ರಾಜ ಪೀಲಿಯಸ್ ಎಂಬಾತ ಥೆಟಿಸ್ ಎಂಬ ಅಪ್ಸರೆಯನ್ನು ಮದುವೆಯಾಗಲು ನಿರ್ಧರಿಸಿದ. ಈ ಸಂದರ್ಭದಲ್ಲಿ ಏರಿಸ್ ಎಂಬ ಒಬ್ಬ ಒಲಿಂಪಿಯನ್ ದೇವತೆಯನ್ನು ಹೊರತುಪಡಿಸಿ ಉಳಿದೆಲ್ಲ ದೇವತೆಗಳನ್ನು ಆತ ಈ ಮದುವೆಗೆ ಆಹ್ವಾನಿಸಿದ. ಗ್ರೀಕ್ ಪುರಾಣದ ಪ್ರಕಾರ 12 ಮಂದಿ ಪ್ರಾಚೀನ ದೇವತೆಗಳಿದ್ದಾರೆ. ಇವರೆಲ್ಲ ಗ್ರೀಸ್‌ನ ಒಲಿಂಪಸ್ ಪರ್ವತದಲ್ಲಿ ವಾಸಿಸುವುದರಿಂದ ಅವರನ್ನು ಒಲಿಂಪಿಯನ್ಸ್ ಎಂದು ಕರೆಯುವುದು ರೂಢಿ.
ಹೇಳಿಕೇಳಿ ಈ ಏರಿಸ್ ಎಂಬಾಕೆ ಅಪಶ್ರುತಿಯ ದೇವತೆ. ಆಕೆ ಸುಮ್ಮನೆ ಬಿಡುತ್ತಾಳೆಯೆ! ಆಕೆಗೆ ಬಹಳ ಸಿಟ್ಟು ಬಂದು ಈ ಒಲಿಂಪಿಯನ್ ದೇವತೆಗಳ ಅಹಂಕಾರಕ್ಕೆ ಮದ್ದು ಅರೆಯಲು ನಿರ್ಧರಿಸಿದಳು. ಚಿನ್ನದ ಸೇಬೊಂದರ ಮೇಲೆ “ಅಮೋಘ ಸೌಂದರ್ಯವತಿಗೆ ಈ ಹಣ್ಣು ಸಲ್ಲುವುದು’ ಎಂದು ಬರೆದು ದೇವತೆಗಳತ್ತ ಎಸೆದಳು.
ಒಲಿಂಪಿಯನ್‌ಗಳ ಪೈಕಿ ಗೃಹಕೃತ್ಯದ ದೇವತೆಯಾದ ಹೀರಾ, ಕೌಶಲಗಳ ದೇವತೆ ಅಥೆನಾ ಮತ್ತು ಸೌಂದರ್ಯ ದೇವತೆ ಅಫೊಡೈಟ್ ನಡುವೆ ಈ ಸೇಬಿಗಾಗಿ ಭಾರೀ ಸ್ಪರ್ಧೆ ಏರ್ಪಟ್ಟಿತು. ಈ ಸ್ಪರ್ಧೆ ಜಗಳವಾಗಿ ಪರಿಣಮಿಸಿತು. ಇವರ ಜಗಳವನ್ನು ಯಾರಿಂದಲೂ ಬಗೆಹರಿಸಲು ಸಾಧ್ಯವಾಗಲಿಲ್ಲ.
ಈ ಸಂದರ್ಭದಲ್ಲಿ ಟ್ರಾಯ್ ದೇಶದ ರಾಜಕುಮಾರ ಪ್ರಿನ್ಸ್ ಪ್ಯಾರಿಸ್ ಎಂಬಾತ ಸ್ತ್ರೀಯರ ಸೌಂದರ್ಯ ಗ್ರಹಿಸಿ ಸರಿಯಾದ ತೀರ್ಪು ನೀಡುತ್ತಾನೆ ಎಂದು ಪ್ರಸಿದ್ಧನಾಗಿದ್ದ. ಈ ಮೂವರು ಜಗಳಗಂಟಿ ದೇವತೆಯರನ್ನು ಈ ರಾಜಕುಮಾರನ ಬಳಿ ಕಳುಹಿಸಲಾಯಿತು. ಮೂವರೂ ಆತನ ಮುಂದೆ ತಮ್ಮ ಸೌಂದರ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸಿದರು. ಅವನಿಗೂ ಬಹಳ ಗೊಂದಲವಾದಾಗ ಮೂವರೂ ಆಮಿಷಗಳನ್ನು ಒಡ್ಡಿದರು. “”ನಿನ್ನನ್ನು ಜಗತ್ತಿನ ಅತೀ ದೊಡ್ಡ ಸಾಮ್ರಾಜ್ಯದ ಒಡೆಯನನ್ನಾಗಿ ಮಾಡುವೆ” ಎಂದು ಹೀರಾ ಆಮಿಷವೊಡ್ಡಿದರೆ, “”ನಿನ್ನನ್ನು ಜಗತ್ತಿನಲ್ಲಿಯೇ ಅತ್ಯಂತ ಶೂರನನ್ನಾಗಿ ಮಾಡುವೆ” ಎಂದು ಅಥೆನಾ ಆಸೆ ಹುಟ್ಟಿಸಿದಳು. ಅಫೊಡೈಟ್ ಹೇಳಿ ಕೇಳಿ ಸೌಂದರ್ಯದ ಒಡತಿ. “”ಜಗದೇಕ ಸುಂದರಿ ಹೆಲೆನ್‌ಳನ್ನೇ ನಿನಗೆ ತಂದುಕೊಡುವೆ” ಎಂದು ಆಫೊಡೈಟ್ ಆಮಿಷವೊಡ್ಡುತ್ತಾಳೆ.
ಕೊನೆಯ ಆಮಿಷವೇ ಪ್ಯಾರಿಸ್‌ಗೆ ಇಷ್ಟವಾಗುತ್ತದೆ. ಅಫೊಡೈಟ್‌ಗೆ ಚಿನ್ನದ ಸೇಬು ದೊರೆಯುತ್ತದೆ. ಹೀರಾ ಮತ್ತು ಅಥೆನಾ ಇಬ್ಬರೂ ರಾಜಕುಮಾರ ಪ್ಯಾರಿಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾರೆ.
ಆದ್ದರಿಂದ ಟ್ರೋಜನ್ ಯುದ್ಧಕ್ಕೆ ಈ ಇಬ್ಬರು ದೇವತೆಯರೇ ಪ್ರೇರಣೆ ಎಂಬುದು ಗ್ರೀಕ್ ಪುರಾಣಗಳ ನಂಬಿಕೆ. ರಾಜಕುಮಾರ ಪ್ಯಾರಿಸ್, ಹೆಲೆನ್‌ಳನ್ನು ಅಪಹರಿಸಿದ ಪ್ರಕರಣವೇ ಯುದ್ಧಕ್ಕೆ ಕಾರಣ.