ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಎರಡು ತಿಂಗಳ ನಂತರ ನಡೆದ ಹುಂಡಿ ಎಣಿಕೆಯಲ್ಲಿ 85.23 ಲಕ್ಷ ರೂ.ಸಂಗ್ರಹವಾಗಿದೆ. ಹುಂಡಿ ಎಣಿಕೆಯಲ್ಲಿ ಒಟ್ಟು 85,23,744 ರೂ. ಮೊತ್ತ ಸಂಗ್ರಹವಾಗಿದ್ದು, ಇದರೊಂದಿಗೆ 11 ಗ್ರಾಂ 900 ಮಿಲಿ ಚಿನ್ನ, ಹಾಗೂ
5 ಕೆ.ಜಿ 50 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.
ಪ್ರೇಮಿಯ ನಿವೇದನೆ: ಭಕ್ತರು ಇತ್ತೀಚಿಗೆ ದೇವರ ಕಾಣಿಕೆ ಹುಂಡಿಗಳಲ್ಲಿ ಚಿತ್ರ ವಿಚಿತ್ರವಾದ ಬೇಡಿಕೆಗಳನ್ನು ಹೊತ್ತ ಕಾಗದದ ಪತ್ರಗಳನ್ನು ಹಾಕಿ ಮನವಿ ಮಾಡಿಕೊಳ್ಳುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಅಂತೆಯೇ ಸೋಮವಾರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ನಡೆದ ಹುಂಡಿಯಲ್ಲಿ ಪ್ರೇಮಿಯೋರ್ವ ಯುವತಿ ತನಗೇ ಸಿಗುವಂತೆ ರಕ್ತದಲ್ಲಿ ಬರೆದು ಪೋಟೋದ ಸಹಿತ ಕಾಣಿಕೆ ಜೊತೆ ಅರ್ಪಿಸಿ ದೇವರಿಗೆ ಮೊರೆಯಿಟ್ಟಿದ್ದಾನೆ.
ರಕ್ತದಲ್ಲಿ ಬರೆದ ಪತ್ರ: ಪೋಟೋ ಹಿಂಭಾಗದಲ್ಲಿನ ಬರಹದಂತೆ ರಾಜೇಶ.ಬಿ.ಎಸ್. ರಕ್ಷಿತಾ.ಎಚ್. ಆರ್. ಈ ಹುಡುಗಿ ನನ್ ಜೋಡಿ ಆಗಂಗೆ ಮಾಡಪ್ಪಾ ಎಂದು ಪ್ರೇಮಿ ರಕ್ತದಲ್ಲಿ ಬರೆದಿದ್ದು, ಈ ಪತ್ರ ನೆರೆದಿದ್ದವರ ಕುತೂಹಲಕ್ಕೆ ಕಾರಣವಾಗಿತ್ತು. ಹುಂಡಿ ಎಣಿಕೆ ವೇಳೆ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜಿ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜು, ಪ್ರಧಾನ ಅರ್ಚಕ ಎಸ್.ಎನ್.ಸುಬ್ಬಕೃಷ್ಣಶಾಸ್ತ್ರೀ, ದೇವಾಲಯದ ಅಧೀಕ್ಷಕ ರಘು ಉಚ್ಚಪ್ಪ ಸೇರಿದಂತೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ಇದ್ದರು.