Advertisement

Cinema: ಈಗ ನೋಡುಗರು ಬದಲಾಗಿದ್ದಾರೆ…”ವೀಕ್ಷಕ’ ಎಂಬ ಸಿನೆಮಾ ಹೀರೋ

12:06 PM Oct 12, 2024 | Team Udayavani |

ಸಿನೆಮಾ ಎಂಬ ಮೂರಕ್ಷರದ ಪದ, ಜಗತ್ತು ಮನುಷ್ಯನ ನಿತ್ಯ ಜೀವನದ ಸರಕಾಗಿ, ಮನೋರಂಜನೆಯ ಕಾರಣವೂ ಆಗಿದೆ. ಸಿನೆಮಾ ಎಂಬುದು ಪರಿಚಯವಾದಾಗಿನಿಂದಲೂ ಇಂದಿನ ವರೆಗೆ ಹಲವು ಏರಿಳಿತ, ಬದಲಾವಣೆ, ಮಜಲುಗಳನ್ನು ಕಂಡಿದೆ. ಅದು ಕಥೆಯಿರಲಿ, ಕಲಾವಿದರಿರಲಿ, ತಾಂತ್ರಿಕತೆ, ಹಿನ್ನೆಲೆ ಕೆಲಸಗಳೇ ಇರಲಿ ಅಥವಾ ಬಹುಮುಖ್ಯವಾದ ವೀಕ್ಷಕರನ್ನೇ ಇರಲಿ.

Advertisement

ಟಿವಿಯ ಆವಿಷ್ಕಾರ ಬಂದಮೇಲೆ ಪ್ರತೀ ಮನೆಗೂ ಮನರಂಜನೆ ತಲುಪುವ ಸಾಧ್ಯತೆ ತೆರೆದುಕೊಂಡಿತು. ಆಗ ಸಿನೆಮಾವನ್ನು ಬೆಳೆಸಬೇಕಿತ್ತು, ಹಾಗಾಗಿ ಜನರನ್ನು ಅದರತ್ತ ಸೆಳೆಯಬೇಕಿತ್ತು. 70-80ರ ದಶಕದ ಸಾಂಪ್ರದಾಯಿಕ ಕಾಲಘಟ್ಟದಲ್ಲಿ ಪೌರಾಣಿಕ ಕಥೆಗಳನ್ನು ಸಿನೆಮಾವಾಗಿ ಅಲ್ಪಾವಧಿಯಲ್ಲಿ ತೋರಿಸುವ ಕೆಲಸಕ್ಕೆ ನಿರ್ಮಾಣಕಾರರು ಕೈ ಹಾಕಿದರು, ಅದು ಫ‌ಲಿಸಿತು ಸಹ. ಮಹಾಭಾರತ, ರಾಮಾಯಣದ ಕಥೆಗಳೇ ಸಿನೆಮಾ ಆದವು.

ಪೌರಾಣಿಕ ಪಾತ್ರಗಳ ಕಲ್ಪನೆಯನ್ನು ಹೊಂದಿದ್ದ ವೀಕ್ಷಕರಿಗೆ ಕಲಾವಿದರ ಪಾತ್ರಗಳು ಕಲ್ಪನೆಗೆ ಮೂರ್ತ ರೂಪವನ್ನು ನೀಡಿದವು. ಅದಾದ ಅನಂತರ ಸ್ಯಾಂಡಲ್‌ವುಡ್‌ ಇರಲಿ, ಬಾಲಿವುಡ್ ಇರಲಿ ಸೂಪರ್‌ ರೊಮ್ಯಾಂಟಿಕ್‌ ಸ್ಟೋರಿಗಳನ್ನು ತೆರೆಯ ಮೇಲೆ ತಂದವು. 80-90ರ ದಶಕದಲ್ಲಿನ ಯಾವುದೇ ಭಾಷೆಯ ಸಿನೆಮಾಗಳನ್ನು ನೋಡಿ, ಸಹಜ, ಸುಂದರ ಲವ್‌ಸ್ಟೋರಿ ಹೊತ್ತ ಸಿನೆಮಾಗಳು ಸೂಪರ್‌ಹಿಟ್‌ ಆಗಿದ್ದವು.‌

ಇವುಗಳೂ ಇವತ್ತಿಗೂ ಎಲ್ಲರ ಅಚ್ಚುಮೆಚ್ಚು. 90ರ ಕೊನೆಯಲ್ಲಿ ಹಾಗೂ 2000 ಆರಂಭದಲ್ಲಿ ಹೊಸ ಪೀಳಿಗೆ ವೀಕ್ಷಕ ವರ್ಗಕ್ಕೆ ಸೇರಿಕೊಂಡಿತು. ಆಗ ಮತ್ತೆ ಸಿನೆಮಾ ತನ್ನ ಕಥೆಯ ಆಯ್ಕೆಯನ್ನು ಕೊಂಚ ಬದಲಿಸಿತು. ಅದಾಗಲೇ ಸ್ಟಾರ್‌ ಪಟ್ಟ ಗಳಿಸಿದ್ದ ಕಲಾವಿದರು ಆ್ಯಕ್ಷನ್‌ ಸಿನೆಮಾಗಳಿಗೆ ಕೈಹಾಕಿ, ಜನರ ರುಚಿಗೆ ತಕ್ಕಂತೆ ಸಿನೆಮಾ ಮಾಡಲು ಮುಂದಾದರು. ಪ್ರತೀ ದಶಕದಲ್ಲೂ ಸಿನೆಮಾ ತನ್ನ ಕಥೆಯ ಆಯ್ಕೆ, ನಿರೂಪಣೆಯನ್ನು ನೋಡುಗನ ಆಯ್ಕೆಗೆ ತಕ್ಕಂತೆ ಬದಲಿಸುತ್ತಾ ಬಂದಿದೆ. ಇದಕ್ಕೆ ಮಲಯಾಳಂ ಸಿನೆಮಾ ಇಂಡಸ್ಟ್ರಿಯು ಬಿದ್ದು ಮತ್ತೇ ಕಥೆಗಳಿಂದಲೇ ಎದ್ದುನಿಂದ ಪರಿಯನ್ನೇ ಕಾಣಬಹುದು.

Advertisement

ಸಿನೆಮಾ ಪ್ರಿಯರ, ವೀಕ್ಷಕನ ರುಚಿ, ಆಯ್ಕೆ ಎಂಬುದು ಹೀಗೆ ಇರುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಉದಾಹರಣೆಗೆ ಕನ್ನಡದಲ್ಲಿ ಫ್ಯಾಮಿಲಿ, ಲವ್‌ಸ್ಟೋರಿಗಳೇ ಹಿಡಿಸಿದ್ದ ಜನರಿಗೆ ತೆರೆಕಂಡ ಓಂ ಚಿತ್ರವೂ ಇನ್ನಿಲ್ಲದಷ್ಟು ಹಿಡಿಸಿತು. ಇಂದಿಗೂ ಚಿತ್ರ ಮರುಬಿಡುಗಡೆಗೊಂಡಾಗ ಈ ಪೀಳಿಗೆಯವರು ಅದನ್ನು ಇಷ್ಟಪಟ್ಟರು.

2006ರಲ್ಲಿ ತೆರೆಕಂಡ ಮುಂಗಾರು ಮಳೆಯ ಯಶಸ್ಸಿಗೂ ಇದೇ ಕಾರಣ. ಕಥೆ, ನಿರೂಪಣೆಯಲ್ಲಿ ಇದ್ದ ಬದಲಾವಣೆ, ಹೊಸತನದ ಸಂಗೀತ. ಕೆಜಿಎಫ್, ಕಾಂತಾರ, ಸೀತಾರಾಮಂ, ಮಂಜುಮಲ್‌ ಬಾಯ್ಸ ಅಂತ ಸಿನೆಮಾಗಳು ಮಾಡಿದ್ದು ಅದೇ. ಬಾಲಿವುಡ್‌ ಹಾಗೂ ದಕ್ಷಿಣದ ವೀಕ್ಷಕರು ಈಗೀಗ ಸಿನೆಮಾದ ನಟ-ನಟಿಯರ ಮುಖಕ್ಕಿಂತ ನೆಚ್ಚಿಕೊಂಡಿರುವುದು ಕಥೆಗಳನ್ನು. ಅದೇ ಒಂದೇ ರೀತಿಯ ರೊಮ್ಯಾಂಟಿಕ್‌, ಆ್ಯಕ್ಷನ್‌ ಸಿನೆಮಾಗಳಿಂದ ರೋಸಿದ ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ. ಇದು ಹೆಚ್ಚಾಗಿ ಕಾಣಿಸಿದ್ದು ಕೋವಿಡ್‌ ಸಮಯದಲ್ಲಿ. ಕೋವಿಡ್‌ನ‌ಲ್ಲಿ ಮನೆಯಲ್ಲಿ ಕೂತ ಜನರಿಗೆ ಒಟಿಟಿ ಫ್ಲಾಟ್‌ಫಾರ್ಮ್ ಗಳು ವಿವಿಧ ಭಾಷೆಗಳ ಸಿನೆಮಾಗಳ ಕಥೆಗಳಿಗೆ ಪರಿಚಯಿಸಿತು. ಹೊಸಹೊಸ ಕಥೆಗಳನ್ನು ಜನ ಇಷ್ಟಪಟ್ಟರು. ಒಂದೇ ರೀತಿಯ ಕಥೆಗಳನ್ನು ಕೊಡುತ್ತಲೇ ಕಲಾವಿದರು, ಇಂಡಸ್ಟ್ರಿಗಳು ಕೈಸುಟ್ಟುಕೊಂಡ ನಿದರ್ಶನಗಳು ಇವೆ.

ವೀಕ್ಷಕರೇ ಇಲ್ಲದ ಮೇಲೆ, ಅವರೇ ನಿಮ್ಮನ್ನು ಒಪ್ಪದ ಮೇಲೆ ಸಿನೆಮಾಗೆ ಎಲ್ಲಿಯ ಪ್ರಾಮುಖ್ಯ ಎಂಬ ಅಂಶವನ್ನು ಅರಿತು, ಕಥೆಗಳೇ ನೋಡುಗರ ನಿಜವಾದ ಹೀರೋ ಎಂದು ನಿರ್ಮಾಣಕಾರರು ಅರ್ಥೈಸಿಕೊಂಡು ಕಳೆದ 2-3 ವರ್ಷಗಳಿಂದ ಹಳೆ-ಹೊಸ ನಿರ್ದೇಶಕರು ವಿಭಿನ್ನ ಕಥೆಗಳನ್ನು ನೀಡಲು ಹಂಬಲಿಸಿದ್ದಾರೆ, ಪ್ರಯತ್ನಿಸಿದ್ದಾರೆ, ಗೆದ್ದಿದ್ದಾರೆ ಸಹ. ಎಲ್ಲಿಯವರೆಗೆ ಎಂದರೆ ಭಾರತದ ಸೂಪರ್‌ ಹೀರೊಗಳು ಸಹ ತಮ್ಮ ಎಂದಿನ ಸಿನೆಮಾಗಳನ್ನು, ವರ್ಚಸ್ಸನ್ನು ಬಿಟ್ಟು ಹೊಸತನಕ್ಕೆ ಕೈಹಾಕಿದ್ದಾರೆ.

ಅದು ಅಮಿತಾಭ್‌ ಬಚ್ಚನ್‌ ಆಗಿರಬಹುದು, ಕಮಲ್‌ ಹಾಸನ್‌, ಮಮ್ಮಟಿ, ಮೋಹನ್‌ಲಾಲ್‌ ಅಂತ ಹಿರಿಯರು ಸಹ ಹಿರೋಯಿಸಂ ಎಂಬ ಅಂಶವಿಲ್ಲದ, ನಾಯಕನೂ ಸಾಮಾನ್ಯ ಎಂಬ ಕಥೆ, ನಿರೂಪಣೆಗಳುಳ್ಳ ಸಿನೆಮಾ ಮಾಡಿ, ಭೇಷ್‌ ಎನಿಸಿಕೊಂಡಿದ್ದಾರೆ. ಇದು ವೀಕ್ಷಕನ ರುಚಿಗೆ ಇರುವ ತಾಕತ್ತು.

ಜತೆಗೆ ಮಧ್ಯದಲ್ಲಿ ಹಳ್ಳ ಹಿಡಿದಿದ್ದ ಸಿನೆಮಾ ಹಾಡುಗಳೂ ಈಗ ಮತ್ತೆ ಕೇಳುಗನ, ನೋಡುಗನ ಮನ ತಟ್ಟುತ್ತಿದೆ. ಹಾಡಿನಿಂದಲೇ ಸಿನೆಮಾ ನೋಡಬೇಕು ಎಂಬ ಟ್ರೆಂಡ್‌ ಮತ್ತೆ ಹುಟ್ಟಿಕೊಂಡಿದೆ. ಇದಕ್ಕೆ ಇತ್ತೀಚಿನ ಕೃಷ್ಣಂ ಪ್ರಣಯ ಸಖೀ ಸಿನೆಮಾ, ಅದರ ಮೀನ ಕಣ್ಣೊಳೆ…ಜೇನ ದನಿಯೊಳೆ… ಹಾಡೇ ಪುರಾವೆ. ಸಿನೆಮಾದ ಚಿತ್ರೀಕರಣ, ಅದರ ಸಿನೆಮಾಟೋಗ್ರಫಿಯಲ್ಲಿಯೂ ವಿಶೇಷವನ್ನು ಆಯ್ದುಕೊಂಡಿದ್ದಾರೆ. ಕೆಜಿಎಫ್ ತೆರೆಕಂಡ ಬಳಿಕ ಅಂತದ್ದೆ ಮಸುಮಸುಕಿನಲ್ಲಿ ಸೆಟ್ಟೇರಿದ ಚಿತ್ರಗಳು ಸಾಲಾಗಿ ಬಂದವು, ಜನರು ಒಪ್ಪಿಕೊಂಡರು. ಹೀಗೆ ಪ್ರತೀ ಹಂತದಲ್ಲೂ ಹೊಸಗಾಳಿ ಬೀಸಿ, ಅದನ್ನು ಆಯ್ದು ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ.

ಹಿಂದೆ ಪತ್ರಿಕೆಯ ಪುಟದ ಒಂದು ಬದಿಯಲ್ಲಿ ಮಾತ್ರ ಸಿಗುತ್ತಿದ್ದ ಸಿನೆಮಾ ಸುದ್ದಿಗಳು ಇಂದು ಸುದ್ದಿಯಾದ ಆ ಕ್ಷಣಕ್ಕೆ ಕೈಬೆರಳ ತುದಿಯನ್ನು ತಲುಪಿರುತ್ತದೆ. ಇದು ಜನರನ್ನು ತಲುಪುವುದರಲ್ಲಿ ಸಿನೆಮಾ ಕಂಡುಕೊಂಡ ಬದಲಾವಣೆ. ಯುಗವು ಸಮಯಕ್ಕೆ ಬದಲಾದ ಹಾಗೆ, ಆಧುನಿಕತೆ ಕಾಣುತ್ತ ಹೋದ ಹಾಗೆ ಸಿನೆಮಾವು ತನ್ನ ರೂಪಿಸುವಿಕೆಯಲ್ಲಿಯೂ ಹೊಸಹೊಸ ಪ್ರಯೋಗಗಳನ್ನು ಮಾಡುತ್ತ, ಹೊಸ ತಂತ್ರಜ್ಞಾನಕ್ಕೆ ತನ್ನನ್ನು ತಾನು ಅಳವಡಿಸಿಕೊಳ್ಳುತ್ತಾ ಹೋಯಿತು. ಇದಕ್ಕೆ ನೋಡುಗರ ಬದಲಾಗುತ್ತಿದ್ದ ಅಭಿರುಚಿಯೂ ಕಾರಣ.

ಒಂದು ಸಿನೆಮಾದ ನಿರ್ಮಾಣದ ಹಿಂದೆ ಅದೆಷ್ಟೋ ಕೈಗಳು ಸವೆಸಿರುತ್ತವೆ. ಇಷ್ಟು ಶ್ರಮದಿಂದ ಮಾಡಿದ ಸಿನೆಮಾಗಳು ವೀಕ್ಷಕನಿಗೆ ಹಿಡಿಸಬೇಕು, ರುಚಿಸಬೇಕು. ಆರಂಭದಲ್ಲಿ ಸಿನೆಮಾ ಎಂಬ ವಿಷಯವೇ ಹೊಸತಾಗಿತ್ತು, ಪ್ರಚಾರದ ಆಲೋಚನೆ, ಅನಿವಾರ್ಯತೆಯೂ ಇರಲಿಲ್ಲ. ಆದರೆ ಈಗ ನೋಡುಗರು ಬದಲಾಗಿದ್ದಾರೆ, ಪ್ರತಿಯೊಬ್ಬನಿಗೂ ತಲುಪುವ ಆವಶ್ಯಕತೆ, ಅನಿವಾರ್ಯತೆ ಇದೆ. ಹಾಗಾಗಿ ಪ್ರತೀ ಸಿನೆಮಾಗಳು ತಮ್ಮ ನಿರ್ಮಾಣದೊಂದಿಗೆ ಪ್ರಚಾರಕ್ಕೂ ವೆಚ್ಚಿಸುತ್ತವೆ. ಕಳೆದ 2-3 ವರ್ಷಗಳಲ್ಲಿ ಇದು ತೀರಾ ಸಾಮಾನ್ಯವಾಗಿದೆ. ಸಿನೆಮಾ ಘೋಷಣೆಯಿಂದ ಹಿಡಿದು, ಹಾಡು, ಟ್ರೈಲರ್‌, ರಿಲೀಸ್‌ ವರಗೂ ಪ್ರಚಾರಗಳು ನಡೆಯುತ್ತವೆ.

ಸಿನೆಮಾ, ಸಿನೆಮಾ ನಿರ್ಮಾಣ, ಕಥೆ, ನಿರೂಪಣೆ ಎಲ್ಲವೂ ವೀಕ್ಷಕನ ಆಂತರ್ಯವನ್ನು ತಲುಪುವಲ್ಲಿ ಹೊಸತನವನ್ನು ಒಗ್ಗೂಡಿಸಿಕೊಂಡಿವೆ. ಇದು ಒಬ್ಬ ವೀಕ್ಷಕ ಸಿನೆಮಾದ ಪ್ರತೀ ವಿಷಯವನ್ನು ಎಷ್ಟು ಸೂಕ್ಷ್ಮವಾಗಿ ಗ್ರಹಿಸುತ್ತಾನೆ ಎಂದು ಹೇಳುತ್ತದೆ. ಸಿನೆಮಾ ವೀಕ್ಷಕನ ಅಭಿರುಚಿಯ ಬಿಂಬ. ಇನ್ನು 10 ವರ್ಷಗಳ ಅನಂತರ ಸಿನೆಮಾ ಆಗಿನ ತಲೆಮಾರಿಗೆ ತಕ್ಕಂತೆ ಒಗ್ಗಿಕೊಳ್ಳಬೇಕು, ಅದಕ್ಕೆ ಈಗಿನಿಂದಲೇ ತಯಾರಿಯೂ ಮುಖ್ಯ. ಒಟ್ಟಾರೆ ಸಿನೆಮಾದ ನಿಜವಾದ ಹೀರೋ ಕಲಾವಿದ, ಕಥೆ ಎಂಬ ಕಾಲಘಟ್ಟ ದಾಟಿ ಈಗ “ವೀಕ್ಷಕ’ ಎಂಬುದಾಗಿದೆ ಎನ್ನುವುದು ಸತ್ಯ.

*ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next