ಇಣುಕಿ ನೋಡಬಾರದು ಚೀಲದೊಳಗಿನ ಲೋಕವ’- ಎನ್ನುವ ವೈದೇಹಿಯವರ ಕವನ ಹೆಣ್ಣು ಮಕ್ಕಳ ಭಾವನೆಗೆ ಹಿಡಿದ ಕನ್ನಡಿ. ಪ್ರತಿಯೊಬ್ಬ ಹೆಣ್ಣು ಮಗಳು ತನ್ನ ವಸ್ತುಗಳ ಮೇಲೆ ಒಂದು ರೀತಿಯ ಬಂಧವನ್ನು ಬೆಸೆದುಕೊಂಡಿರುತ್ತಾಳೆ. ಅದಕ್ಕೆ ನಾನೂ ಕೂಡ ಹೊರತಲ್ಲ. ನನಗೆ ಎಲ್ಲ ವಸ್ತುಗಳಿಗಿಂತಲೂ ಬ್ಯಾಗ್ ಮೇಲೆ ಸ್ವಲ್ಪ ಜಾಸ್ತಿನೇ ಪ್ರೀತಿ.
ಹುಡುಗರಿಗಿಂತಲೂ ಹುಡುಗಿಯರಿಗೆ ಬ್ಯಾಗ್ ಮೇಲೆ ಸ್ವಲ್ಪ ಜಾಸ್ತಿನೇ ಭಾಂದವ್ಯ ಬೆಸೆದುಕೊಡಿರುತ್ತದೆ. ಹುಡುಗಿಯರಿಗೆ ಯಾರು ಕೈ ಕೊಟ್ರಾ ಈ ಬ್ಯಾಗ್ ಮಾತ್ರ ಕೈ ಕೊಡಲ್ಲ. ಯಾರು ಗೆಳೆಯರಿಲ್ಲದಾಗ, ಒಂಟಿಯಾಗಿದ್ದಾಗ ಬ್ಯಾಗನೊಮ್ಮೆ ಎದೆಗೆ ಅಪ್ಪಿಕೊಂಡು ಕುಳಿತರೆ ನಿರಾಳತೆ ಮೂಡುತ್ತದೆ. ಒಂದು ರೀತಿಯಲ್ಲಿ ಒಳ್ಳೆಯ ಸ್ನೇಹಿತನೇ ಅನ್ನಬಹುದು, ಈ ಬ್ಯಾಗ್. ಹೆಣ್ಣಿನ ಎಲ್ಲಾ ರಹಸ್ಯಗಳನ್ನು ಬ್ಯಾಗ್ ತನ್ನ ಒಡಲಲ್ಲಿ ತುಂಬಿಟ್ಟುಕೊಂಡಿರುತ್ತದೆ. ತನಗೆ ಬೇಕಾದದ್ದು, ಬೇಡದನ್ನು ಎಲ್ಲಾ ಬ್ಯಾಗ್ ಎಂಬ ಸ್ನೇಹಿತ ತುಂಬಿಸಿ ಇಟ್ಟುಕೊಳ್ಳುತ್ತದೆ.
ಇನ್ನು ಹುಡುಗಿರ ಬ್ಯಾಗ್ ಕಲೆಕ್ಷನ್ ನೋಡಬೇಕಂದ್ರೆ ಕಾಲೇಜು ಆರಂಭ ಆಗೋ ಜೂನ್ ತಿಂಗಳು ಬರಬೇಕು. ಎಲ್ಲಾ ಅಂಗಡಿಗಳಲ್ಲಿ ಹುಡುಗಿಯರೇ ತುಂಬಿಕೊಂಡಿರುತ್ತಾರೆ. ಒಬ್ಬೊರದು ಅದೊಂದು ರೀತಿಯ ಅಭಿರುಚಿ. ಕೆಲವರಿಗೆ ಸೈಡ್ ಬ್ಯಾಗ್ ಇಷ್ಟ ಆದ್ರೆ, ಕೆಲವರಿಗೆ ಸ್ಕೂಲ್ ಬ್ಯಾಗ್, ಇನ್ನು ಕೆಲವರಿಗೆ ಬ್ರಾಂಡೆಡ್ ಬ್ಯಾಗ್‌ಗಳೇ ಬೇಕು.ಹೊಸದಾಗಿ ಖರೀದಿಸಿದ ಬ್ಯಾಗ್‌ನ್ನು ಸ್ನೇಹಿತರಿಗೆ ತೋರಿಸಿ ಖುಷಿ ಪಡೋ ಗೆಳೆಯರಿಗೇನೂ ಕಡಿಮೆ ಇಲ್ಲ. ಕಲರ್‌ಕಲರ್ ಬ್ಯಾಗ್‌ಗಳನ್ನು ಕಾಲೇಜಿನಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ಒಂದು ಸೈಡ್‌ಗೆ ಬ್ಯಾಗ್‌ಗಳನ್ನು ಹಾಕಿಕೊಂಡು ಸ್ಟೈಲ್ ಆಗಿ ಓಡಾಡೋ ಹುಡುಗಿಯರ ದೃಶ್ಯ ಕಣ್ಣು ಕುಕ್ಕುವಂತಿರುತ್ತದೆ.
ಯಾರೇ ಆದ್ರೂ ಬ್ಯಾಗ್ ಇಟ್ಕೊಂಡು ಹೊರಡುತ್ತಿದ್ದಾರೆ ಅಂದ್ರೆ ಎಲ್ಲಗೋ ಹೊರಡುತ್ತಿದ್ದಾರೆ ಅಂತಲೇ ಅರ್ಥ. ವಿಭಿನ್ನ ರೀತಿಯ ಬ್ಯಾಗ್‌ಗಳು ಇರುವುದರಿಂದ ಕೆಲವು ಗೆಳೆಯರನ್ನು ಅವರ ಬ್ಯಾಗ್ ನೋಡಿಯೇ ಗುರುತು ಹಿಡಿಯಲು ಸಹಾಯಕವಾಗುತ್ತದೆ. ಇನ್ನು ಬುರ್ಖಾ ಹಾಕೋ ಸ್ನೇಹಿತರನ್ನು ಕಂಡುಹಿಡಿಯಲು ಇರುವ ಸುಲಭದ ದಾರಿ ಈ ಬ್ಯಾಗ್.
ಕೆಲವು ಹುಡುಗಿಯರ ಬ್ಯಾಗ್ ಮೇಲಿನ ಪ್ರೀತಿ ವ್ಯಕ್ತವಾಗುವುದು ಬಸ್‌ನಲ್ಲಿ. ಕಾಲೇಜು ಬಿಟ್ಟ ತಕ್ಷಣ ನಾ ಮುಂದು ತಾ ಮುಂದು ಅಂತ ಸ್ಪರ್ಧೆಗೆ ಬಿದ್ದವರ ತರ ಪಟ್ಟು ಬಿದ್ದು ಹತ್ತಿದ್ರೆ ಬಸ್‌ನಲ್ಲಿ ಸೀಟ್ ಇರೋದೆ ಇಲ್ಲ. ಆಗ ಈ ನಮ್ಮ ಪ್ರೀತಿಯ ಬ್ಯಾಗನ್ನು ಚೆನ್ನಾಗಿ ಇಟ್ಟುಕೊಳ್ಳುವವರಿಗೆ ಕೊಡೋಣ ಅಂದ್ರೆ ಒಬ್ಬೊಬ್ಬರ ಮುಖ ಒಂದೊಂದು ತರ ಆಗಿರುತ್ತವೆ. ಆದರೂ ಹೇಗೋ ಆಯ್ಕೆ ಮಾಡಿ ಒಬ್ಬರಿಗೆ ಕೊಟ್ಟು ಬಿಡುತ್ತೇವೆ. ನಮಗೆ ಜಾಗ ಇಲ್ಲದಿದ್ದರೂ ಪರವಾಗಿಲ್ಲ ಬ್ಯಾಗ್‌ಗೊಂದು ಜಾಗ ಬೇಕು ಅನ್ನೋದು ನಮ್ಮ ಕಾಳಜಿ.
ಎಲ್ಲರೂ ಸಾಮಾನ್ಯವಾಗಿ ನೋಡೋ ಬ್ಯಾಗ್‌ನೊಳಗೆ ಅದಷ್ಟೊ ಹುಡುಗಿಯರ ಮನಸ್ಸುಗಳ ಅಂತರಂಗದ ಪ್ರೀತಿ ತುಂಬಿರುತ್ತದೆ. ಕೆಲ ಹುಡುಗಿಯರ ಪಾಲಿಗೆ ಬ್ಯಾಗ್ ಉತ್ತಮ ಸ್ನೇಹಿತ ಅಂದರೂ ತಪ್ಪಾಗಲಿಕ್ಕಿಲ್ಲ. ನನಗಂತೂ ನನ್ನ ಬ್ಯಾಗ್ ಮೇಲೆ ತುಂಬಾ ಪ್ರೀತಿ. ನನ್ನ ಅದೆಷ್ಟೋ ಒಂಟಿತನದ ಸಮಯದಲ್ಲಿ ಬ್ಯಾಗ್ ಹೆಗಲಲ್ಲೇ ಸ್ನೇಹಿತನಂತೆ ಕೂತಿರುತ್ತದೆ. ಹೆಗಲಲ್ಲೇ ಇರುವ ಈ ಮೂಕ ಸ್ನೇಹಿತನಿಗೆ ಇದೋ ಒಂದು ಥ್ಯಾಂಕ್ಸ್.
ಯಕ್ಷಿತಾ
ತೃತೀಯ ಬಿಎ ಎಸ್‌ಡಿಎಂ ಕಾಲೇಜು, ಉಜಿರೆ