Advertisement

ದನಗಳ ಜಾತ್ರೆಯಲ್ಲಿ ಬೆರಳೆಣಿಕೆ ಎತ್ತುಗಳು

09:59 AM Mar 30, 2022 | Team Udayavani |

ಕಲಬುರಗಿ: ಎರಡು ಶತಮಾನದ ಇತಿಹಾಸ ಹೊಂದಿರುವ ಮಹಾದಾಸೋಹಿ, ಐತಿಹಾಸಿಕ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ದನಗಳ ಜಾತ್ರೆ ಈ ಭಾಗದಲ್ಲಿ ದೊಡ್ಡದು. ಹತ್ತು ದಿನಗಳ ಕಾಲ ನಡೆಯುವ ದನಗಳ ಜಾತ್ರೆಯಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಎತ್ತುಗಳ ವಹಿವಾಟು ನಡೆಯುತ್ತಾ ಬಂದಿದೆ.

Advertisement

ನಗರದ ನೆಹರು ಗಂಜ್‌ನ ಕಾಟನ್‌ ಮಾರ್ಕೆಟ್‌ ಪ್ರದೇಶದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ದನಗಳ ಜಾತ್ರೆ ನಡೆಯುತ್ತಿದೆ. ಪ್ರಸಕ್ತವಾಗಿ ಬೆರಳಣಿಕೆಯಷ್ಟು ಮಾತ್ರ ಎತ್ತುಗಳು ದನಗಳ ಜಾತ್ರೆಗೆ ಆಗಮಿಸಿವೆ. ಇದನ್ನು ನೋಡಿದರೆ ಕೃಷಿ ಸಂಕಷ್ಟದಲ್ಲಿರುವುದು ಹಾಗೂ ಎತ್ತುಗಳ ಸಂತತಿ ಕಡಿಮೆಯಾಗಿರುವುದು ನಿರೂಪಿಸುತ್ತದೆ.

ಶರಣಬಸವೇಶ್ವರ ರಥೋತ್ಸವದಿಂದ ಯುಗಾದಿ ಹಬ್ಬದ ದಿನದವರೆಗೂ ದನಗಳ ಜಾತ್ರೆ (ಮಾರಾಟದ ವಹಿವಾಟು) ನಡೆಯುತ್ತದೆ. ಆದರೆ ಪ್ರಸಕ್ತವಾಗಿ ದನಗಳ ಜಾತ್ರೆ ಇದೆಯೇ ಎನ್ನುವ ಅನುಮಾನ ಮೂಡುವಂತೆ ಆಗಿದೆ. ಒಮ್ಮೆ ಅತಿವೃಷ್ಟಿ-ಮಗದೊಮ್ಮೆ ಅನಾವೃಷ್ಟಿ ಯಿಂದ ಕೃಷಿ ಕ್ಷೇತ್ರ ನಲುಗುತ್ತಿದೆ. ಅದರಲ್ಲೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯದಿರುವುದು ಮತ್ತೊಂದು ಪೆಟ್ಟು ನೀಡುತ್ತಿದೆ. ಹೀಗಾಗಿ ರೈತ ಎತ್ತುಗಳ ಬದಲು ಯಂತ್ರೋಪಕರಣದ ಕೃಷಿಗೆ ಮಾರು ಹೋಗುತ್ತಿದ್ದಾನೆ. ಹೀಗಾಗಿ ಇರುವ ಎತ್ತುಗಳನ್ನೇ ಮಾರಾಟ ಮಾಡುತ್ತಿದ್ದಾನೆ. ಹೀಗಾಗಿ ಎತ್ತುಗಳನ್ನು ಖರೀದಿ ಮಾಡುವುದು ಒತ್ತಟ್ಟಿಗಿರಲಿ ನೋಡುವುದಕ್ಕೂ ಬರುತ್ತಿಲ್ಲ ಎಂದು ದನಗಳ ಸಂತೆಯಲ್ಲಿ ಮಾರಾಟಗಾರರು ಹಾಗೂ ಕೆಲ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೇವಲ 50 ಜೋಡಿ ಎತ್ತುಗಳು ಮಾತ್ರ ದನಗಳ ಜಾತ್ರೆಯಲ್ಲಿರುವುದು ಕಂಡು ಬಂತು. ದನಗಳ ಜಾತ್ರೆಗೆ ಈ ಹಿಂದೆ ನೆರಳು ಹಾಗೂ ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಸಲ ಯಾವುದೇ ವ್ಯವಸ್ಥೆ ಕಲ್ಪಿಸಿರಲಿಲ್ಲ. ಕೊರೊನಾದಿಂದ ಎರಡು ವರ್ಷ ದನಗಳ ಜಾತ್ರೆ ನಡೆದಿರಲಿಲ್ಲ. ಹೀಗಾಗಿ ದನಗಳ ಜಾತ್ರೆ ಹಿಂದಿನಕ್ಕಿಂತ ಎರಡು ಪಟ್ಟಾದರೂ ಜಾಸ್ತಿಯಾಗಬಹುದು ಎನ್ನುವ ನಿರೀಕ್ಷೆ ನಿಜವಾಗಿಲ್ಲ. ಇದೇ ರೀತಿ ಮುಂದುವರಿದಲ್ಲಿ ದನಗಳ ಜಾತ್ರೆ ಇತಿಹಾಸ ಸೇರಬಹುದೇನೋ ಎನ್ನುವ ಆತಂಕವೂ ಇದೆ.

ಇದನ್ನೂ ಓದಿ:ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಜೋಸ್ ಬಟ್ಲರ್

Advertisement

ದನಗಳ ಜಾತ್ರೆಗೆ ಬಂದಿರುವ ಎತ್ತುಗಳ ಸಂಖ್ಯೆ ಕಡಿಮೆಯಾಗಿದ್ದರೂ ದರ ಮಾತ್ರ ಕಡಿಮೆಯಾಗಿಲ್ಲ. ಒಂದು ಜೋಡು ಎತ್ತುಗಳಿಗೆ ಲಕ್ಷ ರೂ.ಗಿಂತ ಹೆಚ್ಚಿನ ದರ ನಿಗದಿ ಪಡಿಸಲಾಗಿದೆ. ಎತ್ತುಗಳ ಜೋಡಿ ಒಂದಕ್ಕಿಂತ ಒಂದು ದಷ್ಟಪುಷ್ಟವಾಗಿವೆ. ಆದರೆ ಬಿಸಿಲಿನಲ್ಲಿಯೇ ನಿಂತುಕೊಂಡಿದ್ದವು. ದೊಡ್ಡ-ದೊಡ್ಡ ರೈತರು ಕೃಷಿ ಯಂತ್ರೋಪಕರಣ ಗಳಿಗೆ ಮಾರು ಹೋಗಿದ್ದರೆ, ಸಣ್ಣ ಹಾಗೂ ಅತಿ ಸಣ್ಣ ರೈತರು ಸಹ ಯಂತ್ರೋಪಕರಣಗಳಿಗೆ ಹೊಂದಿ ಕೊಂಡಿದ್ದಾರೆ. ಇನ್ನು ಕೆಲವರು ಕೃಷಿಯಿಂದ ವಿಮುಖರಾಗುತ್ತಿರುವುದರಿಂದ ಎತ್ತುಗಳ ಸಂತತಿ ಕಡಿಮೆಯಾಗುತ್ತಿದೆ.

ರೈತರು ಕೃಷಿ ಯಂತ್ರೋಪಕರಣಕ್ಕೆ ಮಾರು ಹೋಗುತ್ತಿರುವುದು ಆತಂಕಕಾರಿಯಾಗಿದೆ. ಎತ್ತುಗಳನ್ನು ಬಿಟ್ಟು ಬರೀ ಕೃಷಿ ಯಂತ್ರೋಪಕರಣಗಳ ಬಳಕೆ ಮಾಡಿದಲ್ಲಿ ಪಾರಂಪರಿಕ ಕೃಷಿಗೆ ಹೊಡೆತ ಬೀಳುತ್ತದೆಯಲ್ಲದೇ ಮಣ್ಣಿನ ಗುಣಧರ್ಮಕ್ಕೂ ಪೆಟ್ಟು ಬಿದ್ದು ಬರಡು ಭೂಮಿ ಆಗುವ ಆತಂಕ ಸಾಧ್ಯಯಿದೆ. ಆವಾಗೇನೂ ಮಾಡಿದರೂ ಎತ್ತುಗಳು ಸಿಗೋದಿಲ್ಲ. ಈ ಕುರಿತು ರೈತ ಚಿಂತನೆ ನಡೆಸುವುದು ಅವಶ್ಯವಿದೆ. -ಸಂತೋಷ ಲಂಗರ್‌, ಕಾರ್ಯದರ್ಶಿ, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ

ಶರಣರ ಜಾತ್ರೆಗೆ ಹಿಂದಿನಂತೆ ಎತ್ತುಗಳ ಮಾರಾಟ ಜೋರಾಗಿ ನಡೆಯುತ್ತದೆಂದು ತಿಳಿದು 10 ಜೋಡಿ ಎತ್ತು ತರಲಾಗಿದೆ. ಆದರೆ ಇಲ್ಲಿ ನೋಡಿದರೆ ತೆಗೆದುಕೊಳ್ಳುವರೇ ಇಲ್ಲ. ಕೃಷಿ ಕಾಯಕವೇ ಕಷ್ಟವಾಗಿರುವುದೇ ಇದಕ್ಕೆ ಕಾರಣ ಎನ್ನಬಹುದು. -ಕೃಷ್ಣಾ ಆಲಮೇಲ, ವ್ಯಾಪಾರಿ

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next