Advertisement
ಪ್ರತಿಯೊಬ್ಬ ಪ್ರಜೆಯೂ ಸಾಧಕ-ಸಾಧಕಿ ಎಂದೆನಿಸಿಕೊಳ್ಳಬೇಕಾದರೆ ಮೂರು ಪೂರಕವಾದ ಅಂಶಗಳಾದ ಸಾಮರ್ಥ್ಯ, ಇಚ್ಛಾಶಕ್ತಿ ಮತ್ತು ಅವಕಾಶ ಅತೀ ಅಗತ್ಯ. ನಮ್ಮ ಗ್ರಾಮೀಣ ಪ್ರದೇ ಶದ ಯುವ ಸಮುದಾಯದಲ್ಲಿ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಹೇರಳವಾಗಿದ್ದು, ಅವರಾರೂ ಈ ಸಮಯ-ಸಂದರ್ಭದಲ್ಲಿ ಅವಕಾಶವಂಚಿತ ರಾಗಬಾರದು. ಬೇರೆ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಇತರರು ಅಸೂಯೆಪಡುವಷ್ಟು ಹೆಚ್ಚಿನ ಸಂಖ್ಯೆ ಮತ್ತು ಗುಣಮಟ್ಟದ ಯುವ ಮಾನವ ಸಂಪನ್ಮೂಲ ನಮ್ಮ ಹಳ್ಳಿಗಳಲ್ಲಿದೆ ಎಂಬು ದನ್ನು ನಾವು ಮರೆಯುವಂತಿಲ್ಲ. ಇದರ ಸದ್ಬಳಕೆ ಸಕಾಲದಲ್ಲಿ ಮಾಡಿ ತೋರಿಸುವ ಸುವರ್ಣಾವಕಾಶ ಗ್ರಾಮ ಪಂಚಾಯತ್ ಚುನಾವಣೆ ವೇಳೆ ನಮಗೆಲ್ಲರಿಗೂ ಲಭಿಸಿದೆ. ಗ್ರಾಮೀಣ ಪ್ರದೇಶದ ಯುವ ಜನತೆ ಮತ ಚಲಾವಣೆಯಲ್ಲಿ ಮಾತ್ರ ಪಾಲ್ಗೊಳ್ಳದೆ, ಜಾತಿ, ಮತ, ಪಕ್ಷ ಬೇಧಗಳನ್ನು ಮರೆತು ಪರಿಶುದ್ಧ ಮನಸ್ಸಿನಿಂದ ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಉನ್ನತ ಕಾಳಜಿಯಿಂದ ಗ್ರಾಮ ಪಂಚಾ ಯತ್ ಚುನಾವಣೆಯಲ್ಲಿ ಸ್ಪರ್ಧಿಸ ಬೇಕು. ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖ ಗಳು. ಗೆದ್ದು ಸೋಲುವುದ ಕ್ಕಿಂತ ಯಾವಾಗಲೂ “ಸೋತು ಗೆಲ್ಲುವುದೇ’ ಲೇಸು. ಮೂಲ ಸೌಕರ್ಯಗಳನ್ನು ಒದಗಿಸಲು ಶ್ರಮಿಸುವುದರ ಜತೆಗೆ ಸೌಹಾ ರ್ದಯುತವಾದ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣ, ದುಡಿದು ಬದುಕಲು ಪೂರಕವಾದ ಕೌಶಲಾಭಿವೃದ್ಧಿ, ಒಗ್ಗಟ್ಟಿ ನಲ್ಲಿರುವ ಶಕ್ತಿಯ ಅರಿವು-ಜಾಗೃತಿ, ವ್ಯಕ್ತಿತ್ವ ವಿಕಸನದ ಮೂಲಕ ರಾಷ್ಟ್ರ ಹಾಗೂ ಚಾರಿತ್ರÂ ನಿರ್ಮಾಣ, ರಾಜಕೀಯ-ಸಾಮಾಜಿಕ- ಆರ್ಥಿಕ ಸಶಕ್ತೀಕರಣದಂತಹ ಗುರಿಗಳೊಂದಿಗೆ ಸ್ಪರ್ಧಿಸಿದರೆ ಗ್ರಾಮ ಸ್ವರಾಜ್ಯದ ಗುರಿ ತಲುಪಬಹುದು. ಈ ನಿಟ್ಟಿನಲ್ಲಿ “ನಮ್ಮ ದೇಶ ಒಂದು ಕಂಬದ ಡೇರೆಯಲ್ಲ, ಸಾವಿರ ಕಂಬಗಳ ಚಪ್ಪರ’ ಎಂಬುದನ್ನು ಯುವ ಜನತೆ ಮನವರಿಕೆ ಮಾಡಿಕೊಳ್ಳಬೇಕು.
Related Articles
Advertisement
ಗ್ರಾಮೀಣ ಪ್ರದೇಶದ ಯುವಜನತೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಆತ್ಮ ವಿಶ್ವಾಸ, ದೃಢ ಸಂಕಲ್ಪ, ಸದ್ವಿಚಾರಗಳೊಂದಿಗೆ ಸ್ಪರ್ಧಿಸಿ, ಇಡೀ ಗ್ರಾಮಕ್ಕೆ ಯುವ ನೇತೃತ್ವದ ಮೂಲಕ ಆದರ್ಶಗ್ರಾಮವನ್ನಾಗಿ ಮಾಡಲಿ ಎಂಬ ಆಶಯ ದೊಂದಿಗೆ ಪಾರದರ್ಶಕತೆ, ಉತ್ತರದಾಯಿತ್ವ, ಜವಾಬ್ದಾರಿಗಳೊಂದಿಗೆ ನಾವೆಲ್ಲರೂ ಅಹರ್ನಿಶಿ ಶ್ರಮಿಸೋಣ. ಇತರರನ್ನು ದೂಷಿಸಿ, ದ್ವೇಷಿಸಿ ಪ್ರಯೋಜನವಿಲ್ಲ. ತನ್ನ ಶತ್ರು ತಾನೇ, ತನ್ನೊಳಗಿದ್ದಾನೆಯೆಂಬ ಅರಿವು ಪ್ರತಿಯೊಬ್ಬ ಯುವ ಜನತೆಯಲ್ಲಿರಲಿ.
ಯುವಜನರೇ, ನಿಮ್ಮ ಮನಸ್ಸಿನ ಕಿಟಿಕಿ, ಬಾಗಿಲುಗಳನ್ನು ತೆರೆದಿಡಿ, ನಾನಾ ದಿಕ್ಕುಗಳಿಂದ ಬರುವ ಗಾಳಿಗೆ ಅನುವು ಮಾಡಿಕೊಡಿ. ಆದರೆ ಆ ಗಾಳಿ ಬಿರುಗಾಳಿಯಾಗದಿರಲಿ, ತನ್ನನ್ನು ಬುಡಸಹಿತ ಕಿತ್ತೂಗೆಯದಿರಲಿ. ತನ್ನತನವನ್ನು ಉಳಿಸಿಕೊಳ್ಳಿ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷಬೇಧ ಮರೆತು ಯುವಜನತೆ ಸ್ಪರ್ಧಿಸಿ ಆದರ್ಶ ಗ್ರಾಮ ನಿರ್ಮಾಣದ ಮೂಲಕ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಸನ್ನದ್ಧರಾಗಬೇಕು.
ಗ್ರಾಮೀಣ ಪ್ರದೇಶದ ಜನರು ಪರಿಶುದ್ಧ ಮನಸ್ಸಿನಿಂದ ದುಡಿದು ಬದುಕುವ ಬುದ್ಧಿವಂತ ಹಾಗೂ ಪ್ರಜ್ಞಾವಂತರು. ನಮ್ಮ ದೇಶದ ರಾಷ್ಟ್ರಪ್ರೇಮ ಮತ್ತು ವ್ಯಕ್ತಿತ್ವ ವಿಕಸನ ಹಳ್ಳಿಯ ಯುವ ಜನತೆಯಿಂದ ಆರಂಭವಾಗಬೇಕು. ತಾವು ಕೈಗೆತ್ತಿಕೊಳ್ಳುವ ಕೆಲಸ-ಕಾರ್ಯಗಳನ್ನು ಪ್ರೀತಿ, ವಿಶ್ವಾಸ, ಗೌರವ, ಬದ್ಧತೆ, ಪ್ರಾಮಾಣಿಕತೆಗಳೊಂದಿಗೆ ನಿರ್ವಹಿಸುವುದೇ ದೇಶಸೇವೆ. ಚುನಾವಣೆಯಲ್ಲಿ ಸ್ಪರ್ಧಿಸುವ, ತನ್ನ ಗ್ರಾಮದ ಜನತೆಯನ್ನು ಪ್ರತಿನಿಧಿಸುವ, ಅಭಿವೃದ್ಧಿ ಪಡಿಸುವ ಮೂಲಕ ಪ್ರಗತಿಪಥದಲ್ಲಿ ಸಾಗುವ, ಮನಸ್ಸು-ಮನಸ್ಸುಗಳನ್ನು ಜೋಡಿಸುವ, ಸಾಮಾಜಿಕ ಸೌಹಾರ್ದ, ಯುವಶಕ್ತಿಯ ಸದ್ಬಳಕೆ ಇಂತಹ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳುವ ದೃಢ ಸಂಕಲ್ಪ, ಆತ್ಮ ವಿಶ್ವಾಸ, ಮೊದಲು ನಮ್ಮ ಮನಸ್ಸಿನಲ್ಲಿ ಜನ್ಮ ತಾಳಿದರೆ ಮಾತ್ರ ಮುಂದಕ್ಕೆ ನಿಜರೂಪದಲ್ಲಿ ಪ್ರತ್ಯಕ್ಷವಾಗಲು ಸಾಧ್ಯ ಎಂಬುದನ್ನು ನಾವು ಮರೆಯುವಂತಿಲ್ಲ.ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಕುಲಪತಿಗಳು, ಮಂಗಳೂರು ವಿವಿ