Advertisement

ಮದವೇರಿದ ಬಿಜೆಪಿ ನಾಯಕರಿಗೆ ತಕ್ಕಪಾಠ

06:51 PM Apr 09, 2021 | Team Udayavani |

ಸಿಂಧನೂರು: ಹಣ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಇತ್ತೀಚಿನ ಉಪಚುನಾವಣೆಗಳಲ್ಲಿ ಗೆಲುವು ಪಡೆದ ಬಿಜೆಪಿಯವರಿಗೆ ಮದವೇರಿದೆ. ಮಸ್ಕಿ ಕ್ಷೇತ್ರದಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಿ ಸೊಕ್ಕು ಇಳಿಸಲಿದ್ದಾರೆ ಎಂದು ಶಾಸಕ ಡಾ| ಯತೀಂದ್ರ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿಲ್ಲ.

Advertisement

ಕೋವಿಡ್‌ ಹೆಸರಿನಲ್ಲಿ ಹಣ ಜೇಬಿಗೆ ಇಳಿಸುತ್ತಿದ್ದಾರೆ. ಈ ಸರಕಾರ ಲೂಟಿಯಲ್ಲಿ ತೊಡಗಿಸಿಕೊಂಡಿದೆ. ವಿಜಯೇಂದ್ರ ಅವರು ಉಪಚುನಾವಣೆಗಳಲ್ಲಿ ಹಣದ ಹೊಳೆ
ಹರಿಸುತ್ತಿದ್ದಾರೆ. ಪ್ರತಾಪ್‌ಗೌಡ ಅವರಿಗೆ ನಮ್ಮ ಸರಕಾರ 2 ಸಾವಿರ ಕೋಟಿ ರೂ. ಕೊಟ್ಟರೂ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿದ್ದಾರೆ.ಅವರಿಗೆ ಮತದಾರ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಿದ್ದರಾಮಯ್ಯ ಸ್ವಜಾತಿ ವಿರೋಧಿಯಲ್ಲ: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರುಬ ಸಮುದಾಯದ ವಿರೋಧಿ  ಎಂದು
ಟೀಕಿಸುವ ಪರಂಪರೆ ಬೆಳೆಯುತ್ತಿದೆ. ಇದರಲ್ಲಿ ಹುರುಳಿಲ್ಲ. ಅವರು ಎಲ್ಲ ವರ್ಗದ ಎಳ್ಗೆಗೆ ಶ್ರಮಿಸಿದ್ದಾರೆ. ಸಿದ್ದರಾಮಯ್ಯ ಅವರೇ ಕನಕಗುರುಪೀಠ ನಿರ್ಮಿಸಿದವರು. ಸಮ್ಮಿಶ್ರ ಸರಕಾರದಲ್ಲಿ ಕುರುಬ ಸಮಾಜದ ಮೂರು ಜನರನ್ನು ಮಂತ್ರಿ ಮಾಡಿದ್ದರು. ಅನೇಕರಿಗೆ ಟಿಕೆಟ್‌ ಕೊಡಿಸಿದ್ದರು. ಕೆಲವರು ಆತುರ ನಿರ್ಧಾರ ತೆಗೆದುಕೊಂಡು ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.

ಬೊಕ್ಕಸಕ್ಕೆ ಹಾನಿ: ಮಾಜಿ ಮಂತ್ರಿ ಎಚ್‌.ಆಂಜನೇಯ ಮಾತನಾಡಿ, ಉಪಚುನಾವಣೆಗಳಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇದನ್ನು ಜನರು ಗಮನಿಸಬೇಕು. ಪ್ರತಾಪಗೌಡ ಪಾಟೀಲ್ ವಿಭೂತಿ ಹಚ್ಚಿಕೊಂಡು ಮಾರಾಟವಾಗಿದ್ದಾರೆ. ಈಗ ನಾಮ ಹಾಕಿಕೊಳ್ಳಲು ಹೊರಟಿದ್ದಾರೆ. ಅವರು ವೃದ್ಧಾಶ್ರಮ ಸೇರಿ ಬಡ್ಡಿ ವ್ಯವಹಾರ ಮಾಡುವದೇ ಲೇಸು. ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ ಅನುದಾನವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಅವರನ್ನು ಕೆಲವೊಂದು ಗ್ರಾಮಕ್ಕೆ ಜನರೇ ಬಿಟ್ಟುಕೊಳ್ಳುತ್ತಿಲ್ಲ. ಅವರಿಗೆ ಬುದ್ಧಿ ಕಲಿಸಲು ಕಾಂಗ್ರೆಸ್‌ಗೆ ಜನ ಬೆಂಬಲಿಸಬೇಕು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವ  ನಾರಾಯಣ, ಶಾಸಕ ಅನಿಲ ಚಿಕ್ಕಮಾದು, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ಮಾಜಿ ಅಧ್ಯಕ್ಷ ಎ.ವಸಂತಕುಮಾರ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಖಾಜಿ ಮಲಿಕ್‌ ವಕೀಲರು, ಪ್ರಧಾನ ಕಾರ್ಯದರ್ಶಿ ವೈ. ಅನಿಲಕುಮಾರ ಹಾಗೂ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next