Advertisement

ಮುಂಬಯಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

06:58 PM Nov 27, 2020 | Suhan S |

ಮುಂಬಯಿ, ನ. 26: ಮುಂಬಯಿಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ರಸ್ತೆ ಅಪಘಾತ ಗಳಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಯಾಗುತ್ತಿದ್ದು, ಇದು ಮುಂಬಯಿ ನಗರ ಟ್ರಾಫಿಕ್‌ ಇಲಾಖೆಯ ಪೊಲೀಸರ ಕಠಿನ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.

Advertisement

ಜಾಗತಿಕ ರಸ್ತೆ ಸುರಕ್ಷತೆಗಾಗಿ ಬ್ಲೂಮ್ಬರ್ಗ್‌ ಲೋಕೋಪಕಾರ ಉಪಕ್ರಮ ಮತ್ತು ಮುಂಬಯಿ ಟ್ರಾಫಿಕ್‌ ಪೊಲೀಸರು ಸಹಿತ ಅದರ ಪಾಲುದಾರರು ಮುಂಬಯಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಮತ್ತು ಗಾಯದ ಅಂಕಿಂಶವನ್ನು ವಿಶ್ಲೇಷಿಸಿ ವರದಿ ಬಿಡುಗಡೆ ಮಾಡಿದ್ದಾರೆ. ಮುಂಬಯಿಯಲ್ಲಿ 184 ಕಿ.ಮೀ. ರಸ್ತೆ ವಿಶ್ಲೇಷಿಸಿದ ಅನಂತರ, ಕ್ರ್ಯಾಶ್‌ ಅನಾಲಿಸಿಸ್‌ ತಂಡವು 2015 ಮತ್ತು 2019ರ ನಡುವೆ ರಸ್ತೆ ಅಪಘಾತಗಳ ಸಾವುಗಳಲ್ಲಿ  ಇಳಿಕೆ ಕಂಡುಬಂದಿದೆ ಎಂದು ತಿಳಿಸಿದೆ.

ಕಳೆದ ಸಾಲಿನಲ್ಲಿ 447 ಮಂದಿ ಸಾವು :

2019ರಲ್ಲಿ ಮುಂಬಯಿ ರಸ್ತೆ ಅಪ ಘಾತದಲ್ಲಿ 447 ಜನರು ಪ್ರಾಣ ಕಳೆದು ಕೊಂಡಿದ್ದು, 2018ಕ್ಕೆ ಹೋಲಿಸಿದರೆ ಶೇ.3 ರಷ್ಟು ಕುಸಿತ ಕಂಡುಬಂದಿದೆ. 2015ರ ಅಂಕಿಅಂಶಗಳಿಗೆ ಹೋಲಿಸಿದರೆ ಶೇ. 47ರಷ್ಟು ಕುಸಿತ ಕಂಡು ಬಂದಿದ್ದು, ಸಾವನ್ನಪ್ಪಿದವರಲ್ಲಿ ಶೇ. 80ರಷ್ಟು ಪುರುಷರು ಮತ್ತು ಮಾರಣಾಂತಿಕ ಗಾಯಗೊಂಡವರಲ್ಲೂ ಶೇ. 99ರಷ್ಟು ಪುರುಷರು ಎಂದು ವರದಿ ತಿಳಿಸಿದೆ. 2019ರಲ್ಲಿ ಗಾಯಗೊಂಡ ಹೆಚ್ಚಿನ ಚಾಲಕರು 20ರಿಂದ 24 ವರ್ಷದೊಳಗಿನ ವಯಸ್ಸಿನವರು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು 30ರಿಂದ 59 ವರ್ಷ ವಯಸ್ಸಿನವರಾಗಿದ್ದಾರೆ. 2019ರಲ್ಲಿ ನಗರದ ಒಟ್ಟು ಸಾವುಗಳಲ್ಲಿ ಶೇ. 90ರಷ್ಟು ಪಾದಚಾರಿಗಳು, ಸೈಕ್ಲಿಸ್ಟ್‌ಗಳು ಮತ್ತು ಮೋಟಾರ್‌ ಸೈಕಲ್‌ ಸವಾರರು ಎಂದು ವರದಿ ಹೇಳಿದೆ.

ಘಾಟ್‌ಕೋಪರ್‌ ಫ್ಲೈಓವರ್‌ ಹಾಟ್‌ಸ್ಪಾಟ್‌ :

Advertisement

ಘಾಟ್‌ಕೋಪರ್‌ನ ಮಾಹುಲ್‌ ರಸ್ತೆ ಮತ್ತು ಬಾಳಾಸಾಹೇಬ್‌ ಠಾಕ್ರೆ ಫ್ಲೈ ಓವರ್‌ನಲ್ಲಿ ಗರಿಷ್ಠ ಸಾವುನೋವುಗಳು ದಾಖಲಾಗಿವೆ. ಅಮರ್‌ ಮಹಲ್‌ ಮತ್ತು ಗೋದ್ರೇಜ್‌ ಜಂಕ್ಷನ್‌ಗಳು ಅಪಘಾತ ವಲಯಗಳಾಗಿವೆ. 2017 ಮತ್ತು 2019ರ ನಡುವೆ ಅಮರ್‌ ಮಹಲ್‌ ಜಂಕ್ಷನ್‌ನಲ್ಲಿ 25 ಮಂದಿ ಮತ್ತು ಗೋದ್ರೇಜ್‌ ಜಂಕ್ಷನ್‌ನಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ವಾರದ ದಿನಗಳಲ್ಲಿ ರಾತ್ರಿ 7ರಿಂದ 9ರ ಅವಧಿಯಲ್ಲಿ ಸಂಭವಿಸಿದ ಅಪಘಾತಗಳು ಸಂಭವಿಸಿ ಹೆಚ್ಚಿನ ಸಾವುನೋವುಗಳಾಗಿವೆ. ವಾರಾಂತ್ಯದಲ್ಲಿ  ರಾತ್ರಿ 10ರಿಂದ 11ರ ವರೆಗೆ ಹೆಚ್ಚಿನ ಅಪಘಾತಗಳು ಸಂಭವಿಸಿವೆ.

ಪ್ರಸ್ತುತ ವರ್ಷ 172 ಮಂದಿ ಸಾವು :

ಮುಂಬಯಿ ಟ್ರಾಫಿಕ್‌ ಕಂಟ್ರೋಲ್‌ ಬ್ರಾಂಚ್‌ ಈ ವರ್ಷ ಜನವರಿಯಿಂದ ಆಗಸ್ಟ್‌ವರೆಗೆ ನಗರದಲ್ಲಿ ರಸ್ತೆ ಅಪಘಾತ ಸಾವುಗಳ ಬಗ್ಗೆ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ಒಟ್ಟು 172 ಸಾವುನೋವುಗಳನ್ನು ದಾಖಲಿಸಿದೆ, ಅದರಲ್ಲಿ ಶೇ. 47ರಷ್ಟು ಪಾದಚಾರಿಗಳು ಎಂದು ತಿಳಿಸಲಾಗಿದೆ. ಕಳೆದ ಆರೇಳು ತಿಂಗಳುಗಳಿಂದ ಕೋವಿಡ್  ಲಾಕ್‌ಡೌನ್‌ನಿಂದಾಗಿ ಅಪಘಾತಗಳ  ಸಂಖ್ಯೆ ಕಡಿಮೆಯಾಗಿದೆ ಎಂದು  ಮೂಲಗಳು ತಿಳಿಸಿವೆ.

ಸುರಕ್ಷಿತ ವೇಗದಲ್ಲಿ ಓಡಿಸಲು, ಹೆಲ್ಮೆಟ್‌ ಮತ್ತು ಸೀಟ್‌ ಬೆಲ್ಟ್ ಧರಿಸಲು ಮುಂಬಯಿ ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಪಾನಮತ್ತರಾಗಿ ವಾಹನ ಚಲಾಯಿಸಬಾರದು ಎಂದು ಒತ್ತಾಯಿಸುತ್ತೇವೆ. ಸಂಚಾರವನ್ನು ನಿಯಂತ್ರಿಸಲು ಮತ್ತು ಮುಂದಿನ ದಿನಗಳಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ವಿವಿಧ ಯೋಜನೆಗಳನ್ನು ತರುವ ಯೋಚನೆಯಿದೆ. ಯಶಸ್ವಿ ಯಾದವ್‌, ಜಂಟಿ ಪೊಲೀಸ್‌ ಆಯುಕ್ತರು, ಸಂಚಾರ ವಿಭಾಗ, ಮುಂಬಯಿ.

Advertisement

Udayavani is now on Telegram. Click here to join our channel and stay updated with the latest news.

Next