ತಿರುವನಂತಪುರಂ: ಸುಮಾರು ಹತ್ತು ಅಡಿ ಉದ್ದದ ಹೆಬ್ಬಾವೊಂದು ಇದ್ದಕ್ಕಿದ್ದಂತೆಯೇ ವ್ಯಕ್ತಿಯೊಬ್ಬರ ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡ ಘಟನೆ ಕೇರಳದ ತಿರುವನಂತಪುರಂ ಬಳಿಯ ನೆಯ್ಯಾರ್ ಆಣೆಕಟ್ಟು ಪ್ರದೇಶದಿಂದ ವರದಿಯಾಗಿದೆ. 61 ವರ್ಷ ಪ್ರಾಯದ ಭುವನಚಂದ್ರನ್ ನಾಯರ್ ಎಂಬ ಕಾರ್ಮಿಕ ಇತರರೊಂದಿಗೆ ಕೂಡಿಕೊಂಡು ಆಣೆಕಟ್ಟು ಭಾಗದಲ್ಲಿ ಪೊದೆಗಳನ್ನು ಕಡಿಯುತ್ತಿದ್ದ ಸಂದರ್ಭದಲ್ಲಿ ಪೊದೆಯೊಳಗಿದ್ದ ಹೆಬ್ಬಾವು ಇದ್ದಕ್ಕಿದ್ದಂತೆಯೇ ಭುನಚಂದ್ರನ್ ಅವರ ಕುತ್ತಿಗೆಯನ್ನು ಸುತ್ತಿಕೊಳ್ಳಲಾರಂಭಿಸಿತು.
ಈ ಸಂದರ್ಭದಲ್ಲಿ ಅವರ ಜೊತೆಯಲ್ಲಿದ್ದವರು ಹಾವನ್ನು ಎರಡೂ ಕಡೆಯಿಂದ ಹಿಡಿದುಕೊಂಡು ಅದು ಇನ್ನಷ್ಟು ಬಿಗಿಯಾಗಿ ಸುತ್ತಿಕೊಳ್ಳದಂತೆ ತಡೆಯುವ ಪ್ರಯತ್ನವನ್ನು ನಡೆಸಿದರು. ಹಾವಿನ ಬಿಗಿಪಟ್ಟು ಇನ್ನೂ ಸ್ವಲ್ಪ ಹೊತ್ತು ಮುಂದುವರಿಯುತ್ತಿದ್ದರೆ ಭುವನಚಂದ್ರನ್ ಅವರ ಪ್ರಾಣಕ್ಕೇ ಅಪಾಯ ಉಂಟಾಗುತ್ತಿತ್ತು. ಆದರೆ ಅವರ ಜೊತೆಗಿದ್ದವರು ಸಕಾಲದಲ್ಲಿ ಹೆಬ್ಬಾವಿನ ಬಿಗಿಪಟ್ಟನ್ನು ಸಡಿಸಲು ಯಶಸ್ವಿಯಾದ ಕಾರಣ ಭುವನಚಂದ್ರನ್ ಅವರ ಪ್ರಾಣ ಉಳಿಯುವಂತಾಯಿತು.
ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದರೂ ಈ ರೋಚಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಭುವನಚಂದ್ರನ್ ಅವರ ಕುತ್ತಿಗೆ ಭಾಗದಿಂದ ಹೆಬ್ಬಾವಿನ ಹಿಡಿತವನ್ನು ಬಿಡಿಸುವಲ್ಲಿ ಯಶಸ್ವಿಯಾದ ಬಳಿಕ ಆ ಹೆಬ್ಬಾವನ್ನು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ ಎಂದು ಸ್ಥಳೀಯ ಪತ್ರಿಕೆಯ ವರದಿ ತಿಳಿಸಿದೆ.
ಎರಡು ದಿನಗಳ ಕಾಲ ಈ ಹೆಬ್ಬಾವನ್ನು ತಮ್ಮ ಸುರದಿಯಲ್ಲಿ ಇರಿಸಿಕೊಂಡ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಇದನ್ನು ದಟ್ಟ ಅರಣ್ಯದಲ್ಲಿ ಬಿಡಲಿದ್ದಾರೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.