ರಾಮನಗರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಇಕ್ಬಾಲ್ ಹುಸೇನ್ ಆಯ್ಕೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ 34 ವರ್ಷಗಳ ಬಳಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ವ್ಯಕ್ತಿ ಶಾಸಕರಾಗಿ ಆಯ್ಕೆ ಆದಂತಾಗಿದೆ.
ಹೌದು.., ಜಿಲ್ಲೆಯಲ್ಲಿ ರಾಮನಗರ ಮತ್ತು ಚನ್ನ ಪಟ್ಟಣ ಅಲ್ಪಸಂಖ್ಯಾತ ಮತದಾರರನ್ನು ಶೇ. 15ರಷ್ಟು ಹೊಂದಿರುವ ಕ್ಷೇತ್ರಗಳಾಗಿದ್ದು, ಈ ಎರಡೂ ಕ್ಷೇತ್ರಗಳನ್ನು ಸೇರಿ ಇದುವರೆಗೆ ಇಬ್ಬರು ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ಇಕ್ಬಾಲ್ ಹುಸೇನ್ ಮೂರನೆಯವರಾಗಿ ಆಯ್ಕೆಯಾಗಿದ್ದಾರೆ.
ಗೆಲುವಿನ ನಗೆ ಬೀರಿದ್ದ ಹೊಸಮುಖ: 1989ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅಲ್ಪಸಂಖ್ಯಾತ ಸಮುದಾಯದ ಸಾದತ್ ಆಲಿಖಾನ್ ಅಚ್ಚರಿಯ ಗೆಲುವು ಸಾಧಿಸಿದ್ದರು. ಅಂದಿಗೆ ಸ್ಥಳೀಯ ಕಾಂಗ್ರೆಸ್ ನಲ್ಲಿ ಬಣ ರಾಜಕಾರಣ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಬಣಗಳನ್ನು ಹೊರತು ಪಡಿಸಿ ತಾಲೂಕಿನ ಮೂಲದ ಸಾದತ್ ಆಲಿಖಾನ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಯಿತು. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಬಿಪಾರಂ ನೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಸಾದತ್ ಆಲಿಖಾನ್‌ಗೆ ಸ್ಥಳೀಯ ಕಾಂಗ್ರೆಸ್ಸಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಾ ದರೂ, ಬಳಿಕ ಹೈಕಮಾಂಡ್ ಆದೇಶಕ್ಕೆ ಕಟ್ಟುಬಿದ್ದು ಸಾದತ್‌ಆಲಿಖಾನ್ ಅವರನ್ನು ಗೆಲ್ಲಿಸಿದರು.
ವರದೇಗೌಡ ವಿರುದ್ಧ ಸೋಲು: 1994ರಲ್ಲಿ ಮತ್ತೆ ಸಾದತ್ ಆಲಿಖಾನ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತಾದರೂ ಜನತಾದಳದ ಎಂ.ವರದೇಗೌಡ ಪ್ರಚಂಡ ಬಹು ಮತದೊಂದಿಗೆ ಗೆಲುವು ಸಾಧಿಸಿದರು. ಮತ್ತೆ 1999ರಲ್ಲಿ ಸಾದತ್ ಆಲಿಖಾನ್ ಸ್ಪರ್ಧೆ ಮಾಡಿದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಸಿ.ಪಿ.ಯೋಗೇಶ್ವರ್ ನನ್ನದು ಬಂಡಾಯ ಕಾಂಗ್ರೆಸ್ ಎಂಬ ಬಾವುಟ ಹಿಡಿದು ಗೆಲುವು ಸಾಧಿಸಿದರು. ಮತ್ತೆ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡು 2004 ಮತ್ತು 2008ರಲ್ಲಿ ಗೆಲುವು ಸಾಧಿಸಿದರು. ಜಿಲ್ಲಾ ರಾಜಕಾರಣದಿಂದ ಕಣ್ಮರೆ: ಬಿಜೆಪಿಗೆ ಪûಾಂತರ ಗೊಂಡು ಕಾಂಗ್ರೆಸ್‌ಗೆ ಮರಳಿದ ಯೋಗೇಶ್ವರ್ ಅವರಿಗೆ 2013ರಲ್ಲಿ ಟಿಕೆಟ್ ನಿರಾಕರಿಸಿ ಸಾದತ್ ಆಲಿಖಾನ್ ಅವರಿಗೆ ಮತ್ತೂಂದು ಅವಕಾಶ ಮಾಡಿಕೊಟ್ಟಿತಾದರೂ, ಅವರು ಠೇವಣಿ ಉಳಿಸಿಕೊಳ್ಳಲು ಸಾಧ್ಯ ವಾಗಲಿಲ್ಲ. ಇದರೊಂದಿಗೆ ಜಿಲ್ಲಾ ರಾಜಕಾರಣ ದಲ್ಲಿ ಅವರು ಸಂಪೂರ್ಣವಾಗಿ ಕಣ್ಮರೆಯಾದರು.
ರಾಮನಗರದಲ್ಲಿ 45 ವರ್ಷ ಬಳಿಕ ಆಯ್ಕೆ: ಇಕ್ಬಾಲ್ ಹುಸೇನ್ ರಾಮನಗರ ಕ್ಷೇತ್ರದಲ್ಲಿ 45 ವರ್ಷದ ಬಳಿಕ ಗೆಲುವು ಸಾಧಿಸಿದ ಅಲ್ಪಸಂಖ್ಯಾತ ಅಭ್ಯರ್ಥಿ ಎಂಬ ಹೆಗ್ಗಳಿಗೂ ಪಾತ್ರವಾಗಿದ್ದಾರೆ. 1978ರಲ್ಲಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್(ಐ)ನಿಂದ ಸ್ಪರ್ಧೆ ಮಾಡಿದ್ದ ಎ. ಕೆ. ಅಬ್ದುಲ್ ಸಮದ್ ಅವರು ಪ್ರತಿಸ್ಪರ್ಧಿ ಜನತಾ ಪಕ್ಷದ ಸಿ.ಬೋರಯ್ಯ ಅವರನ್ನು 6,962 ಮತಗಳ ಅಂತರದಿಂದ ಗೆಲುವು ಸಾಧಿಸಿ ವಿಧಾನಸೌಧ ಪ್ರವೇಶಿಸಿದ್ದರು. ಇದಾದ ಬಳಿಕ ಅಲ್ಪಸಂಖ್ಯಾತ ಅಭ್ಯರ್ಥಿ ಆಯ್ಕೆಯಾಗಿರಲಿಲ್ಲ.
ಪಟ್ಟುಬಿಡದೆ ಪಟ್ಟಗಿಟ್ಟಿಸಿಕೊಂಡ ಇಕ್ಬಾಲ್: 2018ರಲ್ಲಿ ಇಕ್ಬಾಲ್ ಹುಸೇನ್ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಿ ತೀವ್ರ ಪೈಪೋಟಿ ನೀಡಿದ್ದರಾದರೂ, ಗೆಲುವು ಸಾಧಿಸಲಾಗಲಿಲ್ಲ. ಆದರೆ, ಪಟ್ಟು ಬಿಡದೆ ಸಕ್ರಿಯವಾಗಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇಕ್ಬಾಲ್ ಹುಸೇನ್, ಈ ಬಾರಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ 3 ದಶಕಗಳ ಬಳಿಕ ಅಧಿಕಾರ ಹಿಡಿದ ಅಲ್ಪಸಂಖ್ಯಾತ ಮುಖಂಡ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ.
– ಸು.ನಾ. ನಂದಕುಮಾರ್