Advertisement
ಅವರು ಬುಧವಾರ ಮಂಗಳೂರಿನ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಸಾರ್ವಜನಿಕರಿಗೆ ಮತ್ತು ಸಂಬಂಧಿಕರಿಗೆ ವಿಚಾರಣಾಧೀನ ಕೈದಿಗಳ ವೀಕ್ಷಣೆಗೆ ಅನುಕೂಲವಾಗುವಂತೆ 17.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಂದರ್ಶಕರ ಕೊಠಡಿ ಉದ್ಘಾಟನೆ ಮತ್ತು 12.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಪ್ರವೇಶ ದ್ವಾರದ ಶಿಲಾನ್ಯಾಸವನ್ನು ನೆರವೇರಿಸಿ ಸುದ್ದಿಗಾರರ ಜತೆ ಮಾತನಾಡಿದರು.
ಸಂದರ್ಶಕರ ಕೊಠಡಿಯಲ್ಲಿ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳು ಜೈಲಿನ ಒಳಗಿದ್ದುಕೊಂಡೇ ಹೊರ ಭಾಗದಲ್ಲಿರುವ ತಮ್ಮಸಂಬಂಧಿಕರ/ ಸ್ನೇಹಿತರ ಜತೆ ಮಾತನಾಡಲು ವ್ಯವಸ್ಥೆ ಇದೆ. ಏಕಕಾಲದಲ್ಲಿ 10 ಮಂದಿ ಭೇಟಿಯಾಗಿ ಮಾತನಾಡಲು ಅನುಕೂಲವಾಗುವಂತೆ 10 ಕಂಪಾರ್ಟ್‌ಮೆಂಟ್‌ಗಳನ್ನು ಮಾಡಲಾಗಿದೆ. ಅದರೊಳಗೆ ಸಿಸಿ ಕೆಮರಾ ಕೂಡ ಇದೆ.
Related Articles
Advertisement
ಹೆಲಿಪ್ಯಾಡ್, ಆಸ್ಪತ್ರೆ, ಲೈಬ್ರರಿ…ಅಖೀಲ ಭಾರತ ಕಾರಾಗೃಹ ಕೈಪಿಡಿಯಲ್ಲಿರುವ ಮಾರ್ಗಸೂಚಿ ಪ್ರಕಾರ ನೂತನ ಜೈಲಿನ ಯೋಜನೆಯನ್ನು ತಯಾರಿಸಲಾಗಿದೆ. ಪ್ರಸ್ತಾವಿತ ಜೈಲು1,000 ಮಂದಿ ಕೈದಿಗಳನ್ನು ಇರಿಸುವ ಸಾಮರ್ಥ್ಯಹೊಂದಿರುತ್ತದೆ. ಗರಿಷ್ಠ ಭದ್ರತೆಯ ಬೇಲಿ, ದ್ವಾರ
ದಲ್ಲಿ ಮೊಳೆ ಜೋಡಣೆ, ಆಸ್ಪತ್ರೆ, ಗ್ರಂಥಾಲಯ,ಹೆಲಿಪ್ಯಾಡ್, ಕೈದಿಗಳಿಗೆ ಕೆಲಸ ಮಾಡಲು ಉದ್ಯಮ ಘಟಕ, ಸಾಕಷ್ಟು ಸಿಬಂದಿ ನೇಮಕ ಮತ್ತು ಸಿಬಂದಿ ವಸತಿ ಗೃಹ, ವೀಡಿಯೋ ಕಾನ್ಫರೆನ್ಸಿಂಗ್ ಇತ್ಯಾದಿ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಡಿಜಿಪಿ ತಿಳಿಸಿದರು. ಜಾಮರ್ ಬದಲು ಸೆಕ್ಯುರಿಟಿ ಪೋಲ್
ಜೈಲಿನಲ್ಲಿ ಮೊಬೈಲ್ ಜಾಮರ್ ಹಾಕುವುದರಿಂದ ಆಸು ಪಾಸಿನ ಜನರಿಗೆ ಮೊಬೈಲ್ ಫೋನ್ ಸಂಪರ್ಕ ಸಮಸ್ಯೆ ಉಂಟಾಗುತ್ತಿರುವುದನ್ನು ಮನಗಂಡು ಮೊಬೈಲ್ ಜಾಮರ್‌ಗಳನ್ನು ಕ್ರಮೇಣ ತೆಗೆದು ಅವುಗಳ ಸ್ಥಾನದಲ್ಲಿ ಪರಿಣಾಮಕಾರಿ ಲೋಹ ಶೋಧಕ ಉಪಕರಣ ಎಫ್‌ಜಿ1 ಸೆಕ್ಯುರಿಟಿ ಪೋಲ್ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಸೆಕ್ಯುರಿಟಿ ಪೋಲನ್ನು ಸ್ಥಳಾಂತರಿಸಲು ಅವಕಾಶವಿದೆ. ಮೊಬೈಲ್ ಫೋನ್ ಜತೆಗೆ,ಸಿಮ್ ಕಾರ್ಡ್‌ನ್ನು ಕೂಡ ಇದು ಪತ್ತೆಹಚ್ಚ ಬಲ್ಲುದು ಎಂದು ಡಿಜಿಪಿ ವಿವರಿಸಿದರು. ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್, ಪಶ್ಚಿಮ ವಲಯದ ಐಜಿಪಿ ಹರಿಶೇಖರನ್, ಎಸ್‌ಪಿ ಭೂಷಣ್ ಜಿ. ಬೊರಸೆ, ಅಡಿಶನಲ್ ಎಸ್‌ಪಿ ಡಾ| ವೇದಮೂರ್ತಿ, ಎಸಿಪಿ ಉದಯ ನಾಯಕ್, ಬರ್ಕೆ ಠಾಣೆ ಇನ್ಸ್‌ಪೆಕ್ಟರ್ ರಾಜೇಶ್, ಕಾರಾಗೃಹದ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ವಿ. ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು. ಕರಾವಳಿಗರ ಹಿಂದೇಟು
ಬಂದೀಖಾನೆ ಇಲಾಖೆಯಲ್ಲಿ ಕೆಲಸ ಮಾಡಲು ಕರಾವಳಿ ಭಾಗದ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜನರು ಮುಂದೆ ಬರುತ್ತಿಲ್ಲ. ಹಾಗಾಗಿ ಇಲಾಖೆಯಲ್ಲಿ ಶೇ. 70ರಷ್ಟು ಮಂದಿ ಉತ್ತರ ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಹೈದ್ರಾಬಾದ್ ಕರ್ನಾಟಕದ ಜನರೇ ಅಧಿಕಇದ್ದಾರೆ. ಅವರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡ/ ಉಡುಪಿ ಜಿಲ್ಲೆಗಳಲ್ಲಿ ಕೆಲಸ ಮಾಡಲು ಒಪ್ಪುವುದಿಲ್ಲ. ಇಲ್ಲಿಗೆ ನೇಮಕಾತಿ ಮಾಡಿದರೂ ಕೆಲವೇ ಸಮಯದಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಮಂಗಳೂರು ಜೈಲಿನಲ್ಲಿ ಸಿಬಂದಿ ಕೊರತೆ ಕಂಡು ಬರಲು ಇದುವೇ ಮುಖ್ಯ ಕಾರಣ ಎಂದು ಡಿಜಿಪಿ ವಿವರಿಸಿದರು. ಜೈಲು ಸಿಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಈ ವರ್ಷ 11 ಮಂದಿಗೆ ಮುಖ್ಯಮಂತ್ರಿ ಪದಕ, ಒಬ್ಬರಿಗೆ ರಾಷ್ಟ್ರಪತಿ ಪದಕ, 86 ಮಂದಿಗೆ ಪ್ರಶಂಸಾ ಪತ್ರ ಬಂದಿದೆ. ಸಾಮರ್ಥ್ಯ 210; ಇರುವ ಕೈದಿಗಳು 415
ಮಂಗಳೂರು ಜೈಲು ಕೈದಿಗಳಿಂದ ತುಂಬಿ ತುಳುಕುತ್ತಿದೆ. ಜೈಲಿನ ಸಾಮರ್ಥ್ಯ 210. ಆದರೆ ಈಗ 400 ಪುರುಷರು, 13 ಮಹಿಳೆಯರು ಮತ್ತು ಇಬ್ಬರು ಮಕ್ಕಳ ಸಹಿತ ಒಟ್ಟು 415 ಮಂದಿ ಕೈದಿಗಳಿದ್ದಾರೆ. ಅವರಲ್ಲಿ 60 ಮಂದಿ ಹಳೆ ಜೈಲಿನಲ್ಲಿ ಹಾಗೂ ಉಳಿದವರು ಹೊಸ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಪಿಎಫ್‌ಐ ಕಾರ್ಯಕರ್ತರೂ ಇಲ್ಲಿದ್ದಾಗ ಕೈದಿಗಳ ಸಂಖ್ಯೆ 489ರ ವರೆಗೂ ತಲುಪಿತ್ತು. ಶಿಕ್ಷೆಗೊಳಗಾದ ನಾಲ್ವರು ಕೈದಿಗಳಿದ್ದು, ಅವರನ್ನು ಬೇರೆ ಜಿಲ್ಲಾ ಕಾರಾಗೃಹಕ್ಕೆ ಇನ್ನಷ್ಟೇ ಸ್ಥಳಾಂತರಿಸಬೇಕಾಗಿದೆ. ಹೀಗೆ ಬೇರೆ ಜೈಲುಗಳಿಗೆ ವರ್ಗಾವಣೆಗೊಂಡಿರುವ ಸುಮಾರು 60ರಷ್ಟು ಕೈದಿಗಳಿದ್ದಾರೆ.
ಲೆಕ್ಕಕ್ಕಿಂತ ಹೆಚ್ಚು ಕೈದಿಗಳಿರುವ ಜಿಲ್ಲೆಗಳಲ್ಲಿ ಹೊಸ ಜೈಲು ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಜೈಲನ್ನು ಅಂಕೋಲಾಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ರಾಯಚೂರಿನಲ್ಲಿಯೂ ಹೊಸ ಜೈಲು ನಿರ್ಮಾಣವಾಗಲಿದೆ ಎಂದು ಡಿಜಿಪಿ ಸತ್ಯನಾರಾಯಣ ರಾವ್ ತಿಳಿಸಿದರು.