ಚಾಮರಾಜನಗರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 2031ರವರೆಗಿನ ಹತ್ತು ವರ್ಷಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ತಿಳಿಸಿದರು. ವಿವಿಧ ಕಾಮಗಾರಿಗಳ ಪರಿಶೀಲನೆ, ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು.
2031ರವರೆಗೆ ಏರಿಕೆಯಾಗುವ ಜನಸಂಖ್ಯೆ, ಆಗಿನ ಅಗತ್ಯತೆಗಳನ್ನು ಗಮನದಲ್ಲಿರಿಸಿ ಕೊಂಡು ಉದ್ದಿಮೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಕರಡು ಮಾಸ್ಟರ್ ಪ್ಲಾನ್ ತಯಾರಿಸಲಾಗುತ್ತಿದೆ ಎಂದರು. ನಗರದ ಅಂಬೇಡ್ಕರ್ ಕ್ರೀಡಾಂಗಣ, ವಾಣಿಜ್ಯ ಸಂಕೀರ್ಣ, ಖಾಸಗಿ ಬಸ್ ನಿಲ್ದಾಣ ಕಾಮಗಾರಿ ತ್ವರಿತವಾಗಿ ಮುಗಿಸಬೇಕು ಎಂದು ಸೂಚಿಸಿದ್ದೇನೆ.
ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಜುಲೈ 15ರೊಳಗೆ ಮುಗಿಸಿ ಲೋಕಾರ್ಪಣೆಗೆ ದಿನಾಂಕ ನಿಗದಿಪಡಿಸ ಲಾಗುವುದು. ವೀರಭದ್ರೇಶ್ವರ ದೇವಾಲಯದ ಬಳಿ ವಾಣಿಜ್ಯ ಸಂಕೀರ್ಣ ಪೂರ್ಣಗೊಂಡಿದೆ. ಜಿಲ್ಲಾ ಕೇಂದ್ರದಲ್ಲಿ ಸುರಕ್ಷಿತ ಆಹಾರ ವಲಯವನ್ನು (ಫುಡ್ ಸ್ಟ್ರೀಟ್) ಸ್ಥಾಪಿಸಲು ಸ್ಥಳ ಪರಿಶೀಲಿಸಲಾಗಿದೆ ಎಂದು ಹೇಳಿದರು.
ರೋಗಿಯಿಂದ ಉದ್ಘಾಟನೆ: ಇದಕ್ಕೂ ಮೊದಲು ಸಚಿವರು ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಹೊರರೋಗಿಗಳ ವಿಭಾಗವನ್ನು ಆಸ್ಪತ್ರೆಗೆ ಬಂದಿದ್ದ ಮಹಿಳಾ ರೋಗಿಯಿಂದ ಉದ್ಘಾಟನೆ ಮಾಡಿಸಿದರು. ತುರ್ತುಚಿಕಿತ್ಸಾ ಘಟಕವನ್ನು ಶಾಸಕ ಪುಟ್ಟರಂಗಶೆಟ್ಟಿ ಲೋಕಾರ್ಪಣೆ ಮಾಡಿದರು.
ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭಿಸಲು ಕೇಂದ್ರ ಸರ್ಕಾರದ ಸೂಚನೆಯಂತೆ ಪೋಷಕರ ಅಭಿಪ್ರಾಯ ಸಂಗ್ರಹಿಸಿ, ಅದನ್ನು ಕ್ರೋಡೀಕರಿಸಿದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ. ಎಲ್ಲ ಶಾಲೆಗಳಲ್ಲಿ ಕೋವಿಡ್ ಮತ್ತು ಸಾಂಕ್ರಾಮಿಕ ಕಾಯಿಲೆಗಳ ಕಿರು ಹೊತ್ತಿಗೆ ತರಲಾಗುತ್ತಿದೆ.
-ಸುರೇಶ್‌ಕುಮಾರ್, ಜಿಲ್ಲಾ ಸಚಿವ