Advertisement

2022ರ ಹೊರಳು ನೋಟ;  ಅಮೃತ ಎದೆ ಹಾಲಿನ ಘಟಕ ಉದ್ಘಾಟನೆ

12:57 AM Dec 27, 2022 | Team Udayavani |

ಲೇಡಿಗೋಶನ್‌ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್‌ ಮಂಗಳೂರು ವತಿಯಿಂದ 35 ಲಕ್ಷ ರೂ. ವೆಚ್ಚದಲ್ಲಿ ಆರಂಭವಾದ ರೋಟರಿ ಅಮೃತ- ಎದೆ ಹಾಲಿನ ಘಟಕವನ್ನು ಉದ್ಘಾಟಿಸಲಾಗಿತ್ತು.

Advertisement

ಬಜೆಟ್‌ನಲ್ಲಿ ಮಂಗಳೂರಿಗೆ ಹಲವು ಯೋಜನೆ
ಬ್ಲೂ ಪ್ಲಾಸ್ಟಿಕ್‌ ನಿರ್ವಹಣೆ ಯೋಜನೆ, ದೀನದಯಾಳ್‌ ಉಪಾಧ್ಯಾಯ ಸೌಹಾರ್ದ ಬಹುಮಹಡಿ ವಿದ್ಯಾರ್ಥಿ ನಿಲಯ ಸಮುಚ್ಚಯ, 350 ಕೋ.ರೂ. ವೆಚ್ಚದಲ್ಲಿ ಮಂಗಳೂರು ಬಂದರು ವಿಸ್ತರಣೆ, ಮಂಗಳೂರು ವಿ.ವಿ. ಯಲ್ಲಿ ಅರೆಭಾಷೆ ಸಂಶೋಧನ ಕೇಂದ್ರ, ಸಿಆರ್‌ಝಡ್‌ ಮಾನದಂಡ ಸಡಿಲ ಮತ್ತಿತರ ಘೋಷಣೆಗಳನ್ನು ರಾಜ್ಯ ಬಜೆಟ್‌ ಒಳಗೊಂಡಿತ್ತು.

ಗುರುವಾಯನಕೆರೆ: ಮೀನುಗಳ ಮಾರಣಹೋಮ
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಮಾ.14ರಂದು ಮಲಿನ ನೀರು ಕೆರೆಯ ನೀರಿಗೆ ಸೇರಿದ ಪರಿಣಾಮ ಸಾವಿರಾರು ಮೀನುಗಳು ಜೀವತೆತ್ತ ಘಟನೆ ನಡೆದಿತ್ತು. ನೀರನ್ನು ಪರಿಶೀಲಿಸಿದಾಗ ಸ್ಥಳೀಯ ಕಾಲೇಜೊಂದರ ತ್ಯಾಜ್ಯ ನೀರು ಸೇರಿರುವುದು ಖಚಿತವಾದ ಬಳಿಕ ಗ್ರಾ.ಪಂ. ವತಿಯಿಂದ 2 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ಮೆಸ್ಕಾಂನ ಸ. ಕಾ. ಎಂಜಿನಿಯರ್‌ ಮನೆಗೆ ಎಸಿಬಿ ದಾಳಿ
ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿರುವ ದೂರಿನ ಹಿನ್ನೆಲೆಯಲ್ಲಿ ಮೆಸ್ಕಾಂನ ಸ. ಕಾ. ಎಂಜಿನಿಯರ್‌ ದಯಾಳ್‌ ಸುಂದರ್‌ ರಾಜ್‌ ಅವರ ಮಂಗಳೂರು ಮತ್ತು ಮೈಸೂರಿನ ಮನೆ ಹಾಗೂ ಮಂಗಳೂರಿನ ಕಚೇರಿ ಮೇಲೆ ಮಾ. 17ರಂದು ಎಸಿಬಿ ದಾಳಿ ನಡೆಸಿತ್ತು.

ಮನೆಬಾಗಿಲಿಗೆ ಜನನ/ಮರಣ ಪ್ರಮಾಣಪತ್ರ
ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಜನನ/ಮರಣ ಪ್ರಮಾಣ ಪತ್ರಗಳನ್ನು ಅಂಚೆಯಣ್ಣನ ಮೂಲಕ ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಟ ಸೇವೆಯನ್ನು ಮಾ. 21ರಂದು ಆರಂಭಗೊಳಿಸಲಾಗಿತ್ತು.

Advertisement

ಭಾಗವತ ಪ್ರಸಾದ್‌ ಬಲಿಪ ನಿಧನ
ತೆಂಕುತಿಟ್ಟು ಯಕ್ಷಗಾನದ ಬಲಿಪ ಪರಂಪರೆಯ ಸಮರ್ಥ ಕೊಂಡಿ, ವಿಶ್ರಾಂತ ಜೀವನದಲ್ಲಿರುವ ಬಲಿಪ ನಾರಾಯಣ ಭಾಗವತರ ಪುತ್ರ, ಭಾಗವತ ಪ್ರಸಾದ್‌ ಬಲಿಪ (46) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎ. 11ರಂದು ನಿಧನ ಹೊಂದಿದ್ದರು.

 ಗ್ರಾ.ಪಂ.ಗಳಿಗೆ ಸ್ವತ್ಛ ವಾಹಿನಿಗಳ ಹಸ್ತಾಂತರ
ದ.ಕ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಗ್ರಾ.ಪಂ.ಗಳಿಗೆ ಘನತ್ಯಾಜ್ಯ ವಿಲೇವಾರಿಗೆ 53 ವಾಹನ‌(ಸ್ವತ್ಛ ವಾಹಿನಿ)ಗಳನ್ನು ಹಸ್ತಾಂತರಿಸಲಾಗಿತ್ತು. ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮಂಗಳೂರಿನ ಕೆಪಿಟಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀಲಿಕೈ ಹಸ್ತಾಂತರಿಸಿದ್ದರು.

ಶ್ರೀ ಬಾಲಾಂಜನೇಯ ಜಿಮ್ನಾಶಿಯಂಗೆ ಪ್ರಶಸ್ತಿ
2020-21ನೇ ಸಾಲಿನ ಏಕಲವ್ಯ, ಕ್ರೀಡಾರತ್ನ, ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಹಾಗೂ 2021-22ನೇ ಸಾಲಿನ ಕ್ರೀಡಾಪೋಷಕ ಸಂಸ್ಥೆಗಳ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು. ಮಂಗಳೂರಿನ ಶ್ರೀ ಬಾಲಾಂಜನೇಯ ಜಿಮ್ನಾಶಿಯಂಗೆ ಕ್ರೀಡಾಪೋಷಕ ಪ್ರಶಸ್ತಿ ಲಭಿಸಿತ್ತು. ಈ ಸಂಸ್ಥೆಯು ಪವರ್‌ ಲಿಫ್ಟಿಂಗ್‌, ವೇಟ್‌ಲಿಫ್ಟಿಂಗ್‌, ದೇಹದಾಡ್ಯì ಸಹಿತ ವ್ಯಾಯಾಮ ಸಂಬಂಧಿತ ಹಲವು ಕ್ರೀಡೆಗಳಲ್ಲಿ ಕ್ರೀಡಾಳುಗಳಿಗೆ ತರಬೇತಿ ನೀಡುತ್ತಿದೆ.

 ದ.ಕ. ಜಿ.ಪಂ.ಗೆ ಕೇಂದ್ರದ ಪ್ರಶಸ್ತಿ
ಕೇಂದ್ರ ಸರಕಾರದ ಪಂ.ರಾಜ್‌ ಸಚಿವಾಲಯ ನೀಡುವ “ದೀನ್‌ದಯಾಳ್‌ ಉಪಾಧ್ಯಾಯ ಪಂಚಾಯತ್‌ ಸಶಕ್ತೀಕರಣ ಪುರಸ್ಕಾರ – 2022’ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಪಾತ್ರವಾಗಿತ್ತು. ಉಳ್ಳಾಲ ತಾಲೂಕಿನ ಮುನ್ನೂರು ಗ್ರಾ.ಪಂ. ಕೂಡ ಈ ಪುರಸ್ಕಾರಕ್ಕೆ ಪಾತ್ರವಾಗಿತ್ತು.

ಎಂಟು ಮಂದಿ
ಪೊಲೀಸರಿಗೆ ಮುಖ್ಯಮಂತ್ರಿ ಪದಕ
ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಎಸಿಪಿ ಎಂ.ಎ. ನಟರಾಜ್‌ ಸಹಿತ ಎಂಟು ಮಂದಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದರು. ಎಸಿಪಿ ಎಂ.ಎ. ನಟರಾಜ್‌, ಪಿಎಸ್‌ಐ ವನಜಾಕ್ಷಿ ಕೆ., ಪಿಎಸ್‌ಐ ಪ್ರದೀಪ ಟಿ.ಆರ್‌., ಎಎಸ್‌ಐ ಕುಶಾಲ್‌ ಮಣಿಯಾಣಿ, ಪಿಎಸ್‌ಐ ಶೋಭಾ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಇಸಾಕ್‌, ಹೆಡ್‌ ಕಾನ್‌ಸ್ಟೆಬಲ್‌ ಹರಿಪ್ರಸಾದ್‌ ಹಾಗೂ ಗೃಹರಕ್ಷಕ ದಳದ ದ.ಕ. ಜಿಲ್ಲಾ ಪ್ಲಟೂನ್‌ ಕಮಾಂಡರ್‌ ಮಾರ್ಕ್‌ ಸೆರಾ ಪದಕಕ್ಕೆ ಪಾತ್ರರಾಗಿದ್ದರು.

ಭೂಮಿಪೂಜೆ
1837ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಹುತಾತ್ಮರಾದ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆ ಹಿನ್ನೆಲೆಯಲ್ಲಿ ಬಾವುಟಗುಡ್ಡೆ ಠಾಗೋರ್‌ ಉದ್ಯಾನ ವನದಲ್ಲಿ ಭೂಮಿಪೂಜೆ ನೆರವೇರಿತು.

ಪೊಳಲಿಗೆ ಸಿಎಂ ಭೇಟಿ
ಮುಖ್ಯಮಂತ್ರಿ ಬೊಮ್ಮಾಯಿ ಅವರು ಎ. 12ರ ರಾತ್ರಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದರು. ಕ್ಷೇತ್ರದ ಅಭಿವೃದ್ಧಿ ಹಾಗೂ ಸುಸಜ್ಜಿತ ಗೋಶಾಲೆ ನಿರ್ಮಾಣಕ್ಕಾಗಿ ಅನುದಾನ ನೀಡುವ ಭರವಸೆ ಯನ್ನು ಅವರು ನೀಡಿದ್ದರು.

ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾದ ಧರ್ಮಸ್ಥಳ ಉಚಿತ ಸಾಮೂಹಿಕ ವಿವಾಹ
ಶ್ರೀ ಕ್ಷೇತ್ರ ಧರ್ಮಸ್ಥಳದ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಎ.27ರಂದು 183 ಜೋಡಿಗಳ ಸರಳ ವಿವಾಹ ನೆರವೇರಿತು.

ನಾರಾಯಣಗುರು ವೃತ್ತ
ಮಂಗಳೂರಿನ ಲೇಡಿಹಿಲ್‌ ಶಾಲೆ ಬಳಿಯಿರುವ ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂದು ಎ. 14ರಂದು ಅಧಿಕೃತವಾಗಿ ನಾಮಕರಣ ಮಾಡಲಾಗಿತ್ತು. ಸಚಿವ ವಿ. ಸುನಿಲ್‌ ಕುಮಾರ್‌, ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ನಾಮಫ‌ಲಕವನ್ನು ಅನಾವರಣಗೊಳಿಸಿದ್ದರು.

ಮಂಗಳೂರು ವಿ.ವಿ. ಘಟಿಕೋತ್ಸವ
ಮಂಗಳೂರು ವಿಶ್ವವಿದ್ಯಾನಿಲಯದ 40ನೇ ವಾರ್ಷಿಕ ಘಟಿಕೋತ್ಸವ ಎ. 23ರಂದು ನಡೆದಿತ್ತು. ಸಮಾಜಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ, ಸಾಹಿತ್ಯ ಸೇವೆಗಾಗಿ ಹರಿಕೃಷ್ಣ ಪುನರೂರು ಮತ್ತು ತುಳು ನಾಟಕ-ಸಿನೆಮಾ ಕ್ಷೇತ್ರದ ಸಾಧನೆಗಾಗಿ ದೇವದಾಸ್‌ ಕಾಪಿಕಾಡ್‌ ಅವರಿಗೆ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಯಿತು.

ಈರ್ವರು ಸಮುದ್ರಪಾಲು ಅಜ್ಜನ ಉತ್ತರಕ್ರಿಯೆ ನಡೆಸಿ
ಅಸ್ಥಿ ವಿಸರ್ಜನೆಗೆಂದು ಕುಟುಂಬದ ಜತೆ ಬಂದಿದ್ದ ಯುವತಿಯರಿಬ್ಬರು ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿ ಮೃತಪಟ್ಟ ಘಟನೆ ಎ. 10ರಂದು ಸಂಭವಿಸಿತ್ತು. ಮಂಗಳೂರು ಶಕ್ತಿನಗರದ ವೈಷ್ಣವಿ (21), ಬೆಂಗಳೂರಿನ ತೃಷಾ (15) ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದಾಗ ರಭಸವಾಗಿ ಬಂದ ಅಲೆಗೆ ಆಯತಪ್ಪಿ ಮುಳುಗಿ ಸಮುದ್ರಪಾಲಾಗಿದ್ದರು.

ಅಂಗಾಂಗ ದಾನ
ಮಂಗಳೂರಿನ ಬಲ್ಲಾಳ್‌ಬಾಗ್‌ ಜಂಕ್ಷನ್‌ನಲ್ಲಿ ಎ. 9ರಂದು ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್‌ ಸವಾರೆ ಪ್ರೀತಿ ಮನೋಜ್‌(47) ಅವರ ಮೆದುಳು ಎ.23ರಂದು ನಿಷ್ಕ್ರಿಯಗೊಂಡಿತ್ತು. ಆಕೆಯ ಅಂಗಾಂಗಗಳನ್ನು ಕುಟುಂಬದ ಸದಸ್ಯರು ದಾನ ಮಾಡಿದ್ದರು.

ಮಳಲಿ: ದೇವಸ್ಥಾನ ಹೋಲುವ ಮಸೀದಿ
ಮಂಗಳೂರು ತಾಲೂಕಿನ ಗಂಜಿಮಠ ಗ್ರಾ.ಪಂ. ವ್ಯಾಪ್ತಿಯ ಮಳಲಿ ಪೇಟೆಯ ಮಸೀದಿ ಸ್ಥಳದಲ್ಲಿ ದೇವ ಸ್ಥಾನದ ಮಾದರಿಯನ್ನು ಹೋಲುವ ರಚನೆ ಎ. 21 ರಂದು ಕಾಣಿಸಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಮಸೀದಿಯನ್ನು ನವೀಕರಿಸುವ ಉದ್ದೇಶಕ್ಕಾಗಿ ಇಲ್ಲಿ ಕಾಮಗಾರಿಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವು ಭಾಗಗಳನ್ನು ಕೆಡವಲಾಗಿತ್ತು. ಈ ಸಂದರ್ಭ ದೇಗುಲ ಮಾದರಿಯ ರಚನೆ ಕಾಣಿಸಿದ್ದು, ಈ ವಿಚಾರ ವ್ಯಾಪಕವಾಗಿ ಹರಡಿ ಸ್ಥಳಕ್ಕೆ ಸಾರ್ವಜನಿಕರು, ಸಂಘ ಟನೆಗಳು ಮತ್ತು ಪೊಲೀಸರು ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next