ಅದೊಂದು ದಿನ ಮರೆಯಲಾಗದ ಅನುಭವ, ನೂರಾರು ಕನಸು ಹೊತ್ತು ಹಳ್ಳಿಯಿಂದ ನಗರದತ್ತ ನನ್ನ ಪಯಣ.
ಹೈಸ್ಕೂಲ್ ಜೀವನ ಮುಗಿಸಿ ಕಾಲೇಜು ಜೀವನಕ್ಕೆ ಕಾಲಿಟ್ಟಗಳಿಗೆ. ಅಪರಿಚಿತರ ನಡುನಡುವೆ ಅಲ್ಪ-ಸ್ವಲ್ಪ ಪರಿಚಿತರು.
ಭಯ ಭೀತಿಯಿಂದ ಕೂಡಿದ್ದ ಮುಖದಲ್ಲಿ ನಗು ಮೂಡಿಸಿದ ಆ ಅಧ್ಯಾಪಕ. ಹೌದು ನಾನು ಹೇಳಲು ಹೊರಟಿರುವುದು ನನ್ನ ಅಧ್ಯಾಪಕರ ಬಗ್ಗೆ.
ಎಲ್ಲ ವಿದ್ಯಾರ್ಥಿಗಳಿಗೆ ಒಬ್ಬ ಮಾರ್ಗದರ್ಶಕ, ಸ್ಫೂರ್ತಿದಾಯಕ, ಆದರ್ಶ ವ್ಯಕ್ತಿ ಇದ್ದೇ ಇರುತ್ತಾರೆ. ಹಾಗೆಯೇ ನನ್ನ ಪಾಲಿನ ಮಾರ್ಗದರ್ಶಕರಾಗಿ, ಆದರ್ಶ ವ್ಯಕ್ತಿಯಾಗಿ ಕಂಡಿದ್ದು ನಮ್ಮ ಸಮಾಜಶಾಸ್ತ್ರ ಉಪನ್ಯಾಸಕರಾದ ನೊಬರ್ಟ್ ಮಾರ್ಟಿಸ್. ಉತ್ತಮರಲ್ಲಿ ಉತ್ತಮರು ಎಂದರೆ ತಪ್ಪಾಗಲಾರದು.
ಇವರು ಶಿಕ್ಷಣದ ಬೋಧನೆಯ ಜತೆಗೆ ವಿದ್ಯಾರ್ಥಿಗಳಿಗೆ ಯಾವ ದಾರಿಯಲ್ಲಿ ನಡೆದರೆ ಉತ್ತಮ ಎಂಬುದನ್ನು ತಿಳಿಸಿಕೊಟ್ಟು ಯಶಸ್ಸಿನ ದಾರಿ ತೋರಿಸಿದ ವ್ಯಕ್ತಿ. ಯಾರನ್ನು ನೋಯಿಸದ ಇವರು ನೊಂದವರಿಗೆ ಬೆಂಗಾವಲಾಗಿ ನಿಂತವರು.
ಅದೆಷ್ಟೋ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಬೆಳಕಾದವರು. ಸಜ್ಜನ ಸೃಜನಶೀಲ ವ್ಯಕ್ತಿತ್ವ ಹೊಂದಿದವರು. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿ ತಮ್ಮದೆ ಶೈಲಿಯಲ್ಲಿ ಉಪನ್ಯಾಸ ಮಾಡುವ ಇವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಳಿಕ ಉಪನ್ಯಾಸಕ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೆ ಪದೋನ್ನತಿ ಹೊಂದಿದವರು. ವಿದ್ಯಾರ್ಥಿಗಳಲ್ಲಿ ಅಸೆ ಆಕಾಂಕ್ಷೆ, ಗುರಿ ಸಾಧನೆ, ಛಲಗಳನ್ನು ಹುಟ್ಟುಹಾಕಿದವರು.
ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿ ಕಾಳಜಿ ತೋರಿದ ಇವರು ಮಕ್ಕಳಲ್ಲಿ ತಮ್ಮ ಯಶಸ್ಸು ಕಾಣುತ್ತಾರೆ. ಇವರು ಎಲ್ಲ ವಿದ್ಯಾರ್ಥಿಗಳಂತೆ ನನಗೂ ಒಬ್ಬ ಆದರ್ಶ ಮಾರ್ಗದರ್ಶಕರು.
– ಶ್ರದ್ಧಾ ಪೂಜಾರಿ, ಎಂಪಿಎಂ ಕಾಲೇಜು, ಕಾರ್ಕಳ