Advertisement
ಮೊದಲೆಲ್ಲ ಅಂಗೈ ನೋಡಿ, “ಬದುಕಿನಲ್ಲಿ ಗ್ರೇಟ್ ಆಗ್ತಿರೋ? ಇಲ್ವೋ?’ ಎಂದು ಭವಿಷ್ಯ ಹೇಳುತ್ತಿದ್ದರು. ಆದರೆ, ಈಗ ಗ್ರೇಟ್ ಆಗುವುದು, ಸ್ಟಾರ್ ಆಗುವುದೆಲ್ಲ ರೇಖೆಗಳ ಮೇಲೆ ನಿಂತ ವಿಚಾರವಾಗಿ ಉಳಿದಿಲ್ಲ. ಅಂಗೈ ರೇಖೆಗಳ ಮೇಲೆ ಪುಟ್ಟ ಮಗುವಿನಂತೆ ಕುಳಿತ ಸ್ಮಾರ್ಟ್‌ಫೋನೇ ನಿಮ್ಮ ಬದುಕಿಗೆ ಬಹುದೊಡ್ಡ ಟರ್ನಿಂಗ್ ಪಾಯಿಂಟ್ ನೀಡಬಲ್ಲದು! ಬಾಗಲಕೋಟೆಯ ವಿದ್ಯಾಗಿರಿಯ ಪುಟ್ಟು ಹಿರೇಮಠ ಇಂದು ಬದುಕಿನಲ್ಲಿ ಮೇಲಕ್ಕೇರಿದ್ದು ಕೂಡ ಇದೇ ಸ್ಮಾರ್ಟ್‌ಫೋನ್ ಮೂಲಕವೇ.
“ಬಾಣ ಕಲೆ’ ಕಲಿಸಲು ದ್ರೋಣರು ನಿರಾಕರಿಸಿದಾಗ ಏಕಲವ್ಯ, ಗುರುವಿನ ಪ್ರತಿಮೆಯನ್ನು ಸ್ಥಾಪಿಸಿದ್ದರು. ಆ ಪ್ರತಿಮೆಯೆದುರು ನಿಂತು, ಏಕಾಗ್ರಚಿತ್ತನಾಗಿ ಬಿಲ್‌ವಿದ್ಯೆ ಕಲಿತ ಕತೆ ಗೊತ್ತೇ ಇದೆ. ಪುಟ್ಟು ಹಿರೇಮಠ ಕೂಡ ಹಾಗೆಯೇ ಗಿಟಾರ್ ಅಭ್ಯಸಿಸಿದರು. “ನಂಗೂ ಸಂಗೀತ ಕಲಿಸಿಕೊಡಿ’ ಎಂದು ಗುರುವೊಬ್ಬರ ಬಳಿ ಅಂಗಲಾಚಿದ್ದಾರೆ ಪುಟ್ಟು. ಆದರೆ, ಆ ಗುರುಗಳು ಪುಟ್ಟು ಅವರನ್ನು ಕೇವಲವಾಗಿ ಕಂಡು, ವಿದ್ಯೆ ಕಲಿಸಲು ನಿರಾಕರಿಸಿದ್ದರು. ಹೇಗಾದರೂ ಮಾಡಿ ಗಿಟಾರ್ ಕಲಿಯಲೇಬೇಕೆಂದು ಛಲವಿಟ್ಟುಕೊಂಡಿದ್ದ ಪುಟ್ಟುವಿಗೆ ಬಲ ತಂದುಕೊಟ್ಟಿದ್ದು ಯೂಟ್ಯೂಬ್. ದಿನಾ ಬೆಳಗಾದರೆ ಯೂಟ್ಯೂಬ್‌ನಲ್ಲಿ ಅಪ್‌ಡೇಟ್ ಆಗುವ ಪಾಠಗಳನ್ನೇ ಆಲಿಸುತ್ತಾ, ಹಂತಹಂತವಾಗಿ ಗಿಟಾರ್ ಕಲಿತರು.
Related Articles
ಅಂಧರಿಗೆ ಉಚಿತ ಕ್ಲಾಸ್
“ಗಿಟಾರ್‌ನಲ್ಲಿ ನಾನು ಕಲಿಯುವುದು ಇನ್ನೂ ಸಾಕಷ್ಟಿದೆ. ನನ್ನಂತೆ ಯಾರೂ ಗುರುವಿಲ್ಲದೇ, ಸಂಗೀತವನ್ನು ಮೊಟಕುಗೊಳಿಸಬಾರದು. ನನಗೆ ಗೊತ್ತಿರುವುದನ್ನು, ಉಚಿತವಾಗಿ ಸಂಗೀತಾಸಕ್ತರಿಗೆ ಹೇಳಿಕೊಡುತ್ತಿದ್ದೇನೆ. ನಾನು ಈಗಲೂ ನಿತ್ಯವೂ ಗಿಟಾರ್ ಪಾಠಗಳನ್ನು ಕಲಿಯುತ್ತಿದ್ದೇನೆ. ಈ ಕಲಿಕೆ ನಿರಂತರವಾಗಿರಲಿದೆ’ ಎನ್ನುತ್ತಾರೆ ಪುಟ್ಟು. ಇವರ ಈ ಕಲಿಕೆಗೆ ವೀರಣ್ಣ, ಶಿವಾನಂದ, ಪಂಚಾಕ್ಷರಿ, ಬಸವರಾಜ, ಪುರಾಣಿಕ ಹಿರೇಮಠ ಮತ್ತಿತರ ಹಿತೈಷಿಗಳ ಸಹಕಾರ ದೊಡ್ಡದು ಎನ್ನುತ್ತಾರವರು. ಅಂದಹಾಗೆ, ಪುಟ್ಟು ಅವರು ಬಾಗಲಕೋಟೆಯ “ಸಜೀವಿ’ ಅಂಧ ಮಕ್ಕಳ ವಸತಿ ಶಾಲೆಯವರಿಗೆ ಉಚಿತವಾಗಿ ಗಿಟಾರ್ ಕಲಿಸುತ್ತಿದ್ದಾರೆ.
Advertisement
ಇವರು ಮೂಲತಃ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದವರು. ತಂದೆ ಈರಯ್ಯ ಸುಗಯ್ಯ ಹಿರೇಮಠ, ತಾಯಿ ಸುಮಂಗಲಾ. ಬದುಕಿನ ಬಂಡಿ ಸಾಗಿಸಲು, “ಅನು ಬುಕ್ ಸೆಂಟರ್’ ಅನ್ನು ತೆರೆದಿರುವ ಪುಟ್ಟು ಅವರು, ಹಲವು ಸಂಗೀತಾಸಕ್ತರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಪುಟ್ಟು ಅವರಿಗೆ ನೀವು ಶುಭಾಶಯ ಕೋರಲು, ಮೊ. 99802 54466 ಸಂಪರ್ಕಿಸಬಹುದು.
ಪ್ರವೀಣರಾಜು ಸೊನ್ನದ