Advertisement
ಸೋಮವಾರ ಮಧ್ಯಾಹ್ನ ಭೋಜನಾ ನಂತರ ಕಲಾಪದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಮೂರು ಪಕ್ಷಗಳು ಶಾಸಕರು ಸದ್ಯ ರೆಸಾರ್ಟ್‌ನಲ್ಲಿರುವುದು ಪ್ರಜಾಪ್ರಭುತ್ವದ ಕುಸಿತವಲ್ಲವೆ. ಎಷ್ಟೇ ಚರ್ಚೆಯಾದರೂ ಸಿದ್ಧಾಂತದ ಮೇಲೆ ಯಾವುದೂ ನಿರ್ಣಯವಾಗುವುದಿಲ್ಲ. ಸರ್ಕಾರದ ಅಳಿವು- ಉಳಿವು ಸಂಖ್ಯಾಬಲದ ಮೇಲೆ ನಿಂತಿದೆ. ಬರದಿಂದ ಜನ ತತ್ತರಿಸುತ್ತಿರುವ ಬಗ್ಗೆ ಚರ್ಚಿಸದೆ, ಅಧಿಕಾರದ ಚರ್ಚೆ ನಡೆಸಿ ಸದನ ಹಾಗೂ ರಾಜ್ಯದ ಗೌರವಕ್ಕೆ ಧಕ್ಕೆ ತರುವುದು ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Related Articles
Advertisement
ವಿಶ್ವಾಸ ಮತ ಯಾಚನೆ ಮಾಡದೆ ಕಾಲಹರಣ ಮಾಡಲಾಗುತ್ತಿದೆ ಎಂದು ಸರ್ಕಾರದ ಮೇಲೆ ಅಪವಾದವಿದೆ. ಇದು ಅರ್ಧಂಬರ್ಧ ಸತ್ಯ ಕೂಡ. ಹಾಗೆಯೇ ರಾಜ್ಯಪಾಲರು ನೀಡುವ ನೋಟಿಸ್ ಯಾವ ತಂತ್ರಗಾರಿಕೆ. ಅದೇನು ಒತ್ತಡ ತಂತ್ರವೇ? ಕಾರ್ಯಾಂಗದ ಮುಖ್ಯಸ್ಥರಾದವರೇ ತಂತ್ರಗಾರಿಕೆಗೆ ಮುಂದಾದರೆ ಏನು ಹೇಳುವುದು ಎಂದರು.
ಸದನದಲ್ಲಿ ಶಾಸಕರೊಬ್ಬರು ತಮ್ಮಗೆ ಕೆಲ ಶಾಸಕರು ಐದು ಕೋಟಿ ರೂ. ಹಣ ಕೊಟ್ಟು ಹೋದರು ಎಂಬ ಆರೋಪ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ, ಎಸಿಬಿ ಏನು ಮಾಡುತ್ತಿವೆ. ಈ ರೀತಿಯ ಕಪ್ಪು ಹಣವೇ ಅಕ್ರಮಕ್ಕೆ ಅವಕಾಶವಾಗಲಿದೆ. ಈ ಬಗ್ಗೆ ಸ್ವಯಂಪ್ರೇರಿತ ತನಿಖೆ ಆಗಬೇಕು. ಪಕ್ಷಾಂತರ ನಿಷೇಧ ಕಾಯ್ದೆ ಇನ್ನಷ್ಟು ಕಠಿಣವಾಗಬೇಕು ಎಂದು ಅಭಿಪ್ರಾಯಪಟ್ಟರು.
ಹೂ ಮಧ್ಯದಲ್ಲಿ ಬಿತ್ತು: ಯಡಿಯೂರಪ್ಪನವರ ಕಡೆಯವರೊಬ್ಬರು ದೇವಸ್ಥಾನದಲ್ಲಿ ಪೂಜೆ ಮಾಡಿದಾಗ ಹೂ ಬಲಗಡೆಯಿಂದ ಬಿತ್ತಂತೆ. ಹಾಗಾಗಿ ಅವರು ಮುಖ್ಯಮಂತ್ರಿಯಾಗುತ್ತಾರೆ. ಇನ್ನೊಂದೆಡೆ ಎಚ್.ಡಿ.ಕುಮಾರಸ್ವಾಮಿಯವರ ಕಡೆಯವರು ಹೋಗಿ ಪೂಜೆ ಮಾಡಿಸಿದಾಗಲೂ ಬಲಗಡೆಯಿಂದ ಹೂ ಬಿತ್ತಂತೆ. ದೇವರ ಮೂರ್ತಿಯ ಬಲಭಾಗದಲ್ಲೇ ಹೆಚ್ಚು ಹೂಗಳನ್ನು ಪೇರಿಸಿದರೆ ಸಹಜವಾಗಿಯೇ ಬೀಳುತ್ತದೆ. ಏಕಕಾಲಕ್ಕೆ ಇಬ್ಬರು ಮುಖ್ಯಮಂತ್ರಿಗಳಾಗಲು ಸಾಧ್ಯವೇ. ಇದನ್ನು ಕಂಡು ದೇವರೇ ಹೆದರಿ ಓಡಿಹೋಗಿದ್ದಾನೆ ಎಂದು ಎ.ಟಿ.ರಾಮಸ್ವಾಮಿ ಹೇಳಿದರು. ಆಗ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ನನಗೆ ಎಡ, ಬಲ ಎರಡೂ ಕಡೆ ಬೀಳಲಿಲ್ಲ. ಬದಲಿಗೆ ಹೂ ಮಧ್ಯದಲ್ಲಿ ಬಿತ್ತು. ನಾನು ಎಲ್ಲಿಗೆ ಹೋಗಲಿ ಎಂದು ನಕ್ಕರು.
ಆತ್ವಾವಲೋಕನ ಮಾಡಿಕೊಳ್ಳಲಿ: ಜನತಾ ಪರಿವಾರವು ನೂರಾರು ನಾಯಕರು, ಜನಪ್ರತಿನಿಧಿಗಳನ್ನು ಹುಟ್ಟು ಹಾಕಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ರಾಜ್ಯದ ಸಮಗ್ರ ಮಾಹಿತಿ ಇದೆ. ಇಷ್ಟಾದರೂ ಪಕ್ಷ ಬೆಳೆಯದಿರುವುದಕ್ಕೆ ಕಾರಣವೇನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.