Advertisement

ಭಾರತದ 14 ಟೆಸ್ಟ್‌ ಸರಣಿ ವಿಜಯಗಳ ಅದ್ಭುತ ಯಾನ

12:13 AM Dec 08, 2021 | Team Udayavani |

21ನೇ ಶತಮಾನದಲ್ಲಿ ಅಂದರೆ 2000ನೇ ಇಸವಿ ಆರಂಭವಾದ ಅನಂತರ ಭಾರತ ತವರಲ್ಲಿ ಎಷ್ಟು ಸರಣಿ ಸೋತಿರಬಹುದು? ಕೇವಲ ಮೂರು ಬಾರಿ. 2012ರಲ್ಲಿ ಇಂಗ್ಲೆಂಡ್‌ ವಿರುದ್ಧ ಸರಣಿ ಸೋತಿದ್ದೇ ಕೊನೆ. ಅದಾದ ಅನಂತರ ಭಾರತ ಸತತ 14 ಟೆಸ್ಟ್‌ ಸರಣಿಗಳನ್ನು ಗೆದ್ದಿದೆ! ಅಂದರೆ 9 ವರ್ಷಗಳಿಂದ ಭಾರತ ತವರಲ್ಲಿ ಟೆಸ್ಟ್‌ ಸರಣಿಯನ್ನು ಸೋತೇ ಇಲ್ಲ. ಅದರಲ್ಲೂ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ವಿದೇಶದಲ್ಲೂ ಸರಣಿ ಗೆಲ್ಲುತ್ತಿದೆ. ಇನ್ನೇನು ಮುಗಿದೇ ಹೋಯಿತು ಎನ್ನುವಂತಹ ಸ್ಥಿತಿಯಲ್ಲೂ ಅತ್ಯದ್ಭುತವಾಗಿ ತಿರುಗಿಬಿದ್ದಿರುವ ಭಾರತೀಯರು ಆಸ್ಟ್ರೇಲಿಯ, ಇಂಗ್ಲೆಂಡ್‌ನ‌ಂತಹ ದೇಶಗಳಲ್ಲಿ ಸರಣಿ ಗೆದ್ದು ಬಂದಿದ್ದಾರೆ.

Advertisement

ಹೀಗಿರುವಾಗ ತವರು ನೆಲದಲ್ಲಿ ಈ ತಂಡವನ್ನು ತಡೆಯಲು ಸಾಧ್ಯವಾದೀತೆ? ಸದ್ಯದ ಅಂಕಿಅಂಶಗಳು ಅದನ್ನು ಸಾಬೀತು ಮಾಡಿವೆ. ಸೋಮವಾರ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಸಾಧಿಸಿದ ಟೆಸ್ಟ್‌ ಸರಣಿ ಜಯ ಹಲವು ಕಾರಣಗಳಿಗೆ ಚಾರಿತ್ರಿಕ. ಇವೆಲ್ಲ ಶುರುವಾಗಿದ್ದು 2013ರಲ್ಲಿ. ಆಗ ಧೋನಿ ನಾಯಕತ್ವದ ಭಾರತ ಆಸ್ಟ್ರೇಲಿಯವನ್ನು 4-0 ಸೋಲಿಸಿತು. ಮುಂದೆ ವೆಸ್ಟ್‌ ಇಂಡೀಸ್‌ ವಿರುದ್ಧ 2-0ಯಿಂದ, ದ.ಆಫ್ರಿಕಾ ವಿರುದ್ಧ 3-0ಯಿಂದ, ನ್ಯೂಜಿಲೆಂಡ್‌ ವಿರುದ್ಧ 3-0ಯಿಂದ, ಇಂಗ್ಲೆಂಡ್‌ ವಿರುದ್ಧ 4-0ಯಿಂದ, ಬಾಂಗ್ಲಾ ವಿರುದ್ಧ 1-0ಯಿಂದ, ಆಸ್ಟ್ರೇಲಿಯ ವಿರುದ್ಧ 2-1ರಿಂದ, ಶ್ರೀಲಂಕಾ ವಿರುದ್ಧ 1-0ಯಿಂದ, ಅಫ್ಘಾನಿಸ್ಥಾನದ ವಿರುದ್ಧ 1-0ಯಿಂದ, ವೆಸ್ಟ್‌ ಇಂಡೀಸ್‌ ವಿರುದ್ಧ 2-0ಯಿಂದ, ದ.ಆಫ್ರಿಕಾ ವಿರುದ್ಧ 3-0ಯಿಂದ, ಬಾಂಗ್ಲಾ ವಿರುದ್ಧ 2-0ಯಿಂದ, ಇಂಗ್ಲೆಂಡ್‌ ವಿರುದ್ಧ 3-1ರಿಂದ, ನ್ಯೂಜಿಲೆಂಡ್‌ ವಿರುದ್ಧ 1-0ಯಿಂದ ಗೆಲುವು ಸಾಧಿಸಿದೆ.

ಈ ಇಷ್ಟೂ ಗೆಲುವುಗಳಲ್ಲಿ ಎರಡು ಸರಣಿ ಧೋನಿ ನಾಯಕತ್ವದಲ್ಲಿ, ಉಳಿದೆಲ್ಲ ಸರಣಿಗಳು ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ದಕ್ಕಿವೆ!

ಇದನ್ನೂ ಓದಿ:ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಇದು ಕೊಹ್ಲಿ ನಾಯಕತ್ವದ ಸಾಮರ್ಥ್ಯಕ್ಕೂ ಒಂದು ಹೆಗ್ಗಳಿಕೆ. ಇದುವರೆಗೆ ಎಲ್ಲ ಮಾದರಿಗಳಲ್ಲೂ ತಲಾ 50 ಗೆಲುವುಗಳನ್ನು ಕಾಣುವ ಮೂಲಕ ತಾವೊಬ್ಬರು ಯಶಸ್ವಿ ನಾಯಕ ಎಂಬು ದನ್ನೂ ಕೊಹ್ಲಿ ನಿರೂಪಿಸಿದ್ದಾರೆ. ಹಾಗೆಯೇ ಭಾರತ ತಂಡ ತವರಲ್ಲಿ ಎಷ್ಟು ಬಲಿಷ್ಠ ಅಭೇದ್ಯ ಎನ್ನುವುದಕ್ಕೂ ಮಾನದಂಡ. ವಿಶೇಷವೆಂದರೆ ತವರಲ್ಲಿ ಸತತವಾಗಿ ಟೆಸ್ಟ್‌ ಸರಣಿ ಗೆದ್ದ ತಂಡಗಳ ಲೆಕ್ಕಾಚಾರದಲ್ಲಿ ಭಾರತ ಬಹಳ ಮುಂದಿದೆ. ಅಗ್ರಸ್ಥಾನದಲ್ಲಿರುವ ಭಾರತ 2013 ಫೆಬ್ರವರಿಯಿಂದ ಇಲ್ಲಿಯವರೆಗೆ ಸತತ 14 ಸರಣಿಗಳನ್ನು ಗೆದ್ದಿದೆ. ದ್ವಿತೀಯ ಸ್ಥಾನಿ ಆಸ್ಟ್ರೇಲಿಯ 1994 ನವೆಂಬರ್‌ನಿಂದ 2000ನೇ ವರ್ಷ ನವೆಂಬರ್‌ವರೆಗೆ ಸತತವಾಗಿ 10 ಸರಣಿಗಳನ್ನು ಗೆದ್ದಿತ್ತು.

Advertisement

ಭಾರತದ ಈ ಸರಣಿ ಜಯ ಕೇವಲ ತವರಲ್ಲಿ ಮಾತ್ರ ಸಾಧ್ಯವಾಗಿದ್ದು ಎಂದು ತಿರಸ್ಕರಿಸುವವರಿಗೆ ಇಲ್ಲಿ ಮುಂದಿನ ಮಾತುಕತೆಗೆ ಆಸ್ಪದವೇ ಇಲ್ಲ. ಕಾರಣ ಬಲಿಷ್ಠ ಆಸ್ಟ್ರೇಲಿಯ, ಇಂಗ್ಲೆಂಡ್‌ನ‌ಂತಹ ಘಟಾನುಘಟಿ ರಾಷ್ಟ್ರಗಳನ್ನೇ ಭಾರತ ಅವುಗಳ ನಾಡಿನಲ್ಲೇ ನಿರ್ಣಾಯಕವಾಗಿ ಸೋಲಿಸಿದೆ. ಭಾರತ ಯಾವುದೇ ದೇಶಕ್ಕೆ ಹೋದರೂ ಆತಿಥೇಯ ತಂಡಗಳೇ ಭಾರತವನ್ನು ಸೋಲಿಸುವುದನ್ನು ದೊಡ್ಡ ಸಾಧನೆಯನ್ನಾಗಿ ಪರಿಗಣಿಸುತ್ತಿವೆ! ಟೆಸ್ಟ್‌ ತಂಡವಾಗಿ ಭಾರತ ಅಷ್ಟು ಅದ್ಭುತ ಪ್ರಗತಿ ಸಾಧಿಸಿದೆ. ಇದೇ ವರ್ಷ ಇಂಗ್ಲೆಂಡ್‌ನ‌ಲ್ಲಿ ನಡೆದ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಸೋತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಆ ಸರಣಿಗೂ ಮುನ್ನ ಭಾರತಕ್ಕೆ ಪೂರ್ವಭಾವಿ ಅಭ್ಯಾಸಕ್ಕೆ ಅವಕಾಶ ಸಿಕ್ಕಿರಲಿಲ್ಲ. ಕ್ರಿಕೆಟ್‌ನಲ್ಲಿ ಇರುವ ಭಾರತದ ಈ ಶಕ್ತಿ ಉಳಿದ ಕ್ರೀಡೆಗಳಲ್ಲೂ ವ್ಯಕ್ತವಾಗಲಿ ಎನ್ನುವುದು ಎಲ್ಲರ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next