ಚಿಂಚೋಳಿ: ತಾಲೂಕಿನ ಕುಂಚಾವರಂ ಗಡಿಪ್ರದೇಶದ ಶಾದಿಪುರ, ಜಿಲವರ್ಷ ಗ್ರಾಮ ಮತ್ತು ತಾಂಡಾಗಳಲ್ಲಿ ಬಿರುಗಾಳಿ, ಗುಡುಗು-ಮಿಂಚು, ಸಿಡಿಲಿನ ಆರ್ಭಟದಿಂದ ಕೂಡಿದ ಧಾರಾಕಾರ ಮಳೆ ಆಗಿರುವುದರಿಂದ ಗುರುವಾರ ಬೆಳಗಿನ ಜಾವ ಶಾದಿಪುರ ಗ್ರಾಮದ ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಶಾದಿಪುರ ಸುತ್ತಮುತ್ತ ಬುಧವಾರ ಮಧ್ಯಾಹ್ನವೇ ಬಿರುಗಾಳಿ ಸಮೇತ ಆರ್ಭಟದ ಮಳೆಯಾಗಿತ್ತು. ಹೀಗಾಗಿ ಶಾದಿಪುರ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬಂದು ನಿಜಾಮನ ಆಳ್ವಿಕೆಯಲ್ಲಿ ನಿರ್ಮಿಸಿದ ಕೋಡಿ ಒಡೆದುಹೋಗಿದೆ. ಕೆರೆ ಕೋಡಿ ಒಡೆದಿದ್ದರಿಂದ ಕೆಳ ಭಾಗದ ರೈತರು ಬೆಳೆದ ತೊಗರಿ, ಹೆಸರು, ಉದ್ದು, ಸೋಯಾಬಿನ್, ಕಬ್ಬು ಬೆಳೆಗಳು ಹಾನಿಯಾಗಿವೆ ಎಂದು ರೈತರಾದ ಹೇಮಂತ ಪಂತಲು, ಅಂಬರೀಶ ವಾಲಿಕಾರ ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದ ಆಡಕಿ ಚೆರ್ಲಾ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗಿರುವುದರಿಂದ ಮಳೆ ನೀರು ಶಾದಿಪುರ ಕೆರೆಗೆ ಹರಿದು ಬಂದಿದೆ. ಇದರಿಂದ ಕೆರೆ ಕೋಡಿ ಗುರುವಾರ ಬೆಳಗಿನ ಜಾವ ಒಡೆದು ಹೋಗಿದೆ. ಅದೃಷ್ಟಾವಶಾತ್ ಈ ಸಂದರ್ಭದಲ್ಲಿ ರೈತರು ಇರದೇ ಇದ್ದಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶಾದಿಪುರ ಗ್ರಾಮದ ಕೆರೆ ಹೂಳು ತೆಗೆಯಲು ಆಗಿನ ಸಿಇಒ ಹೆಬ್ಸಿಬಾರಾಣಿ, ಚಲನಚಿತ್ರ ನಟ ಚೇತನ ಮತ್ತು ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಚಾಲನೆ ನೀಡಿದ್ದರು. ಇದಕ್ಕಾಗಿ 65ಲಕ್ಷ ರೂ. ಖರ್ಚು ಮಾಡಲಾಗಿತ್ತು. ಈಗ ಕೋಡಿ ಒಡೆದು ಬೆಳೆಹಾನಿಯಾಗಿದ್ದು ಬೆಳೆ ಹಾನಿ ಪರಿಹಾರವನ್ನು ನೀಡಬೇಕೆಂದು ಎಂದು ಶಾದಿಪುರ ಗ್ರಾಪಂ ಮಾಜಿ ಸದಸ್ಯ ಹೇಮಂತ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ರವಿಕುಮಾರ ಪಾಟೀಲ, ಶಾಜಿರಾವ್ ಸೂರ್ಯವಂಶಿ, ಸಂಗಮೇಶ, ಈರಪ್ಪ, ಜರಣಪ್ಪ ಕನಕಟ್ಟಾ, ಲಚಮಪ್ಪ ಕಾವಲಿ ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶಾದಿಪುರ ಗ್ರಾಮಕ್ಕೆ ಕಂದಾಯ ನಿರೀಕ್ಷ ಕರು ಮತ್ತು ಗ್ರಾಮ ಲೆಕ್ಕಿಗರು ಭೇಟಿ ನೀಡಿದ್ದಾರೆ. ಕೆರೆಯ ಸ್ಥಿತಿಗತಿ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಅಂಜುಮ ತಬಸುಮ, ತಹಶೀಲ್ದಾರ್
ಶಾದಿಪುರ ಗ್ರಾಮದ ಕೆರೆಯ ಕೋಡಿ (ವೇಸ್ಟ್‌ವೇರ್) ಮಳೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ಬಗ್ಗೆ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅವರಿಗೆ ಸ್ಥಳಕ್ಕೆ ಭೇಟಿ ನೀಡಲು ತಿಳಿಸಿದ್ದೇನೆ. ಅದರಂತೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಬೆಳೆ ಹಾನಿ ಕುರಿತು ಮಾಹಿತಿ ನೀಡಲು ಕಂದಾಯ ಇಲಾಖೆಗೂ ಸೂಚಿಸಿದ್ದೇನೆ.
-ಡಾ| ಅವಿನಾಶ ಜಾಧವ, ಶಾಸಕ