Advertisement
ಈ ಹಿಂದೆ ಎರಡು ದಿನಕ್ಕೆ ಸೀಮಿತವಾಗಿದ್ದ ಮಕ್ಕಳ ಹಬ್ಬವನ್ನು ಈ ಬಾರಿ 4 ದಿನಗಳ ಕಾಲ ಅದ್ಧೂರಿಯಾಗಿ ನಡೆಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ತೀರ್ಮಾನಿಸಿದ್ದು, ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಹಯಬ್ಬಕ್ಕೆ ಅಂದಾಜು 2 ಕೋಟಿ ರೂ. ವೆಚ್ಚವಾಗಲಿದ್ದು, ನ.11ರಿಂದ 14ರವರೆಗೆ ಕಬ್ಬನ್ ಪಾರ್ಕ್‌ನಲ್ಲಿ ಮಕ್ಕಳ ಕಲರವ ಕೇಳಿಬರಲಿದೆ.
Related Articles
Advertisement
ನಗರ ಪ್ರದೇಶಗಳಲ್ಲಿ ವಿಡಿಯೋ ಗೇಮ್, ಮೊಬೈಲ್, ಟಿವಿಗಳಲ್ಲಿ ಮುಳುಗಿ ಹೋದ ಮಕ್ಕಳಿಗೆ ಮರೆತೇ ಹೋಗಿರುವ ಎತ್ತಿನ ಬಂಡಿಯ ಸವಾರಿ, ಕುದುರೆ ಟಾಂಗಾ ಸವಾರಿ, ಚಿತ್ರಬಿಡಿಸುವುದು, ಗಿಲ್ಲಿದಾಂಡು, ಲಗೋರಿ, ಕುಸ್ತಿ, ಬುಗುರಿ, ಚೌಕಾಬಾರ, ಮಲ್ಲಕಂಬ, ಚಿಣ್ಣೆಮಣೆ, ಸೈಕಲ್ ಟೈರ್ ಸ್ಪರ್ಧೆ, ಕವಡೆ ಆಟ ಸೇರಿದಂತೆ ಹಲವು ಗ್ರಾಮೀಣ ಸೊಗಡಿನ ಆಟಗಳನ್ನು ಪರಿಚಯಿಸಲಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಪರಿಚಯ, ಬಿಇಎಲ್, ಎಚ್‌ಎಎಲ್, ಜವಾಹರ ನೆಹರು ತಾರಾಲಯದಿಂದ ವಿಜ್ಞಾನ, ತಂತ್ರಜ್ಞಾನದೊಂದಿಗೆ ಖಗೋಳಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಬ್ಯಾಂಡ್‌ಸ್ಟಾಂಡ್ ಮತ್ತು ಬಾಲಭವನದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಕಲಾವಾದ್ಯ, ನೃತ್ಯ, ಜನಪದ ಕುಣಿತ ಇರಲಿದೆ.
ಫಲಪುಷ್ಪ ಪ್ರದರ್ಶನ: ತೋಟಗಾರಿಕೆ ಇಲಾಖೆ ವತಿಯಿಂದ ಕಬ್ಬನ್‌ಪಾರ್ಕ್‌ನಲ್ಲಿ ನಾಲ್ಕೂ ದಿನ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಜತೆಗೆ ಮಹಡಿ ಉದ್ಯಾನವನ, ಕಿಚನ್ ಗಾರ್ಡನ್, ಅಣಬೆ ಬೇಸಾಯ, ಗಿಡ ನೆಟ್ಟು ಬೆಳೆಸುವ ಬಗ್ಗೆ ಪ್ರಾತ್ಯಕ್ಷಿಕೆ, ಮಕ್ಕಳಿಗಾಗಿ ಕ್ವಿಜ್ ಕೂಡ ಇರಲಿದೆ. ಮೀನುಗಾರಿಕೆ ಇಲಾಖೆ ಅಕ್ವೇರಿಯಂ, ಮೀನುಗಳ ಪರಿಚಯ ಮಾಡಿಸಲಿದೆ.
ಅರಣ್ಯ ಇಲಾಖೆಯು ಪ್ರಾಣಿಗಳ ಮಾದರಿಗಳನ್ನು ಪ್ರದರ್ಶಿಸಲಿದ್ದು, ನಕಲಿ ಅರಣ್ಯ ಸೃಷ್ಟಿಸಲಿದೆ. ಅರಣ್ಯ ಮತ್ತು ವನ್ಯಮೃಗಗಳ ಸಂರಕ್ಷಣೆ ಕುರಿತು ಅರಿವು ಹಾಗೂ ಸೇನಾ ವಾಹನಗಳು, ಆಹಾರ ಇಲಾಖೆಯಿಂದ ಪೌಷ್ಠಿಕಾಂಶ ಆಹಾರ ಸೇವನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಸಂಚಾರ ಬಂದ್?: ನ.11 ಮತ್ತು 12ರಂದು ಸರ್ಕಾರಿ ರಜೆ ಇದ್ದು, ಕಬ್ಬನ್‌ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧ ಇರುತ್ತದೆ. ಆದರೆ, ನ.13 ಮತ್ತು 14ರಂದು ರಜೆ ಇಲ್ಲ. ಆದರೂ ಮಕ್ಕಳ ಹಬ್ಬದ ಹಿನ್ನೆಲೆಯಲ್ಲಿ ಉದ್ಯಾನದಲ್ಲಿ ವಾಹನ ಸಂಚಾರ ಬಂದ್ ಮಾಡಲು ವಿಶೇಷ ಅನುಮತಿ ಪಡೆಯಲು ತೀರ್ಮಾನಿಸಲಾಗಿದೆ.
ರಸ್ತೆಗಿಳಿಯಲಿರುವ “ಕಾವೇರಿ’: ಕಬ್ಬನ್ ಉದ್ಯಾನದಲ್ಲಿ ಮಕ್ಕಳ ಹಬ್ಬಕ್ಕೆ ವಿಶೇಷ ಅತಿಥಿ ಆಗಮಿಸಿಲಿದೆ. ಸುಮಾರು ಎರಡು ದಶಕಗಳ ಹಿಂದಿನ “ಕಾವೇರಿ’ (ಡಬ್ಬಲ್ ಡೆಕ್ಕರ್ ಬಸ್) ಅಂದು ರಸ್ತೆಗಿಳಿಯಲಿದ್ದು, ಮಕ್ಕಳು ಇದರಲ್ಲಿ ಕುಣಿದು ಕುಪ್ಪಳಿಸಬಹುದು. ವಿವಿಧ ಶಾಲೆಗಳಿಂದ ಮಕ್ಕಳನ್ನು ಕರೆತರಲು ಬಿಎಂಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
* ಸಂಪತ್ ತರೀಕೆರೆ