Advertisement
ಗಲೀಜಾಗಿ ಬಸ್‌ಗಾಗಿ ಕಾಯಲು ಬಂದ ಪ್ರಯಾಣಿಕರು ಕೂಡ ಕೂರಲೂ ಆಗದೇ ಇದ್ದ ಸ್ಥಿತಿಯಲ್ಲಿದ್ದ ಅನೇಕ ಬಸ್ ನಿಲ್ದಾಣಗಳನ್ನು ಆಯಾ ಗ್ರಾಮ ಪಂಚಾಯ್ತಿಗಳ ಸಿಬಂದಿಗಳ, ಅಧಿಕಾರಿಗಳ ನೇತೃತ್ವದಲ್ಲಿ, ಹೊಸ ಅಧ್ಯಕ್ಷರ, ಉಪಾಧ್ಯಕ್ಷರ ತಂಡಗಳ ಮೇಲುಸ್ತುವಾರಿಯಲ್ಲಿ ಸ್ವಚ್ಛಗೊಳ್ಳುತ್ತಿವೆ.
ಕಳೆದ ಆಗಸ್ಟ್ 7 ರಂದು ತಾಲೂಕು ಪಂಚಾಯ್ತಿಯಲ್ಲಿ ಗ್ರಾಮ ಪಂಚಾಯತ್ ಪಿಡಿಓಗಳ ಸಭೆ ನಡೆಸಿದ್ದ ಶಾಸಕ ಭೀಮಣ್ಣ ನಾಯ್ಕ ಅವರು ಒಂದು ಸೂಚನೆ ನೀಡಿದ್ದರು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಇರಬೇಕು. ಹಾಗೆ ಗ್ರಾಮ ಪಂಚಾಯತ್ ಕೆಲಸ ಮಾಡಬೇಕು ಎಂದು ಹೇಳಿದ್ದರು.
ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ಪಂಚಾಯ್ತಿಯ ನೂತನ ಪ್ರಭಾರಿ ಕಾರ್ಯನಿರ್ವಹಣಾ ಅಧಿಕಾರಿ ಸತೀಶ ಹೆಗಡೆ ಅವರು ಬುಧವಾರ ಸಂಜೆ ಒಂದು ಮೆಸೇಜ್‌ನ್ನು ತಾಲೂಕು ಗ್ರಾಮ ಪಂಚಾಯ್ತಿಗಳ ಪಿಡಿಓಗಳ ಗ್ರೂಪ್‌ನಲ್ಲಿ ಹಾಕಿದ್ದರು. ಆಗಸ್ಟ್ 23ರೊಳಗೆ ಆಯಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿನ ಎಲ್ಲ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಇರುವ ಒಣ ಕಸ ವಿಲೇವಾರಿ ಸಿಬಂದಿ ಹಾಗೂ ಪಂಚಾಯ್ತಿಯ ನೌಕರರು ಸಹಿತ, ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಒಂದು ಅಭಿಯಾನ ಮಾದರಿಯಲ್ಲಿ ನಡೆಸುವಂತೆ ಕೋರಿದ್ದರು. 24 ಗಂಟೆಗೆ 32 ನಿಲ್ದಾಣ!
ಮೆಸೇಜ್ ಇಟ್ಟ 24 ಗಂಟೆಯೊಳಗೆ ತಾಲೂಕಿನ 32 ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛವಾದವು. ಗುದ್ದಲಿ, ಪಿಕಾಸಿ, ಕೆಲವಡೆ ನೀರನ್ನೂ ಒಯ್ದು ಸ್ವಚ್ಛಗೊಳಿಸಿದರು. ಬರಲಿರುವ ಆ.23 ರೊಳಗೆ 32 ಪಂಚಾಯ್ತಿ ವ್ಯಾಪ್ತಿಯ ಎಲ್ಲ ಸಣ್ಣ ಪುಟ್ಟ ಬಸ್ ನಿಲ್ದಾಣಗಳು ಸ್ವಚ್ಛವಾಗಿಸಲು ಗ್ರಾ.ಪಂ. ತಂಡ ಕೂಡ ಮುಂದಾಗಿದೆ.
Related Articles
Advertisement
ಈ ಸ್ವಚ್ಛತಾ ಅಭಿಯಾನದಲ್ಲಿ ಗ್ರಾಮ ಪಂಚಾಯ್ತಿಗಳ ಎಲ್ಲ ಅಧಿಕಾರಿಗಳು, ಸಿಬಂದಿಗಳು, ಜನಪ್ರತಿನಿಧಿಗಳು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ವೃದ್ಧಿಸಿದೆ. ಶಾಸಕರ ಸೂಚನೆಯಂತೆ ನಮ್ಮ ಬಸ್ ನಿಲ್ದಾಣ ನಮ್ಮ ಹೆಮ್ಮೆ ಎಂಬ ಮಾದರಿಯಲ್ಲಿ ನಿರ್ವಹಣೆ ಆಗಲಿ ಎಂಬ ಆಶಯ ನಮ್ಮದು ಎಂದು ಸತೀಶ ಹೆಗಡೆ ಹೇಳಿದ್ದಾರೆ.
ಶೂನ್ಯ ಖರ್ಚು!ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಮಾಹಿತಿ ನೀಡುವಾಗ ಪಂಚಾಯ್ತಿಗೆ ಖರ್ಚು ಬಾರದಂತೆ ಕ್ರಮ ಜರುಗಿಸಬೇಕು ಎಂದು ಇಓ ಅವರು ಸೂಚಿಸಿದ್ದರು. ಸಣ್ಣ ಪುಟ್ಟ ದುರಸ್ತಿ ಇದ್ದರೆ ಮಾಡಿಸಬಹುದು. ಸ್ವಚ್ಛತೆಗೆ ಯಾವುದೇ ಖರ್ಚು ಹಾಕದೇ ಅಭಿಯಾನ ನಡೆಸಬೇಕು ಎಂಬುದಾಗಿ ಹೇಳಿದ್ದರು. ಸ್ವತಃ ಜನಪ್ರತಿನಿಧಿಗಳು, ಪಂಚಾಯ್ತಿ ಸಿಬಂದಿಗಳು ತೊಡಗಿಕೊಂಡಿದ್ದನ್ನು ನೋಡಿದ ಹಳ್ಳಿ ಭಾಗದ ಜನರೂ ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸಿದ್ದು ಇನ್ನೊಂದು ವಿಶೇಷವಾಗಿದೆ. ಇದೊಂದು ಮಾದರಿ ಅಭಿಯಾನವಾಗಿ ನಿರಂತರವಾಗಿರುವಂತೆ ತಾವೂ ಸಹಕಾರ ನೀಡುವದಾಗಿ ಕೆಲವು ಗ್ರಾಮಸ್ಥರೂ ವಾಗ್ದಾನ ಮಾಡಿದ್ದು ಉಲ್ಲೇಖನೀಯವಾಗಿದೆ. ಗುರುವಾರದಿಂದ ಆರಂಭವಾದ ಈ ಸ್ವಚ್ಛತಾ ಅಭಿಯಾನವನ್ನು ಪ್ರಥಮ ಹಂತದಲ್ಲಿ ಆಯಾ ಪಂಚಾಯ್ತಿಯಗಳು ಆ.23 ರ ತನಕ ನಡೆಸಲಿದ್ದಾರೆ.