಿಂಗ್‌ನಲ್ಲಿ ವಿ| ಎಸ್‌.ರಮೇಶ್‌ ಮೈಸೂರು ಸಹ ಕ ರಿಸಿದರು.

Advertisement

– ಮಮತಾ ದೇವ, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next