Advertisement
ಚೌಕಾಸಿ ಮಾಡಿ ಹತ್ತೋ ಇಪ್ಪತ್ತೋ ಕಡಿಮೆಯೂ ಕೊಟ್ಟು, ಮಾರಾಟಮಾಡಿದವರಿಗೆ ಪುಟ್ಟ ನಗುವನ್ನೂ ಬೀರದೆ ಅಲ್ಲಿಂದ ಹೊರಟು ಹೋಗಿರುತ್ತೇವೆ. ಆದ್ರೆ ಯಾವತ್ತಾದ್ರೂ ಅವರ ಕಷ್ಟಗಳಿಗೆ ಸ್ಪಂದಿಸಿದ್ದೇವೆಯೇ? ಅವರ ನೋವು ಸಂಕಟವನ್ನು ಆಲಿಸಿದ್ದೇವೆಯೇ? ಮನುಷ್ಯನಾದವನು ಇನ್ನೊಬ್ಬ ಮನುಷ್ಯನಿಗೆ ದುಡ್ಡು ಕಾಸಿನ ವಿಚಾರದಲ್ಲಿ ಅಲ್ಲವಾದರೂ ನೋವುಗಳನ್ನು ಆಲಿಸುವಲ್ಲಿ ನೆರವಾಗಬೇಕೆಂಬುವುದನ್ನು ನಾವು ಮರೆತೇ ಬಿಟ್ಟಿದೇವೆ ಅಲ್ಲವೇ? ಅವರ ಕಷ್ಟಗಳನ್ನು ಆಲಿಸಿದರೆ ನಾವು ಕಳೆದುಕೊಳ್ಳುವುದಾದರೂ ಏನು? ಜೀವನದಲ್ಲಿ ನಾವು ಭೇಟಿ ಮಾಡುವ ಪ್ರತಿಯೊಬ್ಬನಿಂದಲೂ ಕಲಿಯುವ ಜೀವನ ಪಾಠ ಬೇಕಾದಷ್ಟಿರುತ್ತದೆ.
Related Articles
Advertisement
ಕೈಯಲ್ಲಿದ್ದ ಮಗು ಒಂದೇ ಸಮನೆ ಅಳುತ್ತಿತ್ತು. ತನ್ನ ಅಂಗಡಿಗೆ ಬಂದ ಗಿರಾಕಿಗಳಿಗೆಲ್ಲಾ ಬಣ್ಣ ಬಣ್ಣದ ಬಳೆಗಳನ್ನು ತೊಡಿಸುವ ಆಕೆಯ ಕೈಯ್ಯಲ್ಲಿ ಒಂದೂ ಬಳೆಯಿಲ್ಲ. ನಮ್ಮ ಕೈಗಳನ್ನು ಅಂದಗಾಣುವಂತೆ ಮಾಡಿದ ಆಕೆಯ ಕೈಯಲ್ಲಿ ಮಣ್ಣು, ಗಾಯದ ಕಲೆಗಳು ಬಿಟ್ಟರೆ ಬೇರೇನಿಲ್ಲ. ಕುತೂಹಲದಿಂದ ಅಕ್ಕಾ ನಮ್ಗೆಲ್ಲಾ ಬಳೆ ಮಾರೋ ನಿಮ್ಮ ಕೈಯ್ಯಲ್ಯಾಕೆ ಒಂದೂ ಬಳೆ ಇಲ್ಲ ಎಂದು ಕೇಳಿಯೇ ಬಿಟ್ಟೆ. ಅದಕ್ಕೆ ಆಕೆ ನಗುತ್ತಾ ನಂಗ್ಯಾಕ್ಕವ್ವ ಬಳೆ ಯಾರ್ ನೋಡಕ್ಕೆ ಅನ್ನುತ್ತಾ ಆಕೆಯ ಕಥೆಯನ್ನು ಒಂದೊಂದಾಗಿಯೇ ಬಿಚ್ಚಿಟ್ಟಳು. ಅದನ್ನು ಕೇಳುತ್ತಾ ನನ್ನ ಮನಸ್ಸು ಅಯ್ಯೋ ಅಂದಿತು.
ಅಷ್ಟೊಂದು ಕಷ್ಟಗಳನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡು ಹೊರಗಿನಿಂದ ನಗುತ್ತಾ ಬಳೆ ಮಾರುವ ಆಕೆಗೆ ಬದುಕುವ ಛಲ, ಎಂದಾದರೂ ತನ್ನ ಬದುಕು ಸರಿ ಹೋಗಬಹುದೆಂಬ ದೃಢನಂಬಿಕೆ. ಅಲ್ಲಿಂದ ಒಂದು ಡಜನ್ ಬಳೆ ಕೊಂಡವಳೇ ಅಮ್ಮನ ಬಳಿ ಬಂದು ಎಲ್ಲವನ್ನೂ ಹೇಳಿದೆ. ಅದಕ್ಕೆ ಆಕೆ ಹೇಳಿದ್ದು ಒಂದೇ. ಅದೇ ಜೀವನ ಮಗ. ನಾವು ಅಳುತ್ತಾ, ನಮ್ಮ ನೋವನ್ನು ಇನ್ನೊಬ್ಬರಲ್ಲಿ ಪದೇ ಪದೇ ಹೇಳುತ್ತಾ ಇದ್ದರೆ ಯಾರೂ ಕೇಳುವವರಿಲ್ಲ. ಇವಳದ್ದು ಯಾವಾಗಲೂ ಇದ್ದಿದ್ದೇ ಎಂದು ಸುಮ್ಮನಾಗುತ್ತಾರೆ.
ಅದೇ ಕಷ್ಟಗಳನ್ನೆಲ್ಲಾ ಬದಿಗಿಟ್ಟು ಎಲ್ಲರೆದುರು ನಗುತ್ತಾ ಜೀವನ ಸಾಗಿಸಿ ನೋಡು, ಬದುಕು ಬಂಗಾರದಂತಿರುತ್ತದೆ ಎಂದಳು. ಆಕೆಯ ಮಾತು ಹೌದು ಅನಿಸಿತು. ಅಮ್ಮನೂ ಆಕೆಯ ಜೀವನದಲ್ಲಿ ನಡೆದ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಳು.
ಚಿಕ್ಕ ಪುಟ್ಟ ಕಷ್ಟಗಳಿಗೆ ಕುಗ್ಗುತ್ತಿದ್ದ ನನಗೆ ನಾನೇ ಧೈರ್ಯ ಹೇಳಿಕೊಂಡೆ. ಇವರೆಲ್ಲರ ಕಷ್ಟಗಳಿಗೆ ಹೋಲಿಕೆ ಮಾಡಿದರೆ ನನ್ನದೇನೂ ದೊಡ್ಡ ಕಷ್ಟವೇ ಅಲ್ಲ. ಜೀವನದಲ್ಲಿ ಛಲ, ಧೈರ್ಯ ಹಾಗೂ ನಗುವೊಂದಿದ್ದರೆ ಎಂಥಾ ಕಷ್ಟಗಳಿಂದಲೂ ಪಾರಾಗಬಹುದು ಎಂದು ತಿಳಿದುಕೊಂಡೆ. ಹಾಗಾಗಿ ನಾವೆಲ್ಲಾ ಜೀವನದಲ್ಲಿ ನಗ್ತಾ, ನಗಿಸ್ತಾ ಕಷ್ಟಗಳನ್ನು ಬದಿಗೆ ಸರಿಸೋಣ.
-ಲಾವಣ್ಯಾ ಎಸ್.
ವಿವೇಕಾನಂದ ಸ್ವಾಯತ್ತ ಕಾಲೇಜು
ಪುತ್ತೂರು.