ಹೊಸದಿಲ್ಲಿ: ಟೀಮ್ ಇಂಡಿಯಾ ಕ್ರಿಕೆಟಿಗರ ಒಪ್ಪಂದವನ್ನು ಬಿಸಿಸಿಐ ಪರಿಷ್ಕರಿಸಿದೆ. ಇದರಂತೆ ಸ್ಥಿರ ಪ್ರದರ್ಶನ ನೀಡುತ್ತಿರುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ “ಎ ಗ್ರೇಡ್’ಗೆ ಭಡ್ತಿ ಪಡೆದಿದ್ದಾರೆ. ಆದರೆ ಸೀನಿಯರ್ ಓಪನರ್ ಶಿಖರ್ ಧವನ್ “ಎ ಪ್ಲಸ್’ ಗ್ರೇಡ್‌ನಿಂದ “ಎ’ ಗ್ರೇಡ್‌ಗೆ ಹಿಂಭಡ್ತಿ ಪಡೆದಿದ್ದಾರೆ. ಧವನ್ ಅವರಂತೆ ಅಗ್ರ ಗ್ರೇಡ್ ಕಳೆದುಕೊಂಡ ಮತ್ತೋರ್ವ ಕ್ರಿಕೆಟಿಗನೆಂದರೆ ಭುವನೇಶ್ವರ್ ಕುಮಾರ್. ಬಿಸಿಸಿಐ ಗುರುವಾರ ರಾತ್ರಿ ಕ್ರಿಕೆಟಿಗರ ಒಪ್ಪಂದವನ್ನು ಪರಿಷ್ಕರಿಸಿತು. ಈ ವ್ಯಾಪ್ತಿಯಲ್ಲಿ ಒಟ್ಟು 25 ಆಟಗಾರರಿದ್ದಾರೆ. ಕಳೆದ ವರ್ಷ 26 ಮಂದಿ ಆಟಗಾರರು ಒಪ್ಪಂದ ವ್ಯಾಪ್ತಿಯಲ್ಲಿದ್ದರು. ಯಾದಿಯಿಂದ ಹೊರಬಿದ್ದ ಇಬ್ಬರು ಕ್ರಿಕೆಟಿಗರೆಂದರೆ ಮುರಳಿ ವಿಜಯ್ ಮತ್ತು ಸುರೇಶ್ ರೈನಾ.
ಮೂವರಿಗಷ್ಟೇ ಎ ಪ್ಲಸ್ ಗ್ರೇಡ್
“ಎ ಪ್ಲಸ್’ ವಿಭಾಗದಿಂದ ಧವನ್ ಮತ್ತು ಭುವನೇಶ್ವರ್ ಅವರನ್ನು ಕೈಬಿಟ್ಟ ಕಾರಣ ಈ ಅತ್ಯುನ್ನತ ಗ್ರೇಡ್‌ನಲ್ಲಿ ಮೂವರಷ್ಟೇ ಉಳಿದುಕೊಂಡಂತಾಯಿತು. ಇವರೆಂದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ. ಇವರು ವಾರ್ಷಿಕ ಗರಿಷ್ಠ 7 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಉಳಿದ 3 ಗ್ರೇಡ್‌ಗಳ ಕ್ರಿಕೆಟಿಗರ ಸಂಭಾವನೆ ಕ್ರಮವಾಗಿ 5 ಕೋ., 3 ಕೋ. ಮತ್ತು ಒಂದು ಕೋ. ರೂ.
ಒಪ್ಪಂದ ವ್ಯಾಪ್ತಿಗೆ ಬಂದ ಇಬ್ಬರು ಹೊಸಬರೆಂ ದರೆ ಎಡಗೈ ಪೇಸ್ ಬೌಲರ್ ಖಲೀಲ್ ಅಹ್ಮದ್ ಮತ್ತು ಬ್ಯಾಟ್ಸ್‌ಮನ್ ಹನುಮ ವಿಹಾರಿ. ಇವರಿಬ್ಬ ರಿಗೂ “ಸಿ ಗ್ರೇಡ್’ ಲಭಿಸಿದೆ. ಆದರೆ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಗಮನಾರ್ಹ ನಿರ್ವಹಣೆ ತೋರಿದರೂ ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ ಮತ್ತು ವಿಜಯ್ ಶಂಕರ್ ಒಪ್ಪಂದ ಯಾದಿಯಿಂದ ದೂರವೇ ಉಳಿದರು. ನಿಯಮದಂತೆ ಇವರಿನ್ನೂ 3 ಟೆಸ್ಟ್ ಅಥವಾ 8 ಏಕದಿನ ಪಂದ್ಯ ಆಡದಿರುವುದೇ ಇದಕ್ಕೆ ಕಾರಣ.
ಶಿಖರ್ ಧವನ್ ಸ್ಥಿರವಾದ ಫಾರ್ಮ್ ತೋರ್ಪಡಿಸದಿದ್ದುದರಿಂದ ತಮ್ಮ ಗ್ರೇಡ್ ಕಳೆದುಕೊಳ್ಳಬೇಕಾಯಿತು. ಹಾಗೆಯೇ ಭುವನೇಶ್ವರ್ ಯಾವ ಮಾದರಿಯಲ್ಲೂ ಖಾಯಂ ಸ್ಥಾನ ಪಡೆದಿರಲಿಲ್ಲ. ಪೂಜಾರ ಕೇವಲ ಟೆಸ್ಟ್ ಪಂದ್ಯಕ್ಕಷ್ಟೇ ಸೀಮಿತಗೊಂಡಿದ್ದರಿಂದ “ಎ’ ಗ್ರೇಡ್‌ನಲ್ಲೇ ಉಳಿದರು.
ಕ್ರಿಕೆಟಿಗರ ಗ್ರೇಡ್
ಎ ಪ್ಲಸ್ ಗ್ರೇಡ್ (7 ಕೋಟಿ ರೂ.)
ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ
ಎ ಗ್ರೇಡ್ (5 ಕೋಟಿ ರೂ.)
ಮಹೇಂದ್ರ ಸಿಂಗ್ ಧೋನಿ, ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಆರ್. ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಅಜಿಂಕ್ಯ ರಹಾನೆ.
ಬಿ ಗ್ರೇಡ್ (3 ಕೋಟಿ ರೂ.)
ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್, ಯಜುವೇಂದ್ರ ಚಾಹಲ್.
ಸಿ ಗ್ರೇಡ್ (1 ಕೋಟಿ ರೂ.)
ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಅಂಬಾಟಿ ರಾಯುಡು, ಮನೀಷ್ ಪಾಂಡೆ, ಹನುಮ ವಿಹಾರಿ, ಖಲೀಲ್ ಅಹ್ಮದ್, ವೃದ್ಧಿಮಾನ್ ಸಾಹಾ.