ಕಾಪು: ಕಾಪು ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ದೊರಕುತ್ತಿದೆ. ಅದನ್ನು ಕಾಂಗ್ರೆಸ್ ಪರವಾದ ಮತಗಳನ್ನಾಗಿ ಪರಿವರ್ತಿಸಿ, ಪಕ್ಷದ ಅಭ್ಯರ್ಥಿ ವಿನಯಕುಮಾರ್ ಸೊರಕೆಯವರನ್ನು ಗೆಲ್ಲಿಸುವ ಜವಾಬ್ದಾರಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರದ್ದಾಗಿದೆ. ಅದಕ್ಕಾಗಿ ಎಲ್ಲರೂ ಕೈ ಜೋಡಿಸುವಂತೆ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಕಾಪು ರಾಜೀವ ಭವನದಲ್ಲಿ ಬುಧವಾರ ನಡೆದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಾಪು ಕ್ಷೇತ್ರಕ್ಕೆ ಡಿಕೆಶಿ ಕೊಡುಗೆ ಅಪಾರ ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಯುಪಿಸಿಎಲ್‌ನಿಂದಾಗಿ ಕರಾವಳಿ ಭಾಗದ ಜನತೆ ಎದುರಿಸುತ್ತಿದ್ದ ಸಮಸ್ಯೆ ಗಳೆಲ್ಲವನ್ನೂ ಇತ್ಯರ್ಥಪಡಿಸಬೇಕಾದರೆ ಕಾಂಗ್ರೆಸ್ ಸರಕಾರ ಬರಬೇಕಾಯಿತು. ಉಷ್ಣ ವಿದ್ಯುತ್ ಸ್ಥಾವರ ಇರುವ ಪ್ರದೇಶದಲ್ಲಿ 24 ಗಂಟೆ ವಿದ್ಯುತ್ ನೀಡಬೇಕೆಂಬ ಕಾನೂನಿದ್ದರೂ ಯುಪಿಸಿಎಲ್ ಕಂಪೆನಿ ಇದನ್ನು ಪಾಲನೇ ಮಾಡುತ್ತಿರಲಿಲ್ಲ. ಡಿಕೆಶಿಯವರ ಒಂದು ಆದೇಶಕ್ಕೆ ತಲೆಬಾಗಿ ಈಗ ಕಾಪು ಕ್ಷೇತ್ರಕ್ಕೆ 24 ಗಂಟೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದರು.
ಕಾಂಗ್ರೆಸ್ ಬಡವರ ಪಾಲಿನ ಸ್ವರ್ಗ
ಚಲನಚಿತ್ರ ನಟ ಸಾಧು ಕೋಕಿಲ ಮಾತನಾಡಿ, ಕಾಂಗ್ರೆಸ್ ಬಡವರ ಅಭಿವೃದ್ಧಿ ಗಾಗಿ ನಿರಂತರ ಶ್ರಮಿಸುತ್ತಿದೆ. ಬಡವರಿಗಾಗಿ ಸದಾ ಮಿಡಿಯುತ್ತಿರುವ ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ಅಭ್ಯರ್ಥಿ ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಮಾಜಿ ಶಾಸಕ ಯು.ಆರ್. ಸಭಾಪತಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಚುನಾವಣಾ ಪ್ರಚಾರ ಸಮಿತಿಯ ಪದಾಧಿಕಾರಿಗಳಾದ ಫಾರೂಕ್, ಲಾವಣ್ಯಾ, ದಿನೇಶ್ ಪುತ್ರನ್, ದಿನೇಶ್ ಕೋಟ್ಯಾನ್ ಪಲಿಮಾರು, ಪಕ್ಷದ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ಕಾಪು ದಿವಾಕರ ಶೆಟ್ಟಿ, ಉದಯ ಶೆಟ್ಟಿ ಮುನಿಯಾಲು, ಗೀತಾ ವಾಗ್ಲೆ, ಎಂ.ಪಿ. ಮೊಯ್ದಿನಬ್ಬ, ಹರೀಶ್ ಕಿಣಿ, ಎಚ್. ಅಬ್ದುಲ್ಲಾ, ವಿಶ್ವಾಸ್ ಅಮೀನ್, ಶಿವಾಜಿ ಸುವರ್ಣ, ಮನಹರ್ ಇಬ್ರಾಹಿಂ, ಹರೀಶ್ ಶೆಟ್ಟಿ ಪಾಂಗಾಳ ಮೊದಲಾದವರು ಉಪಸ್ಥಿತರಿದ್ದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿದರು. ಬ್ಲಾಕ್ ಕಾರ್ಯದರ್ಶಿ ವಿನಯ ಬಲ್ಲಾಳ್ ವಂದಿಸಿದರು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಜೀಜ್ ನಿರೂಪಿಸಿದರು.
ಸೊರಕೆ ತ್ಯಾಗ ಮಾದರಿ
ಕರಾವಳಿ, ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರ ಅನಂತರದ ಸ್ಥಾನವನ್ನು ವಿನಯಕುಮಾರ್ ಸೊರಕೆ ಸಮರ್ಥವಾಗಿ ತುಂಬಿದ್ದಾರೆ. ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ತಮ್ಮ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ ಅಭಿವೃದ್ಧಿಯ ಹರಿಕಾರ ಸೊರಕೆ ಅವರನ್ನು ಮತ್ತೂಮ್ಮೆ ಗೆಲ್ಲಿಸಿ ಎಂದು ಡಿಕೆಶಿ ತಿಳಿಸಿದರು.