ಲಕ್ನೋ/ನವದೆಹಲಿ: ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ಗೆ ಭಾರೀ ಆಘಾತ ನೀಡಿದ್ದು, ಒಬ್ಬ ಸಚಿವರು ಮತ್ತು ಮೂವರು ಶಾಸಕರು ರಾಜೀನಾಮೆ ನೀಡಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವನ್ನು ಸೇರಿಕೊಂಡಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರಾಗಿದ್ದ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ಬಳಿಕ ಇನ್ನೂ ಮೂವರು ಶಾಸಕರಾದ ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ ಮತ್ತು ಭಗವತಿ ಸಾಗರ್ ತಮ್ಮ ರಾಜೀನಾಮೆಯನ್ನು ಘೋಷಿಸಿದರು.
ಇದನ್ನೂ ಓದಿ:ಪಣಜಿ : ಕೋವಿಡ್ ಪ್ರಕರಣ ಗಣನೀಯ ಏರಿಕೆ, 10,000 ಗಡಿ ದಾಟಿದ ಸಕ್ರೀಯ ಪ್ರಕರಣ
ಪ್ರಬಲ ಒಬಿಸಿ (ಇತರ ಹಿಂದುಳಿದ ವರ್ಗ) ನಾಯಕ ಮತ್ತು ಐದು ಬಾರಿ ಶಾಸಕರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರು 2016 ರಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತೊರೆದು ಬಿಜೆಪಿ ಸೇರಿದ್ದರು. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವನ್ನು ಎದುರಿಸಲು ಒಬಿಸಿ (ಇತರ ಹಿಂದುಳಿದ ಜಾತಿ) ಮತದಾರರನ್ನು ಸೆಳೆಯುವ ಬಿಜೆಪಿಯ ಯೋಜನೆಗಳಿಗೆ ಅವರು ಮೌರ್ಯ ಪ್ರಮುಖ ಶಕ್ತಿಯಾಗಿದ್ದರು.
” ಸೈದ್ಧಾಂತಿಕ ವೈರುಧ್ಯದ ಹೊರತಾಗಿಯೂ ನಾನು ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದೇನೆ. ಆದರೆ ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಮೇಲೆ ನಡೆಯುತ್ತಿರುವ ತೀವ್ರವಾದ ದಬ್ಬಾಳಿಕೆಯಿಂದಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.