Advertisement
ಕಮಲಾಬಾಯಿ ತಾಯಿ ದುರ್ಗಾಬಾಯಿ ಕಾಮತ್, ಜೆಜೆ ಸ್ಕೂಲ್ ಆಫ್ ಆರ್ಟ್ ನ ಪ್ರೊ.ಆನಂದ್ ನಾನೋಸ್ಕರ್ ದುರ್ಗಾಬಾಯಿ ಪತಿ. ಆದರೆ ಚಿಕ್ಕವಯಸ್ಸಿನಲ್ಲಿಯೇ ಇಬ್ಬರು ದೂರವಾಗಿ ಬಿಟ್ಟಿದ್ದರು. ಮೂರು ಪುಟ್ಟ ಹೆಣ್ಣು ಮಕ್ಕಳ ಜತೆ ಆ ಕಾಲದಲ್ಲಿ ಒಂಟಿಯಾಗಿದ್ದ ದುರ್ಗಾಬಾಯಿ ಎದುರು ಇದ್ದಿದ್ದು ಮೂರು ಆಯ್ಕೆಗಳು ಮಾತ್ರ! ಒಂದೋ ಮನೆಗೆಲಸ ಮಾಡಿಕೊಂಡಿರಬೇಕು ಇಲ್ಲವೇ ತನ್ನ ಮೈಮಾರಿಕೊಳ್ಳುವ ಮೂಲಕ ವೇಶ್ಯೆಯಾಗೋದು ಕೊನೆಯ ಅವಕಾಶವೆಂದರೆ ನಟಿಯಾಗುವುದು! ಹೀಗೆ ದೃಢ ನಿರ್ಧಾರ ಕೈಗೊಂಡ ದುರ್ಗಾಬಾಯಿ ನಾಟಕ ಕಂಪನಿಗೆ ಸೇರಲು ನಿಶ್ಚಿಯಿಸಿಬಿಟ್ಟಿದ್ದರು!
Related Articles
Advertisement
1913ರಲ್ಲಿ ಮೊತ್ತ ಮೊದಲ ನಟನೆ ಮೂಲಕ ಇತಿಹಾಸ ಸೃಷ್ಟಿ:
1912ರಲ್ಲಿ ದಾದಾಸಾಹೇಬ್ ಫಾಲ್ಕೆ ನಿರ್ದೇಶನದ ಮರಾಠಿ ಚಿತ್ರ ಮೋಹಿನಿ ಭಸ್ಮಾಸುರದಲ್ಲಿ ನಟಿಸಲು ಕಮಲಾಬಾಯಿ ಅವರನ್ನು ಆಯ್ಕೆ ಮಾಡಲಾಗಿತ್ತು. ತಾಯಿ ದುರ್ಗಾಬಾಯಿ ಈ ಸಿನಿಮಾದಲ್ಲಿ ಪಾರ್ವತಿ ಪಾತ್ರ ಮಾಡಿದ್ದರು. ಇದರೊಂದಿಗೆ ತಾಯಿ ಮತ್ತು ಮಗಳು ಒಂದೇ ಸಿನಿಮಾದಲ್ಲಿ ನಟಿಸಿ, ಮೊತ್ತ ಮೊದಲ ಮಹಿಳಾ ನಟಿ ಎಂಬ ಬಿರುದಿಗೆ ಪಾತ್ರರಾಗಿಬಿಟ್ಟಿದ್ದರು.
ಮೋಹಿನಿ ಭಸ್ಮಾಸುರ ಸಿನಿಮಾದಲ್ಲಿ ನಟಿಸಿದಾಗ ಕಮಲಾಬಾಯಿ ವಯಸ್ಸು ಕೇವಲ 15. ಅಂದಿನ ಸಿನಿಮಾ ಚಿತ್ರೀಕರಣ, ಅನುಭವಿಸಿದ ಸಂಕಷ್ಟಗಳು ಹೇಗಿದ್ದವು ಎಂಬುದನ್ನು ನೆನಪಿಸಿಕೊಂಡಿದ್ದ ಕಮಲಾಬಾಯಿ, ಸಿನಿಮಾಕ್ಕಾಗಿ ಎಲ್ಲಾ ಯಂತ್ರೋಪಕರಣಗಳು ಇಂಗ್ಲೆಂಡ್ ನಿಂದಲೇ ಬರಬೇಕಾಗಿತ್ತು. ಸಿನಿಮಾ ಚಿತ್ರೀಕರಣಕ್ಕಾಗಿ ನಾಸಿಕ್ ನಲ್ಲಿರುವ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ನಾನು ಬೆಳಗ್ಗಿನ ಜಾವ 4ಗಂಟೆಗೆ ಏಳುತ್ತಿದ್ದೆ. ನಂತರ ಮೂರು ಗಂಟೆಗಳ ಕಾಲ ಎತ್ತಿನ ಗಾಡಿಯಲ್ಲಿ ಕುಳಿತು ತ್ರಯಂಬಕೇಶ್ವರಕ್ಕೆ ಹೋಗುತ್ತಿದ್ದೇವು. ಇಂದು ಉಪಯೋಗಿಸುವ ರೀತಿಯ ಆಧುನಿಕ ಬೆಳಕಿನ ವ್ಯವಸ್ಥೆಗಳಿರಲ್ಲಿವಾಗಿತ್ತು. ಬಹುತೇಕ ಸಿನಿಮಾ ಶೂಟಿಂಗ್ ಅನ್ನು ಸೂರ್ಯನ ಬೆಳಕು, ಕನ್ನಡಿಯ ಪ್ರತಿಬಿಂಬ ಹಿಡಿದು ಚಿತ್ರೀಕರಿಸಲಾಗುತ್ತಿತ್ತು.
ಅವೆಲ್ಲಕ್ಕಿಂತ ಹೆಚ್ಚಾಗಿ ಇಡೀ ಚಿತ್ರತಂಡದ 125 ಮಂದಿಯನ್ನು 80 ಎತ್ತಿನಗಾಡಿಯಲ್ಲಿ ಕರೆದೊಯ್ಯುತ್ತಿದ್ದರು. ಇದರಲ್ಲಿ ನಟ, ನಟಿ, ಸಹ ಕಲಾವಿದರು, ಟೈಲರ್ಸ್, ಅಕ್ಕಸಾಲಿಗ, ಇಸ್ತ್ರಿ ಹಾಕುವವರು ಸೇರಿದಂತೆ ಎಲ್ಲರೂ ಇರುತ್ತಿದ್ದರು. ಸಿನಿಮಾದ ಪ್ರಚಾರವನ್ನು ಹ್ಯಾಂಡ್ ಬಿಲ್ ಹಂಚುವ ಮೂಲಕ ಮಾಡಲಾಗುತ್ತಿತ್ತು. ಕೆಲವೊಮ್ಮೆ ಮೋಟಾರ್ ಬೈಕ್ ನಲ್ಲಿ ಹೋಗುವಾಗ ಎಸೆಯುತ್ತಾ ಹೋಗುತ್ತಿದ್ದರು!
ನಿರ್ದೇಶಕ ದಾದಾಸಾಹೇಬ್ ಅವರು ತುಂಬಾ ಸಹನೆಯಿಂದ ನನಗೆ ನಟನೆ ಹಾಗೂ ಮಾಹಿತಿಯನ್ನು ವಿವರಿಸುತ್ತಿದ್ದರು. ಒಂದು ಬಾರಿ ರಿಹರ್ಸಲ್ ಮಾಡಿದರೆ ಅವರಿಗೆ ತೃಪ್ತಿಯಾಗುತ್ತಿತ್ತು. ಬಳಿಕ ಟೇಕ್ ತೆಗೆದುಕೊಳ್ಳುತ್ತಿದ್ದರು. ಅಲ್ಲೇನೂ ಸೌಂಡ್ ಇರಲಿಲ್ಲವಾಗಿತ್ತು, ಕೇವಲ ಸಂಭಾಷಣೆ ಮಾತ್ರ ಹೇಳಿ ಮೌನವಾಗಿಯೇ ಚಿತ್ರೀಕರಣ ನಡೆಯುತ್ತಿತ್ತು. ಇಡೀ ಚಿತ್ರತಂಡ ಒಂದು ಕುಟುಂಬದಂತೆ ಇರುತ್ತಿದ್ದೇವು. ಸಂಬಳ ಅತೀ ಹೆಚ್ಚು ಅಂದರೆ 50 ರೂಪಾಯಿ ಮೀರುತ್ತಿರಲಿಲ್ಲ. ಉಚಿತ ಲಾಡ್ಜಿಂಗ್ ವ್ಯವಸ್ಥೆ ಮಾಡಿಕೊಡುತ್ತಿದ್ದರಂತೆ.
ಮೋಹಿನಿ ಭಸ್ಮಾಸುರ ಸಿನಿಮಾ ಬಿಡುಗಡೆಯಾದ ವರ್ಷವೇ ಕಮಲಾಬಾಯಿ ರಘುನಾಥ್ ರಾವ್ ಗೋಖಲೆ ಅವರ ಜತೆ ಹಸೆಮಣೆ ಏರಿದ್ದರು. ಬಳಿಕ ಕಮಲಾಬಾಯಿ ಕಾಮತ್ ಗೋಖಲೆಯಾಗಿದ್ದರು. ಪತಿ ಗೋಖಲೆ ಕಿರ್ಲೋಸ್ಕರ್ ನಾಟಕ ಕಂಪನಿಯಲ್ಲಿ ಸ್ತ್ರೀ ಪಾತ್ರ ಮಾಡುತ್ತಿದ್ದರಂತೆ. ಆದರೆ ಪತಿಯ ಧ್ವನಿ ಒಡೆದು ಹೋಗಿದ್ದರಿಂದ ಸಹೋದರನ ನಾಟಕ ಕಂಪನಿ ಸೇರಿಕೊಂಡಿದ್ದರು. ನಂತರ ನಾಟಕ ಕಂಪನಿಯಲ್ಲಿ ಈ ಯುವ ಜೋಡಿ ಜನರಲ್ಲಿ ಮೋಡಿ ಮಾಡಿತ್ತು.
ಅಂದು ವೀರ ಸಾವರ್ಕರ್ ಅವರ ನಾಟಕದಲ್ಲಿ ಅಭಿನಯಿಸಿದ್ದರು!
1930ರಲ್ಲಿ ಕಮಲಾಬಾಯಿ ಅವರು ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರ ಸಾಮಾಜಿಕ “ಉಶಾಪ್”(ಅಸ್ಪ್ರಶ್ಯತೆ) ನಾಟಕದಲ್ಲಿ ಅಭಿನಯಿಸಿದ್ದರು. ಸಾವರ್ಕರ್ ಜತೆಗಿನ ಕೆಲಸ ನನಗೆ ಈ ಹಿಂದಿನ ಎಲ್ಲಾ ಕಾರ್ಯಕ್ಕಿಂತಲೂ ಭಿನ್ನ ಅನುಭವ ಕೊಟ್ಟಿತ್ತು. ಅಂದು ಸಾವರ್ಕರ್ ಗೃಹ ಬಂಧನದಲ್ಲಿ ಇದ್ದಿದ್ದರು…ನಾಟಕದ ರಿಹರ್ಸಲ್ಸ್ ಮಾಡಿಲು ಪೊಲೀಸ್ ಬೆಂಗಾವಲು ಪಡೆಯೊಂದಿಗೆ ಆಗಮಿಸುತ್ತಿದ್ದರು. ಉಶಾಪ್ ಮರಾಠಿ ನಾಟಕದ ತರ್ಜುಮೆ ಪ್ರತಿಗೆ ಸ್ಥಳೀಯ ಬ್ರಿಟಿಷ್ ಅಧಿಕಾರಿ ಅಂಗೀಕಾರ ನೀಡಿದ್ದು, ಯಾವುದೇ ರೀತಿಯಲ್ಲಿಯೂ ಸಮಸ್ಯೆ ಎದುರಾಗುವುದಿಲ್ಲ ಎಂಬ ಭರವಸೆಯ ಮುಚ್ಚಳಿಕೆ ಬರೆಯಿಸಿಕೊಂಡಿದ್ದರು ಎಂದು ಕಮಲಾಬಾಯಿ ಮನದಾಳದ ನೆನಪನ್ನು ಬಿಚ್ಚಿಟ್ಟಿದ್ದರು.
25ನೇ ವಯಸ್ಸಿಗೆ ವಿಧವೆ…40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ!
ಜೀವನಚಕ್ರ ಉರುಳುತ್ತಿದ್ದಂತೆಯೇ ಕಮಲಾಬಾಯಿ ಬದುಕಿಗೆ ದೊಡ್ಡ ಆಘಾತ ನೀಡಿದ್ದು ಪತಿಯ ಸಾವು. ಆಗ ಕಮಲಬಾಯಿ ವಯಸ್ಸು 25! ಮೂರನೇ ಮಗುವಿನ ಗರ್ಭಿಣಿಯಾಗಿದ್ದ ಕಮಲಾಬಾಯಿ ಧೈರ್ಯದಿಂದ ಎಲ್ಲವನ್ನೂ ಎದುರಿಸುವ ಗಟ್ಟಿ ನಿರ್ಧಾರ ತಳೆದುಬಿಟ್ಟಿದ್ದರು. ತಾಯಿ ಹಾಗೂ ತನ್ನ ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಹೆಗಲೇರಿತ್ತು. 1913ರಲ್ಲಿ ಮೊತ್ತ ಮೊದಲ ಸಿನಿಮಾದಲ್ಲಿ ನಟಿಸಿದ ಕಮಲಾದೇವಿ ಮತ್ತೆ ನಟಿಸಿದ್ದು 18 ವರ್ಷಗಳ ಬಳಿಕ (1931). ಹೀಗೆ ನಾಟಕ, ಸಿನಿಮಾದಲ್ಲಿ ಅಭಿನಯಿಸಿ ಜನಾನುರಾಗಿಯಾಗಿದ್ದರು. 1980ರಲ್ಲಿ ನಟಿಸಿದ್ದ ಮರಾಠಿ ಗರಾಯಿ ಸಿನಿಮಾ ಕೊನೆಯ ಚಿತ್ರವಾಗಿದೆ. ಹೀಗೆ ಹೆಸರುಗಳಿಸಿ ದಿಟ್ಟತನ ತೋರಿ ಖ್ಯಾತರಾಗಿದ್ದ ಕಮಲಾಬಾಯಿ ಕಾಮತ್ 70ರ ದಶಕದ ನಂತರ ಹೊರಜಗತ್ತಿಗೆ ಅನಾಮಿಕರಾಗಿಯೇ ಉಳಿದು ಬಿಟ್ಟಿದ್ದರು. ಗತಕಾಲದ ನೆನಪಿನ ಜತೆ ತಮ್ಮ 98ನೇ ವಯಸ್ಸಿನಲ್ಲಿ 1997ರ ಮೇ 17ರಂದು ಇಹಲೋಕ ತ್ಯಜಿಸಿದ್ದರು.
*ನಾಗೇಂದ್ರ ತ್ರಾಸಿ