ವಿಶ್ವಸಂಸ್ಥೆ: ಕೋವಿಡ್ ಮಹಾಮಾರಿ ವಿಶ್ವಾದ್ಯಂತ ಶಿಕ್ಷಣ ವ್ಯವಸ್ಥೆ ಮೇಲೂ ಬಲವಾದ ಪೆಟ್ಟು ಕೊಟ್ಟಿದೆ. ಅನೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಮತ್ತು ಆರ್ಥಿಕ ಕುಸಿತ ಉಂಟಾಗಿರುವುದರಿಂದ ಶಾಲೆಗಳಿಗೆ ಮಕ್ಕಳ ಸೇರ್ಪಡೆ ಪ್ರಮಾಣ ನಾಲ್ಕು ದಶಕಗಳ ಹಿಂದಿನ ಮಟ್ಟಕ್ಕೆ ಜಾರಿದೆ.
ಕೋವಿಡ್ ಪ್ರತ್ಯಕ್ಷವಾಗಿ ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡ ಬಳಿಕ ಶಿಕ್ಷಣ, ಆರೋಗ್ಯ ಮತ್ತು ಆದಾಯ ಮೂಲ ಕ್ಷೇತ್ರಗಳು ತೀವ್ರ ಕುಸಿತಕ್ಕೊಳಗಾಗಿವೆ ಎಂದು ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮದ ನಿರ್ದೇಶಕ ಪೆಡ್ರೋ ಕೋನ್ಸಿಕಾವ್ ಹೇಳಿದ್ದಾರೆ.2020ರಲ್ಲಿ ವಿಶ್ವಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ಹಿನ್ನಡೆಯೊಂದಿಗೆ ಮಾನವ ಅಭಿವೃದ್ಧಿಯಲ್ಲಿ ತೀವ್ರ ಕುಸಿತ ಸಂಭವಿಸಲಿದೆ. ಹೆಚ್ಚಿನ ದೇಶಗಳಲ್ಲಿ ಶಾಲೆಗಳು ಮುಚ್ಚಿರುವುದು ಹಾಗೂ ತೀವ್ರ ಆರ್ಥಿಕ ಹಿಂಜರಿತ ಉಂಟಾಗಿರುವುದು ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
ಮೇ ಮಧ್ಯಭಾಗದ ಸ್ಥಿತಿಯಂತೆ ಆತ್ಮಹತ್ಯೆ, ಮಲೇರಿಯ, ರಸ್ತೆ ಅಪಘಾತಗಳು ಮತ್ತು ಎಚ್‌ಐವಿ/ಏಡ್ಸ್‌ನಂಥ ಸಾಮಾನ್ಯ ಕಾರಣಗಳಿಂದ ಸಂಭವಿಸುವ ದೈನಂದಿನ ಸಾವುಗಳಿಗಿಂತ ಕೋವಿಡ್ -19ರಿಂದ ಹೆಚ್ಚು ಸಾವುಗಳು ಸಂಭವಿಸುತ್ತಿವೆ.ಶಿಕ್ಷಣ ಒಂದು ಮಾನವ ಹಕ್ಕಾಗಿರುವುದರಿಂದ ಮತ್ತು ಯಾವುದೇ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ಹೊಂದಿರುವುದರಿಂದ ಶಾಲೆಗಳ ಮುಚ್ಚುಗಡೆಯಂಥ ಪರೋಕ್ಷ ಹಾನಿಗಳ ಕುರಿತಾಗಿಯೂ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮ ಚಿಂತಿತವಾಗಿದೆ.
ಸೋಂಕು ಆರಂಭವಾದ ಬಳಿಕ ಪ್ರಾಥಮಿಕ ಶಾಲೆಗಳಿಗೆ ಮಕ್ಕಳ ಸೇರ್ಪಡೆ 1980ಕ್ಕಿಂತ ಹಿಂದಿನ ಮಟ್ಟಕ್ಕೆ ಕುಸಿದಿದೆ. ವಿಶ್ವಾದ್ಯಂತ ಪ್ರತಿ ಹತ್ತು ಶಾಲೆಗಳಲ್ಲಿ 9 ಶಾಲೆಗಳು ಮುಚ್ಚಿವೆ. ಕುಗ್ರಾಮಗಳಲ್ಲಿರುವ ಅನೇಕ ಮಕ್ಕಳಿಕೆ ಕಲಿಯಲು ಸಾಧ್ಯವಾಗುತ್ತಿಲ್ಲ .
ಜಾಗತಿಕವಾಗಿ ಆರೋಗ್ಯ ವ್ಯವಸ್ಥೆ ಒತ್ತಡದಿಂದ ತತ್ತರಿಸಿರುವಾಗ ಮತ್ತು ರೋಗನಿರೋಧಕ ಲಸಿಕೆಗಳನ್ನು ನೀಡುವ ಪ್ರಮಾಣ ಕುಸಿದಿರುವಾಗ ಕೆಳ ಹಾಗೂ ಮಧ್ಯಮ ಆದಾಯ ಗುಂಪಿಗೆ ಸೇರಿದ ಮಕ್ಕಳಲ್ಲಿ ಮುಂದಿನ ಆರು ತಿಂಗಳ ಕಾಲ ವೈರಸ್‌ನಿಂದಾಗಿ ಪ್ರತಿದಿನ 6,000 ತಡೆಯಬಹುದಾದ ಸಾವುಗಳು ಸಂಭವಿಸಬಹುದು ಎಂದು ವರದಿಯೊಂದು ಎಚ್ಚರಿಸಿದೆ.