Advertisement

ಬಸ್‌ ಬಿಟ್ಟು ತೊಂದ್ರೆ ಕೊಡಬೇಡಿ ಎಂದು ಸಾರಿಗೆ ನಿಗಮಕ್ಕೆ ಪತ್ರ

06:45 AM May 25, 2018 | |

ಬೆಂಗಳೂರು: ಜನರ ಅನುಕೂಲಕ್ಕಾಗಿ ತಮ್ಮ ಊರಿಗೊಂದು ಬಸ್‌ ಬಿಡುವಂತೆ ಮನವಿ ಸಲ್ಲಿಸುವುದು ಮಾಮೂಲು. ಆದರೆ, ಇಲ್ಲೊಬ್ಬರು ಸರ್ಕಾರಿ ಬಸ್‌ಗಳಿಂದಲೇ ತಮಗೆ ತೊಂದರೆ ಆಗುತ್ತಿದೆ. ಆದ್ದರಿಂದ “ಬಸ್‌ಗಳನ್ನು ಹಾಕಿ, ಅನಗತ್ಯವಾಗಿ ತೊಂದರೆ ಕೊಡಬೇಡಿ’ ಎಂದು ಕೆಎಸ್‌ಆರ್‌ಟಿಸಿಗೆ ಪತ್ರ ಬರೆದಿದ್ದಾರೆ!

Advertisement

ಅಷ್ಟೇ ಅಲ್ಲ, ನಿಗಮದ ಈ ಅನಗತ್ಯ ತೊಂದರೆಯಿಂದ ತಮ್ಮ ಆದಾಯದಲ್ಲಿ ಕುಸಿತ ಕಂಡುಬರುತ್ತಿದೆ. ಇದರಿಂದ ಹೊರಬರಲು 15 ಕೋಟಿ ರೂ. ಬಡ್ಡಿರಹಿತ ಸಾಲ ನೀಡುವಂತೆಯೂ ಮನವಿ ಮಾಡಿದ್ದಾರೆ.

ನಾಲ್ಕೈದು ವರ್ಷಗಳಿಂದ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಹೊಸ ಬಸ್‌ ಗಳನ್ನು ಖರೀದಿಸುತ್ತಿದೆ. ಆದರೆ, ಅವುಗಳನ್ನು ರಾಷ್ಟ್ರೀಯ ಮಾರ್ಗಗಳಲ್ಲಿ ಬಿಡದೆ, ಉತ್ತಮವಾಗಿ ಸಾರಿಗೆ ನೀಡುತ್ತಿರುವ ಗಜಾನನ ಮೋಟಾರ್‌ ಟ್ರಾನ್ಸ್‌ಪೋರ್ಟ್ ಕಂಪನಿ ಬಸ್‌ಗಳ ಹಿಂದೆ-ಮುಂದೆ ಪರವಾನಗಿ ಇಲ್ಲದೆ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು
ಕಾರ್ಯಾಚರಣೆ ಮಾಡಿಸುತ್ತಿದ್ದಾರೆ.

ಇದರಿಂದ ತಮ್ಮ ಸಂಸ್ಥೆಗೆ ಸಾಕಷ್ಟು ನಷ್ಟವಾಗುತ್ತಿದೆ. ಕಂಪನಿ ನೌಕರರಿಗೆ ಸಮರ್ಪಕ ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ
ಎಂದು ಕಂಪನಿ ಮಾಲೀಕರು ಅಲವತ್ತುಕೊಂಡಿದ್ದಾರೆ.

ಸ್ವಾತಂತ್ರ್ಯಪೂರ್ವ ಸಂಸ್ಥೆ: ಗಜಾನನ ಮೋಟಾರ್‌ ಟ್ರಾನ್ಸ್‌ಪೋರ್ಟ್ 1944ರಲ್ಲೇ ಪ್ರಾರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಕಾರ್ಮಿಕರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ.

Advertisement

ಸಂಸ್ಥೆಯಲ್ಲಿ 370 ಜನ ಕಾರ್ಮಿಕರಿದ್ದು, 103 ವಾಹನಗಳಿಗೆ ಪರವಾನಗಿ ಪಡೆಯಲಾಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸೇವೆ ಕಲ್ಪಿಸಲಾಗುತ್ತಿದೆ. ಶಾಲಾ ಮಕ್ಕಳು, ಹಿರಿಯ ನಾಗರಿಕರಿಗೆ ರಿಯಾಯ್ತಿ ದರದಲ್ಲಿ ಸೇವೆ ಕೂಡ
ನೀಡಲಾಗುತ್ತಿದೆ.

ತಾರತಮ್ಯವೇಕೆ?: ಇತ್ತೀಚಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಹೊಸ ಬಸ್‌ಗಳನ್ನು ಖರೀದಿಸಿ, ಅವುಗಳನ್ನು ಅನಗತ್ಯವಾಗಿ ತಮ್ಮ ಬಸ್‌ಗಳ ಮಾರ್ಗದಲ್ಲೇ ಕಾರ್ಯಾಚರಣೆ ಮಾಡಲಾಗುತ್ತಿದೆ. ಅಷ್ಟಕ್ಕೂ ಹೆಚ್ಚು ಬೇಡಿಕೆ ಇರುವ ಕಡೆಗೆ ನಿಗಮವು ಬಸ್‌ ಸೇವೆ ನೀಡುತ್ತಿಲ್ಲ. ಅಷ್ಟೇ ಯಾಕೆ, ಶಿವಮೊಗ್ಗ-ಆನವಟ್ಟಿ ಮಾರ್ಗದಲ್ಲಿ ಪ್ರಯಾಣಿಕರ ಒತ್ತಡ ಇದ್ದರೂ ಬಸ್‌ ಸೇವೆ ನೀಡುತ್ತಿಲ್ಲ. ಉಳಿದ ಟ್ರಾನ್ಸ್‌ಪೋರ್ಟ್  ಕಂಪನಿಗಳ ಹಿಂದೆ-ಮುಂದೆ ಒಂದೇ ಒಂದು ಸರ್ಕಾರಿ ಬಸ್‌ ಸೇವೆ ಇಲ್ಲ. ಕೆಲ ತಿಂಗಳ ಹಿಂದೆ ಶಿವಮೊಗ್ಗ ಸಾರಿಗೆ ಪ್ರಾಧಿಕಾರವು 50 ಹೊಸ ಪರವಾನಗಿಗಳನ್ನು ಕೆಎಸ್‌ಆರ್‌ಟಿಸಿಗೆ ನೀಡಿದೆ. ಅದರಲ್ಲಿ 20ಕ್ಕೂ ಹೆಚ್ಚು ನಮ್ಮ ಕಂಪನಿಯ ಬಸ್‌ಗಳ ಹಿಂದೆ-ಮುಂದೆಯೇ ಕಾರ್ಯಾಚರಣೆ ಮಾಡುತ್ತವೆ. ಈ ತಾರತಮ್ಯ ಯಾಕೆ ಎಂದು ಕಂಪನಿ ಮಾಲೀಕರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಈ ಧೋರಣೆಯಿಂದ ತಮಗೆ ಆದಾಯ ನಷ್ಟವಾಗುತ್ತಿದ್ದು, ಹೊಸ ಬಸ್‌ಗಳ ಸಾಲ ಮರುಪಾವತಿಯೂ ಕಷ್ಟವಾಗುತ್ತಿದೆ. ಆದ್ದರಿಂದ 15 ಕೋಟಿ ರೂ. ಬಡ್ಡಿರಹಿತ ಸಾಲವನ್ನು ನೀಡಿದರೆ, 2-3 ವರ್ಷಗಳಲ್ಲಿ ಮರುಪಾವತಿಸಲಾಗುವುದು. ಇಲ್ಲವೇ ಸಂಸ್ಥೆಯನ್ನು ವಶಕ್ಕೆ ಪಡೆಯುವುದಾದರೆ, ಅದಕ್ಕೂ ತಾವು ಸಿದಟಛಿ ಎಂದು ವಿವರಿಸಿದ್ದಾರೆ.

ನಿಗಮದ ಉತ್ತರ
ಕೆಎಸ್‌ಆರ್‌ಟಿಸಿ ಇದಕ್ಕೆ ಪ್ರತಿಯಾಗಿ ಪತ್ರ ಬರೆದಿದ್ದು, ಕೆಎಸ್‌ಆರ್‌ಟಿಸಿಯು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಮತ್ತು ಅವರ ಹಿತದೃಷ್ಟಿಯಿಂದ ವಿವಿಧ ಮಾರ್ಗಗಳಲ್ಲಿ ಸಾರಿಗೆ ಸೇವೆ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಗಮ ಪಡೆದ ಹೊಸ ಬಸ್‌ ಪರವಾನಗಿಗಳನ್ನು ಉಪಯೋಗಿಸಬಾರದು ಎಂದು ಹೇಳುವುದು ಸೂಕ್ತವಲ್ಲ. ಅಷ್ಟಕ್ಕೂ ಸಾರಿಗೆ ಪ್ರಾಧಿಕಾರದಿಂದ ಅಧಿಕೃತವಾಗಿ ಪಡೆದ ಪರವಾನಗಿಗಳಾಗಿದೆ. ಅಲ್ಲದೆ, ಬಡ್ಡಿರಹಿತ ಸಾಲ ನೀಡುವ ಮತ್ತು ತಮ್ಮ ಸಂಸ್ಥೆಯನ್ನು ಕೆಎಸ್‌ಆರ್‌ಟಿಸಿಯು ಸ್ವಾಧೀನ ಪಡಿಸಿಕೊಳ್ಳಲು ನಿಯಮಾನುಸಾರ ಯಾವುದೇ ಅವಕಾಶ ಇಲ್ಲ ಎಂದೂ ನಿಗಮವು ಸ್ಪಷ್ಟಪಡಿಸಿದೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next