ಇಂಡೋನೇಷ್ಯಾ: ಅದೃಷ್ಟ ಎನ್ನುವಂಥದ್ದು ಮನುಷ್ಯನ ಬದುಕನ್ನು ಅರೆಗಳಿಗೆಯಲ್ಲಿ ಬದಲಾಯಿಸಿ ಬಿಡುತ್ತದೆ. ಅದೃಷ್ಟ ಕೈ ಹಿಡಿದರೆ ಭಿಕ್ಷುಕನಾಗಿದ್ದವನು ಒಂದೇ ರಾತ್ರಿಯಲ್ಲಿ ಕುಬೇರನಾಗಬಲ್ಲ. ಅದೇ ಅದೃಷ್ಟ ಕೈ ಕೊಟ್ಟರೆ ಕುಬೇರ ಭಿಕ್ಷುಕನಾಗಲೂಬಹುದು. ಇಂತಹ ಹಲವಾರು ಸುದ್ದಿಗಳನ್ನು ನಾವು ಸರ್ವೆ ಸಾಮಾನ್ಯವಾಗಿ ನೋಡಿರುತ್ತೇವೆ.
ಈ ಅದೃಷ್ಟ ನಾನಾ ರೂಪದಲ್ಲಿ ಮನುಷ್ಯನ ಮನೆಬಾಗಿಲಿಗೆ ಬರಬಹುದು. ಇದು ಒಂದು ಉಲ್ಕೆಯಾಗಿಯೂ ಬರಬಹುದೆಂದರೆ ನೀವು ನಂಬುತ್ತೀರಾ! ಹೌದು. ಇಂತಹದ್ದೊಂದು ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಇಲ್ಲಿನ ಉತ್ತರ ಸುಮಾತ್ರಾದಲ್ಲಿ 33 ವರ್ಷದ ಜೋಶುವಾ ಹುಟಗಲುಂಗ್ ಎಂಬುವವರ ಮನೆ ಮೇಲೆ ಉಲ್ಕೆಯೊಂದು ಬಿದ್ದಿದೆ. ಇದರ ಪರಿಣಾಮ ಇವರು ಒಂದೇ ದಿನದಲ್ಲಿ ಆಗರ್ಭ ಶ್ರೀಮಂತರಾಗಿ ಬಿಟ್ಟಿದ್ದಾರೆ. ಹೇಗೆ ಅಂತೀರಾ?
ಈ ಉಲ್ಕಾಶಿಲೆಯ ಬೆಲೆಯೇ ಬರೋಬ್ಬರಿ 1.8 ಮಿಲಿಯನ್ ಯುಎಸ್ ಡಾಲರ್‌ಗಳು. ಇದನ್ನು ಭಾರತದ ರೂಪಾಯಿಗೆ ಪರಿವರ್ತಿಸಿದರೆ ಬರೋಬ್ಬರಿ 13.36 ಕೋಟಿ ರೂಪಾಯಿಗಳು..!
ಇದನ್ನೂ ಓದಿ: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗೆ 10 ವರ್ಷಜೈಲು ಶಿಕ್ಷೆ
ಈ ಉಲ್ಕೆಯು ಒಟ್ಟು 2.1 ಕೆಜಿ ತೂಕವಿದ್ದು, ಸರಿಸುಮಾರು 4.5 ಶತಕೋಟಿ ವರ್ಷದಷ್ಟು ಹಳೆಯದಾಗಿದೆ ಎನ್ನಲಾಗಿದೆ. ಇದನ್ನು ವೈಜ್ಞಾನಿಕವಾಗಿ ಸಿಎಮ್1/2 ಕಾರ್ಬೊನೇಸಿಯಸ್ ಕೊಡ್ರೈಟ್ ಎಂದು ಹೇಳಲಾಗಿದೆ. ಇದು ಅತ್ಯಂತ ವಿರಳವಾದ ಉಲ್ಕಾ ಶಿಲೆ ಎಂಬುದಾಗಿ ವರದಿಯಾಗಿದೆ.
ಇದನ್ನೂ ಓದಿ: ಸರ್ಕಾರ ರಚನೆಯಾಗಿ ಮೂರೇ ದಿನದಲ್ಲಿ ನಿತೀಶ್ ಸಂಪುಟದ ಮೊದಲ ವಿಕೆಟ್ ಔಟ್!