Advertisement

ಅಕ್ರಮ ಸಂಬಂಧ ಹೊಂದಿದ ವಿವಾಹಿತ ಮಹಿಳೆ ಗಂಡನಿಂದ ಜೀವನಾಂಶ ನಿರೀಕ್ಷಿಸುವಂತಿಲ್ಲ- ಹೈಕೋರ್ಟ್‌ 

10:14 PM Oct 06, 2023 | Team Udayavani |

ಬೆಂಗಳೂರು: ಬೇರೊಬ್ಬರ ಜತೆ ಅಕ್ರಮ ಸಂಬಂಧ ಇಟ್ಟುಕೊಂಡು ಸಹಜೀವನ ನಡೆಸುತ್ತಿರುವ ವಿವಾಹಿತ ಮಹಿಳೆಯು ಪತಿಯಿಂದ ಜೀವನಾಂಶ ನಿರೀಕ್ಷಿಸುವಂತಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

Advertisement

ಚಿಕ್ಕಮಗಳೂರು 2ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾ| ರಾಜೇಂದ್ರ ಬಾದಾಮಿಕರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ರೀತಿ ಅಭಿಪ್ರಾಯಪಟ್ಟಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರರ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದು, ಪ್ರಾಮಾಣಿಕರಲ್ಲದಿದ್ದಾಗ ಪತಿಯಿಂದ ಜೀವನಾಂಶ ನೀಡಬೇಕು ಎಂಬ ವಾದ ಒಪ್ಪಿಕೊಳ್ಳುವಂಥದ್ದಲ್ಲ. ಹಾಗಾಗಿ ಪತ್ನಿಯು ಪತಿಯ ಕಡೆಯಿಂದ ಯಾವುದೇ ನಿರೀಕ್ಷೆ ಮಾಡಬಾರದು ಎಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರರು ಮತ್ತೂಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿರುವ ಸಂಬಂಧ ದೂರು ದಾಖಲಾಗಿದ್ದು, ತನಿಖೆ ವೇಳೆ ಆಪ್ತನೊಂದಿಗೆ ಇರಲು ಇಚ್ಛಿಸುತ್ತಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ಆಧಾರದಲ್ಲಿ ವಿಚ್ಛೇದನವೂ ಮಂಜೂರಾಗಿದೆ. ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿಲ್ಲ. ಈ ಸಂಬಂಧ ಹಿಂದೊಮ್ಮೆ ರಾಜಿ ಮಾತುಕತೆ ನಡೆಸಿದ ಬಳಿಕ ಗಂಡನ ಮನೆಗೆ ಕಳುಹಿಸಲಾಗಿತ್ತು. ಆದರೂ ಅವರು ಗಂಡನನ್ನು ಬಿಟ್ಟು ಮತ್ತೂಬ್ಬ ವ್ಯಕ್ತಿಯೊಂದಿಗೆ ಸಹಜೀವನ ನಡೆಸುತ್ತಿದ್ದಾರೆ ಎಂದು ಆಕೆಯ (ಅರ್ಜಿದಾರಳ) ಸಹೋದರ ತಿಳಿಸಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಉಲ್ಲೇಖೀಸಿದೆ.

ಅರ್ಜಿದಾರರನ್ನು ಪಾಟಿ ಸವಾಲಿಗೆ ಒಳಪಡಿಸಿದಾಗ ಜೀವನ ನಡೆಸುವುದಕ್ಕಾಗಿ ಯಾವುದೇ ಆದಾಯದ ಮೂಲಗಳಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಆದರೆ, ಸಾಕ್ಷಿಗಳ ಪ್ರಕಾರ ಮತ್ತೂಂದು ವ್ಯಕ್ತಿಯೊಂದಿಗೆ ನೆಲೆಸಿದ್ದು, ಅವರೇ ಜೀವನ ನೋಡಿಕೊಳ್ಳುತ್ತಿದ್ದಾರೆ. ಎಲ್ಲ ಸಂದರ್ಭಗಳಲ್ಲಿಯೂ ಆ ವ್ಯಕ್ತಿಯೊಂದಿಗೆ ಇರುತ್ತಿರುವ ಅಂಶ ಸಾಕ್ಷ್ಯಾಧಾರಗಳಿಂದ ತಿಳಿದುಬಂದಿದೆ. ಆದ ಕಾರಣ ಅರ್ಜಿದಾರರು ಕೋರಿರುವ ಪರಿಹಾರ ನೀಡಲಾಗದು ಎಂದು ನ್ಯಾಯಪೀಠ ಹೇಳಿದೆ.

Advertisement

ಅರ್ಜಿದಾರರ ಮನವಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸದೆ ಜೀವನಾಂಶ ನೀಡಲು ನಿರ್ದೇಶನ ನೀಡಿದೆ. ಆದರೆ, ಸೆಷನ್ಸ್‌ ನ್ಯಾಯಾಲಯ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿಯೇ ಈ ಆದೇಶಿಸಿದೆ. ಇದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ ಪುನರ್‌ಪರಿಶೀಲನಾ ಅರ್ಜಿ ವಜಾಗೊಳಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಪ್ರತಿವಾದಿಯವರನ್ನು ಕಾನೂನುಬದ್ಧವಾಗಿ ವಿವಾಹವಾಗಿದ್ದು, ಪತ್ನಿಗೆ ಜೀವನಾಂಶ ನೀಡುವುದು ಗಂಡನ ಕರ್ತವ್ಯವಾಗಿದೆ ಎಂದು ನ್ಯಾಯಪೀಠವನ್ನು ಕೋರಿದರು. ಪ್ರತಿವಾದಿಯ ಪರ ವಕೀಲರು, ಅಕ್ರಮ ಸಂಬಂಧದ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ ದಂಪತಿಯ ನಡುವೆ ವಿಚ್ಛೇದನ ಮಂಜೂರು ಮಾಡಿದೆ. ಅಲ್ಲದೆ, ಅರ್ಜಿದಾರರು ಪತಿಯೊಂದಿಗೆ ಜೀವನ ನಡೆಸಲು ನಿರಾಕರಿಸಿದ್ದು, ಮತ್ತೂಬ್ಬ ವ್ಯಕ್ತಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಕಾನೂನುಬದ್ಧವಾಗಿ ದಂಪತಿಯಾಗಿದ್ದರೂ, ಅಕ್ರಮ ಸಂಬಂಧ ಹೊಂದಿರುವ ಅವರ ನಡವಳಿಕೆ ಇರುವುದರಿಂದ ಯಾವುದೇ ಜೀವನಾಂಶಕ್ಕೆ ಅರ್ಹರಲ್ಲ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರು ಜಿಲ್ಲೆಯ ರಾಮನಹಳ್ಳಿಯ ವ್ಯಕ್ತಿ ಅದೇ ಜಿಲ್ಲೆಯ ರತ್ನಕೋಟೆ ಎಂಬ ಗ್ರಾಮದ ಮಹಿಳೆಯನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಪತ್ನಿ ಮತ್ತೂಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದರು. ಈ ಸಂಬಂಧ ರಾಜಿ ಪಂಚಾಯಿತಿ ನಡೆದು ಬುದ್ದಿವಾದ ಹೇಳಲಾಗಿತ್ತು. ಆದರೂ, ಆಕೆ ತನ್ನ ವರ್ತನೆ ಸರಿಪಡಿಸಿಕೊಂಡಿರಲಿಲ್ಲ.ಇದೇ ಆಧಾರದಲ್ಲಿ ಕೌಟುಂಬಿಕ ನ್ಯಾಯಾಲಯ ವಿಚ್ಚೇದನವನ್ನೂ ಮಂಜೂರು ಮಾಡಿತ್ತು. ಆದರೆ, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪತ್ನಿಗೆ ಜೀವನ ನೀರ್ವಹಣೆಗೆ 1,500 ರೂ., ಮನೆ ಬಾಡಿಗೆಗೆ 1,000 ರೂ. ಮತ್ತು 5,000 ರೂ.ಗಳನ್ನು ಪರಿಹಾರವಾಗಿ ನೀಡಲು ಸೂಚನೆ ನೀಡಿತ್ತು. ಈ ಆದೇಶವನ್ನು ಸೆಷನ್ಸ್‌ ನ್ಯಾಯಾಲಯ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next