Advertisement

ಕಾರ್ಕಳಕ್ಕೆ ಒಲಿದ ಮಲ್ಟಿಪರ್ಪಸ್‌ ಕ್ರೀಡಾಂಗಣ

07:21 PM Nov 08, 2020 | mahesh |

ಕಾರ್ಕಳ: ಕಾರ್ಕಳ ತಾ|ನ ಕ್ರೀಡಾಸಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅನೇಕ ಕ್ರೀಡಾಭಿಮಾನಿಗಳ ಒತ್ತಾಸೆಯಂತೆ ತಾಲೂಕಿನಲ್ಲಿ ಮಲ್ಟಿಪರ್ಪಸ್‌ ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರದಿಂದ 3.5 ಕೋ.ರೂ. ಅನುದಾನ ಬಿಡುಗಡೆಗೊಂಡಿದ್ದು, ತಾಲೂಕಿನಲ್ಲಿ ಮಲ್ಟಿಪರ್ಪಸ್‌ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಲಿದೆ.

Advertisement

ರಾಜ್ಯದ 4 ಕಡೆಗಳಲ್ಲಿ ನಿರ್ಮಾಣ
ಕೇಂದ್ರ ಸರಕಾರ ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯದ ನಾಲ್ಕು ಕಡೆಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 19.50 ಕೋ.ರೂ. ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಉಡುಪಿ ಜಿಲ್ಲೆಯ ಕಾರ್ಕಳ, ಚಿಕ್ಕಮಗಳೂರು ಹಾಗೂ ಕೊಪ್ಪಳದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಒಳಾಂಗಣ ಮತ್ತು ವಿವಿಧೋದ್ದೇಶ ಕ್ರೀಡಾಂಗಣಗಳು ನಿರ್ಮಾಣವಾಗಲಿವೆ.

ಪ್ರಣಾಳಿಕೆಯ ಭರವಸೆ ಈಡೇರಿಕೆ
ತಾ|ನಲ್ಲಿ ಕ್ರೀಡಾಂಗಣ ಹೊಂದುವ ಬಗ್ಗೆ 2018ರ ಚುನಾವಣೆಪೂರ್ವ ಮುನಿಯಾಲಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಬಡ್ಡಿ ಟೂರ್ನಮೆಂಟ್‌ ಸಂದರ್ಭ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. 2018ರ ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಸ್ತಾವಿಸಲಾಗಿತ್ತು.

ಅನುದಾನಕ್ಕೆ ಮನವಿ
ಚುನಾವಣೆ ಪ್ರಣಾಳಿಕೆ ಪಟ್ಟಿಯಲ್ಲಿರುವ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಪ್ರವೃತ್ತರಾಗಿದ್ದರು. ಅಂದು ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್‌ ರಾಥೋಡ್‌ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾಗಿ ಕಾರ್ಕಳ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣ ನಿರ್ಮಿಸಲು ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದ್ದರು.

ಏನೆಲ್ಲ ಇರಲಿದೆ?
ಕ್ರೀಡಾಂಗಣವು ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗಲಿದೆ. 4 ಶೆಟ್ಲ ಮತ್ತು ಬ್ಯಾಡ್ಮಿಂಟನ್‌ ಕೋರ್ಟ್‌, ಜಿಮ್ನಾಶಿಯಂ ಕೋರ್ಟ್‌, ಟೇಬಲ್‌ ಟೆನಿಸ್‌ ಕೋರ್ಟ್‌ಗಳು ಹಾಗೂ ಇನ್ನಿತರೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣವಾಗಲಿದೆ. ಕ್ರೀಡಾಳುಗಳಿಗೆ ಅಭ್ಯಾಸಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯಗಳು ಇರಲಿವೆೆ. ಬಾಸ್ಕೆಟ್‌ ಬಾಲ್‌, ವಾಲಿಬಾಲ್‌ ಕ್ರೀಡಾಂಗಣದ ನಿರ್ಮಾಣವೂ ಬಜೆಟ್‌ ಆಧಾರದಲ್ಲಿ ನಿರ್ಧರಿತವಾಗಲಿದೆ.

Advertisement

ನಿರ್ಮಾಣಕ್ಕೆ ಕ್ರಮ
ಕೇಂದ್ರದಿಂದ 3.5 ಕೋ.ರೂ. ಅನುದಾನ ತಾ|ನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಮಂಜೂರುಗೊಂಡಿದೆ. ಕ್ರೀಡಾಸಕ್ತರ ಬಹು ಕಾಲದ ಬೇಡಿಕೆ ಈಡೇರಲಿದೆ. ಕ್ರೀಡಾಂಗಣದ ರೂಪುರೇಷೆ ಸಿದ್ಧಪಡಿಸಿ ಅತೀ ಶೀಘ್ರ ಆಡಳಿತಾತ್ಮಕ ಅನುಮೋದನೆ ಪಡೆಯುತ್ತೇವೆ. ಬಳಿಕ ಭೂಮಿ ಪೂಜೆಗೆ ದಿನ ನಿಗದಿಪಡಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು
-ವಿ.ಸುನಿಲ್‌ ಕುಮಾರ್‌, ಕಾರ್ಕಳ ಶಾಸಕರು

ವಿವಿಧ ಕ್ರೀಡೆಗಳಿಗೆ ಅವಕಾಶ
ಬಜೆಟ್‌ಗೆ ಅನುಗುಣವಾಗಿ ಕ್ರೀಡಾಂಗಣದ ಒಳಗೆ ಯಾವುದಕ್ಕೆಲ್ಲ ಅವಕಾಶ ನೀಡಬಹುದು ಎನ್ನುವ ಬಗ್ಗೆ ಶಾಸಕರ ಮಾರ್ಗದರ್ಶನದಲ್ಲಿ ಎಂಜಿನಿಯರ್‌ಗಳ ಮೂಲಕ ಪ್ಲಾನ್‌ ಸಿದ್ಧಪಡಿಸಲಾಗುತ್ತದೆ. ಕ್ರೀಡಾಂಗಣ ಯಾವ ರೀತಿ ಇರುತ್ತದೆ ಎನ್ನುವುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ವಿವಿಧ ಕ್ರೀಡೆಗಳಿಗೆ ಅವಕಾಶ ನೀಡಲಾಗುತ್ತದೆ.
-ಡಾ| ರೋಶನ್‌ಕುಮಾರ್‌ ಶೆಟ್ಟಿ, ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ

3.5 ಕೋ.ರೂ. ಕಾರ್ಕಳ ಕ್ರೀಡಾಂಗಣಕ್ಕೆ ಅನುದಾನ ಬಿಡುಗಡೆ
19.50 ಕೋ.ರೂ. ರಾಜ್ಯದಲ್ಲಿ 4 ಕ್ರೀಡಾಂಗಣ ಗಳ ನಿರ್ಮಾಣಕ್ಕೆ ಬಿಡುಗಡೆ ಯಾದ ಅನುದಾನ
2018 ರಲ್ಲಿ ಕಾರ್ಕಳದಲ್ಲಿ ಒಳಾಂಗಣ ಕ್ರೀಡಾಂಗಣದ ಘೋಷಣೆ

Advertisement

Udayavani is now on Telegram. Click here to join our channel and stay updated with the latest news.

Next