Advertisement

ಹುಲಿಯನ್ನು ಮಾಯ ಮಾಡಿದ ಹುಡುಗಿ

06:00 AM Oct 05, 2017 | Team Udayavani |

“ಸ್ವರ್ಣಪುರ’ ರಾಜ್ಯದಲ್ಲಿ ಸ್ವರ್ಣರಾಜನೆಂಬ ಅರಸನಿದ್ದ. ಅವನ ಬಳಿ ರಾಜಪ್ಪನೆಂಬ ಸೇವಕನಿದ್ದ. ಅವನು, ರಾಜನ ಮಕ್ಕಳನ್ನು ರಥದಲ್ಲಿ ಶಾಲೆಗೆ ಕರೆದೊಯ್ದು ಅರಮನೆಗೆ ವಾಪಸ್‌ ಕರೆತರುವ ಕೆಲಸವನ್ನು ಮಾಡುತ್ತಿದ್ದ. ರಾಜಪ್ಪನಿಗೆ ಸ್ವರ್ಣ ಎಂಬ ಹೆಸರಿನ ಮಗಳಿದ್ದಳು. ಅವಳು ತುಂಬಾ ಬುದ್ಧಿವಂತೆ. ಅವಳಿಗೆ ತಾನೂ ರಥದಲ್ಲಿ ಕುಳಿತು ರಾಜರ ಮಕ್ಕಳ ಜೊತೆ ಶಾಲೆಗೆ ಹೋಗಬೇಕೆಂಬ ಆಸೆ. ಆದರೆ ಮಗಳ ಆಸಕ್ತಿಗೆ ಸಹಾಯ ಮಾಡಲಾಗದ ಕುರಿತು ರಾಜಪ್ಪನಿಗೆ ಬೇಸರವಿತ್ತು. 

Advertisement

ಒಂದು ದಿನ ಆ ಊರಿಗೆ ಒಬ್ಬ ಹುಲಿಯ ಜೊತೆ ಬಂದ. ಬಂದವನು ರಾಜರಿಗೊಂದು ಸವಾಲು ಹಾಕಿದ. “ಪಂಜರದ ಬಾಗಿಲು ತೆಗೆಯದೆ ಹುಲಿಯನ್ನು ಹೊರಬಿಡಬೇಕು. ಅಥವಾ ಹುಲಿ, ಪಂಜರದಿಂದ ಮಾಯವಾಗುವಂತೆ ಮಾಡಬೇಕು. ಹಾಗೆ ಮಾಡದಿದ್ದರೆ ಸೋತು ನನಗೆ ರಾಜ್ಯ ಬಿಡಬೇಕು.’ ಎಂದು ಊರಿಡೀ ಡಂಗುರ ಸಾರಿದ. ರಾಜನ ಸುದ್ದಿ ಮುಟ್ಟಿತು. ಮಂತ್ರಿಗಳು, ಸೈನಿಕರು, ಜಟ್ಟಿಗಳು, ಬೇಟೆಗಾರರನ್ನು ಅದೇನೆಂದು ನೋಡಿಕೊಂಡು ಬರಲು ಕಳಿಸಿದ. ಅವರೆಲ್ಲರೂ ಹುಲಿ ಕಂಡು ಹೆದರಿದರು. ಯಾರೊಬ್ಬರೂ ಅದರ ಹತ್ತಿರಕ್ಕೂ ಹೋಗುವ ಧೈರ್ಯ ಮಾಡಲಿಲ್ಲ. ರಾಜನಿಗೆ ತನ್ನ ಹೆಸರನ್ನು ಹೇಗೆ ಉಳಿಸಿಕೊಳ್ಳುವುದೆಂದು ಚಿಂತೆಯಾಯಿತು. ಆಗ ಅಲ್ಲಿಗೆ ಬಂದಳು ಸ್ವರ್ಣ. ತಾನು ಆ ಸವಾಲನ್ನು ಸ್ವೀಕರಿಸುತ್ತೇನೆ ಎಂದಳು. ರಾಜನಿಗೆ ಆಶ್ಚರ್ಯವಾಯಿತು. ರಾಜಪ್ಪ “ಇದೇನಿದು ನಿನ್ನ ಹುಚ್ಚಾಟ’ ಎಂದು ತಡೆದನು. ಆದರೆ ಸ್ವರ್ಣ ರಾಜನ ಹೆಸರನ್ನು ತಾನು ಉಳಿಸಿಯೇ ತೀರುವೆನೆಂದು ಭರವಸೆ ನೀಡಿದಾಗ ರಾಜ ಸಮ್ಮತಿಸಿದನು. 

ಜನರೆಲ್ಲರೂ ಅಂದು ಮೈದಾನದಲ್ಲಿ ನೆರೆದರು. ಮಧ್ಯದಲ್ಲಿ ಪಂಜರ ಇಡಲಾಗಿತ್ತು. ಪಂಜರವನ್ನು ಅರ್ಧಂಬರ್ಧ ಬಟ್ಟೆಯಿಂದ ಮುಚ್ಚಲಾಗಿತ್ತು. ಹುಲಿಯ ಘರ್ಜನೆ ಕೇಳಿಯೇ ಜನರು ಬೆಚ್ಚಿದರು. ಪುಟ್ಟ ಹುಡುಗಿ ಏನು ಮಾಡುವಳ್ಳೋ ಎಂದು ಕನಿಕರ ಪಟ್ಟರು. ಎಲ್ಲರೂ ನೋಡುತ್ತಿದ್ದಂತೆಯೇ ಸ್ವರ್ಣ ಹುಲಿ ಹತ್ತಿರ ಹೋದಳು. ಒಂದೆರಡು ಸುತ್ತು ಬಂದ ಸ್ವರ್ಣ ಪಂಜರದ ಸುತ್ತ ಬೆಂಕಿಯನ್ನು ಹಚ್ಚಿದಳು. ಜನರಿಗೆ ಅವಳು ಏನು ಮಾಡುತ್ತಿದ್ದಾಳೆಂದೇ ತಿಳಿಯಲಿಲ್ಲ. ಏನಾದರೂ ಮಂತ್ರ ತಂತ್ರವನ್ನು ಪ್ರಯೋಗಿಸುತ್ತಿದ್ದಾಳೆಯೇ ಎಂದು ಪಂಜರದತ್ತಲೇ ಎಲ್ಲರು ಕಣ್ಣುಗಳನ್ನು ನೆಟ್ಟಿದ್ದರು. ಪಂಜರದ ಬಟ್ಟೆಯನ್ನು ಪೂರ್ತಿ ಸರಿಸಿದಾಗ ಹುಲಿ ಪಂಜರದಲ್ಲಿರಲಿಲ್ಲ. ಅದನ್ನು ಕಂಡು ಜನರು ಹೌಹಾರಿದರು. ಕಣ್ಣೆದುರೇ ಹುಲಿಯನ್ನು ಮಾಯ ಮಾಡಿ ರಾಜನ ಹೆಸರನ್ನುಳಿಸಿದ ಸ್ವರ್ಣಳನ್ನು ಕುರಿತು ಹರ್ಷೋದ್ಗಾರ ಮಾಡಿದರು. 

ಹುಲಿಯನ್ನು ಮಾಯ ಮಾಡಿದ್ದು ಹೇಗೆಂಬ ಪ್ರಶ್ನೆ ರಾಜರನ್ನೂ ಕೊರೆಯುತ್ತಿತ್ತು. ಅವರು ಕೇಳಿದಾಗ ಸ್ವರ್ಣ ಆ ರಹಸ್ಯವನ್ನು ಬಿಚ್ಚಿಟ್ಟಳು. “ನಾನು ಪಂಜರದ ಸುತ್ತ ಸುತ್ತಿದರೂ ಆ ಹುಲಿ ಜನರನ್ನೇ ನೋಡುತ್ತಿತ್ತು. ನನ್ನತ್ತ ದೃಷ್ಟಿಯನ್ನು ಹಾಯಿಸಲೇ ಇಲ್ಲ. ನೀವೆಲ್ಲರೂ ಅದರ ಸದ್ದು ಕೇಳಿಯೇ ಭಯಪಟ್ಟಿದ್ದಿರಿ. ಆದರೆ ವಿಷಯವೇನೆಂದರೆ ಅದು ನಿಜವಾದ ಹುಲಿಯಾಗಿರಲಿಲ್ಲ. ಘರ್ಜನೆ ಸದ್ದನ್ನು ಮನುಷ್ಯನೇ ಹೊರಡಿಸುತ್ತಿದ್ದ. ಇದು ನನಗೆ ತಿಳಿಯಿತು.’. “ಅದು ಸರಿ, ನಕಲಿಯಾದರೂ, ಅದನ್ನು ಪಂಜರದಿಂದ ಹೇಗೆ ಮಾಯ ಮಾಡಿದೆ?’ ಎಂದು ಕೇಳಿದ ರಾಜ. ಸ್ವರ್ಣ, ಆ ರಹಸ್ಯವನ್ನೂ ಬಿಚ್ಚಿಟ್ಟಳು “ರಾಜರೇ, ಅದು ಮೇಣದಿಂದ ತಯಾರಿಸಲಾಗಿದ್ದ ಹುಲಿಯ ಮೂರ್ತಿಯಾಗಿತ್ತು. ಅದಕ್ಕೇ ಸುತ್ತಲೂ ಬೆಂಕಿಯನ್ನು ಹಚ್ಚಿದೆ. ಅದರ ಶಾಖಕ್ಕೆ ಮೇಣ ಕರಗಿತು. ಹುಲಿ ಮಾಯವಾಯಿತು’ ಎಂದು ನಕ್ಕಳು. ಅವಳ ಬುದ್ಧಿವಂತಿಕೆಗೆ ತಲೆದೂಗಿದ ರಾಜ “ಭೇಷ್‌ ಸ್ವರ್ಣ. ಮೆಚ್ಚಿದೆ ನಿನ್ನ ಬುದ್ಧಿವಂತಿಕೆಯನ್ನು. ನಿನಗೇನು ಬಹುಮಾನ ಬೇಕೋ ಕೇಳು’ ಎಂದನು ಸಂತೃಪ್ತನಾಗಿ. ಇದೇ ಸರಿಯಾದ ಸಮಯವೆಂದು ಸ್ವರ್ಣ ತನಗೆ ರಾಜಕುಮಾರರ ಜೊತೆ ರಥದಲ್ಲಿ ಕುಳಿತು ಶಾಲೆಗೆ ಹೋಗಲು ಅವಕಾಶ ಮಾಡಿಕೊಡಬೇಕೆಂದು ಕೇಳಿದಳು. ರಾಜ ಸ್ವರ್ಣಾಳ ಕೋರಿಕೆಯನ್ನು ಪೂರೈಸಿದ.

– ಲಲಿತಾ ಕೆ. ಹೊಸಪ್ಯಾಟಿ, ಹುನಗುಂದ

Advertisement
Advertisement

Udayavani is now on Telegram. Click here to join our channel and stay updated with the latest news.

Next