ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿರ್ದೇಶನದಂತೆ ನ್ಯಾಕ್ ಮಾನ್ಯತೆ ಅಂಗವಾಗಿ ಮುಂಬಯಿ ವಿಶ್ವ ವಿದ್ಯಾಲಯದ ಎಲ್ಲ ಸ್ನಾತಕೋತ್ತರ ವಿಭಾಗಗಳ ಬಾಹ್ಯ ಶೈಕ್ಷಣಿಕ ಮೌಲ್ಯ ಮಾಪನ ನಡೆಸಿ ಫಲಿತಾಂಶ ಪ್ರಕಟಿಸಿದ್ದು ಕನ್ನಡ ವಿಭಾಗ “ಎ’ ಗ್ರೇಡ್ ಮಾನ್ಯತೆಗೆ ಪಾತ್ರವಾಗಿದೆ.
ಇದೇ ಮೊದಲ ಬಾರಿಗೆ ಮುಂಬಯಿ ವಿಶ್ವವಿದ್ಯಾಲಯ ತನ್ನ ಅಧೀನದ ಎಲ್ಲ ವಿಭಾಗಗಳ ಸಾಧನೆಗಳನ್ನು ಒರೆಗೆ ಹಚ್ಚಿ ಗ್ರೇಡ್ ನೀಡುವ ನೂತನ ಉಪಕ್ರಮ ಜಾರಿಗೆ ತಂದಿದ್ದು ಎ ಗ್ರೇಡ್ ಪಡೆದ ಕೆಲವೇ ಕೆಲವು ವಿಭಾಗಗಳಲ್ಲಿ ಕನ್ನಡ ವಿಭಾಗಕ್ಕೂ ಸ್ಥಾನ ದೊರಕಿದೆ. ಕನ್ನಡ ವಿಭಾಗ ಎಂ.ಎ., ಎಂ.ಫಿಲ್., ಪಿಎಚ್.ಡಿ. ತರಗತಿಗಳಲ್ಲದೆ ಕನ್ನಡೇತರರಿಗೆ ನಗರದ ಎಲ್ಲೆಡೆ ಕನ್ನಡ ಕಲಿಕಾ ಕೇಂದ್ರ ಗಳ ಮೂಲಕ ಸರ್ಟಿಫಿಕೇಟ್, ಡಿಪ್ಲೋಮಾ ತರಗತಿ ನಡೆಸಿಕೊಂಡು ಬರುತ್ತಿದೆ.
ವಿಭಾಗದ ಪ್ರಕಟನೆೆ, ಸಂಶೋಧನ ಕೃತಿಗಳು, ಅತಿ ಹೆಚ್ಚು ದತ್ತಿ ನಿಧಿಗಳ ಸ್ಥಾಪನೆ, ಪ್ರತ್ಯೇಕ ಗ್ರಂಥಾಲಯ, ಸಮುದಾಯದ ಜೊತೆಗೆ ಬೆಸೆದುಕೊಂಡು ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಸಮಾಜಮುಖೀ ಚಟುವಟಿಕೆಗಳಲ್ಲಿ ನಿರತವಾಗಿರುವುದಕ್ಕೆ ಮೌಲ್ಯಮಾಪನ ಸಮಿತಿ ತನ್ನ ಲಿಖೀತ ವರದಿಯಲ್ಲಿ ಪ್ರಶಂಸೆಗೈದಿದ್ದು ವಿಭಾಗದಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳನ್ನು ಶೀಘ್ರದಲ್ಲಿ ತುಂಬುವಂತೆಯೂ ಸಮಿತಿಯು ಮುಂಬಯಿ ವಿಶ್ವವಿದ್ಯಾಲ ಯಕ್ಕೆ ಸಲಹೆ ನೀಡಿದೆ.
ಈ ಮನ್ನಣೆ ಶಿಕ್ಷಕರು, ವಿದ್ಯಾರ್ಥಿಗಳು, ಸಮುದಾಯದ ವಿವಿಧ ಸಂಸ್ಥೆಗಳ ಸಹಕಾರದಿಂದ ಸಾಧ್ಯ ವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ವಿಭಾಗದ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ. ಎಸ್. ಶೆಟ್ಟಿ, ಡಾ| ಜೀವಿ ಕುಲಕರ್ಣಿ, ಡಾ| ವಿಶ್ವನಾಥ ಕಾರ್ನಾಡ, ಡಾ| ರಘುನಾಥ್, ಕನ್ನಡ ಕಲಿಕಾ ತರಗತಿಗಳ ಜವಾಬ್ದಾರಿ ಹೊತ್ತಿರುವ ಶ್ರೀಪಾದ ಪತಕಿ, ಡಾ| ಶ್ಯಾಮಲಾ ಪ್ರಕಾಶ್, ಕುಮುದಾ ಆಳ್ವ, ಗೀತಾ ಮಂಜುನಾಥ್, ಡಾ| ಉಮಾರಾವ್, ಆಂತರಿಕ ಮೌಲ್ಯ ಮಾಪನ ನಡೆಸಿದ ಖ್ಯಾತ ವಿದ್ವಾಂಸ ಡಾ| ಸುಧೀಂದ್ರ ಭವಾನಿ, ವಿಜ್ಞಾನಿ, ಸಾಹಿತಿ ಡಾ| ವ್ಯಾಸರಾವ್ ನಿಂಜೂರು ಮೊದಲಾದವರ ಸಹಕಾರಕ್ಕೆ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.